Kannada NewsLatest

ಉಳ್ಳವರು ದುರ್ಬಲರ ಸಮಸ್ಯೆಗಳಿಗೆ ಸ್ಪಂದಿಸದ ಕಾರಣ ಮತಾಂತರ -ಕೋರೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  
ಸಮಾಜದ ಬಡಬಗ್ಗರ ಕಲ್ಯಾಣ ಸಾಧನೆಯೇ ಅಖಿಲ ಭಾರತ ವೀರಶೈವ ಮಹಾಸಭೆಯ ಮೊದಲ ಮತ್ತು ಅಂತಿಮ ಧ್ಯೇಯವಾಗಿದೆ. ಆರ್ಥಿಕವಾಗಿ ದುರ್ಬಲವಿರುವ ವೀರಶೈವ ಲಿಂಗಾಯತರ ಸಮಸ್ಯೆಗಳಿಗೆ ಉಳ್ಳವರು, ಸಮಾಜದಲ್ಲಿ ಎತ್ತರದ ಸ್ಥಾನದಲ್ಲಿರುವವರು ಸ್ಪಂದಿಸದ ಕಾರಣದಿಂದಾಗಿ ಅವರು ಆರ್ಥಿಕ ಸಹಾಯ ನೀಡುವ ಬೇರೆ ಧರ್ಮಗಳಿಗೆ ಮತಾಂತರಹೊಂದುತ್ತಿದ್ದಾರೆ  ಎಂದು ಅಖಿಲ ಭಾರತ ಮಹಾಸಭೆ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ರಾಜ್ಯ ಸಭಾ ಸದಸ್ಯ ಡಾ. ಪ್ರಭಾಕರ ಕೋರೆ ವಿಷಾದಿಸಿದ್ದಾರೆ.

ಅವರು ಅಖಿಲ ಭಾರತ ವೀರಶೈವ ಮಹಾಸಭೆಯ ಬೆಳಗಾವಿ ಜಿಲ್ಲಾ ಘಟಕ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕ್ಷುಲ್ಲಕ ಕಾರಣಗಳನ್ನು ಮುಂದು ಮಾಡಿ ಸಮಾಜದವರಲ್ಲಿ ಒಡಕು ವೈಷಮ್ಯವನ್ನುಂಟು ಮಾಡದೆ ಒಗ್ಗೂಡಿ ನಮ್ಮ ಸಮಾಜದ  ಸರ್ವತೋಮುಖ ಕಲ್ಯಾಣವನ್ನು ಸಾಧಿಸುವ ಧ್ಯೇಯ ಅಖಿಲ ಭಾರತ ವೀರಶೈವ ಮಹಾಸಭಾದ್ದಾಗಿದೆ. ಬೆಳಗಾವಿ ಜಿಲ್ಲಾ ಘಟಕಕ್ಕೆ ಅಧ್ಯಕ್ಷರನ್ನಾಗಿ ರತ್ನಪ್ರಭಾ ಬೆಲ್ಲದ ಅವರನ್ನು ಕೇಂದ್ರ ಸಮಿತಿಯವರು ನೇಮಕ ಮಾಡುವುದರ ಮೂಲಕ ಮಹಿಳಾ ಸಬಲೀಕರಣದ ಸಾಧನೆಯ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಅವರು ಹೇಳಿದರು.
ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ   ಬಿ.ವಿ. ಕಟ್ಟಿ, ಮಾಜಿ  ಮಹಾಪೌರ ಡಾ. ಸಿದ್ಧನಗೌಡಾ ಪಾಟೀಲ, ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ  ಕಲ್ಯಾಣರಾವ ಮುಚಳಂಬಿ ಹಾಗೂ ಬಸವ ಸಮಿತಿಯ ಅಧ್ಯಕ್ಷ  ಅರವಿಂದ ಜತ್ತಿ ಅವರು ಮಾತನಾಡಿದರು.

ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ರತ್ನಪ್ರಭಾ ಅವರು ತಾವು ಪೂರೈಸಲಿರುವ ಕ್ರಿಯಾ ಯೋಜನೆಗಳ ಸ್ವರೂಪವನ್ನು ಪ್ರಸ್ತುತ ಪಡಿಸಿದರು. ಉಪಾಧ್ಯಕ್ಷರಾಗಿ ನೇಮಕಗೊಂಡ ಬಿ. ಎನ್. ಗೌಡರ ಅವರು ಘಟಕದ ಮುಂದಿನ ಕಾರ್ಯ ಚಟುವಟಿಗಳಿಗೆ  ಸಹಕಾರ ಕೋರಿದರು.
ಸಾನಿಧ್ಯ ವಹಿಸಿದ್ದ ಕಾರಂಜಿಮಠದ  ಗುರುಸಿದ್ದ  ಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭೆಯ, ಜಿಲ್ಲಾ ಘಟಕಕ್ಕೆ ಮಹಿಳೆಯನ್ನು ಅಧ್ಯಕ್ಷೆಯನ್ನಾಗಿ ಮಾಡಿ ಮಹಿಳೆ ಉದ್ಧಾರವನ್ನು ಸಾಧಿಸಿದ ಬಸವಾದಿ ಪ್ರಮಥಕ ಪರಂಪರೆಯನ್ನು ಮುಂದುವರಿಸಿದ್ದು ಸಂತಸ ತಂದಿದೆ. ಸಂಘಟನಾ ಚತುರೆ ರತ್ನಪ್ರಭಾ ಅವರಿಂದ ಸಮಾಜದ ಕಲ್ಯಾಣ ಸಾಧಿತವಾಗಲಿ ಎಂದು ಹಾರೈಸಿ ಅಭಿನಂದಿಸಿದರು.

ಪ್ರಾರಂಭದಲ್ಲಿ ವೀಣಾ ಚಿನ್ನಣ್ಣವರ ಹಾಗೂ ಶೈಲಾ ಸಂಸುದ್ದಿ ವಚನ ಪ್ರಾರ್ಥನೆ ಮಾಡಿದರು.  ಸೋಮಲಿಂಗ ಮಾವಿನಕಟ್ಟಿ ಸ್ವಾಗತಿಸಿದರು. ಜ್ಯೊತಿ ಭಾವಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
 ರಾಜೇಶ್ವರಿ ಹಿರೇಮಠ ವಂದಿಸಿದರು, ಡಾ. ಗುರುದೇವಿ ಹುಲೆಪ್ಪನವರಮಠ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ಮಾಜಿ ಸಚಿವ  ಮಲ್ಹಾರಿಗೌಡಾ ಪಾಟೀಲ, ಮಾಜಿ ಸಂಸದ  ಎಸ್.ಬಿ. ಸಿದ್ನಾಳ, ಬಸವರಾಜ ಆಜೂರ, ಚಂದ್ರಶೇಖರ ಬೆಂಬಳಗಿ,  ಮಂಗಳಾ ಮೆಟಗುಡ್ಡ ,  ಆಶಾ ಯಮಕನಮರ್ಡಿ, ಜಾವೂರ,  ಸಿ. ಎನ್. ವಾಲಿ, ಡಾ. ಎಚ್.ಬಿ. ರಾಜಶೇಖರ  ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button