ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನ ಮಂತ್ರಿ ನಡೆಸಿದ ವಿಡಿಯೋ ಕಾನ್ಫರೆನ್ಸ್ ನ ಮುಖ್ಯಾಂಶಗಳು:
1. ಪ್ರಧಾನ ಮಂತ್ರಿಯವರು ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೊ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿ, ರಾಜ್ಯದಲ್ಲಿ ಕೋವಿಡ್ 19ರ ಪರಿಸ್ಥಿತಿ ಹಾಗೂ ಈ ಸಾಂಕ್ರಾಮಿಕದ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಒದಗಿಸಲಾಯಿತು.
2. ಬೆಂಗಳೂರು ಮತ್ತು ಇತರ 6 ಜಿಲ್ಲೆಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದರೂ, ಮರಣ ಪ್ರಮಾಣ ರಾಜ್ಯದಲ್ಲಿ ಶೇ. 0.50 ಯಷ್ಟು ಇರುವುದು ಸಮಾಧಾನದ ಸಂಗತಿ. ಈ ಕುರಿತು ಕೇಂದ್ರ ಸರ್ಕಾರವೂ ತೃಪ್ತಿ ವ್ಯಕ್ತಪಡಿಸಿದೆ.
3. ಜ್ಯೋತಿಬಾ ಫುಲೆ ಜನ್ಮ ದಿನವಾದ ಏಪ್ರಿಲ್ 11 ರಿಂದ ಅಂಬೇಡ್ಕರ್ ಜಯಂತಿಯ ದಿನವಾದ ಏಪ್ರಿಲ್ 14ರ ವರೆಗೆ ಲಸಿಕಾ ಆಂದೋಲನ ಹಮ್ಮಿಕೊಳ್ಳುವಂತೆ ಪ್ರಧಾನಿ ಕರೆ ನೀಡಿದ್ದಾರೆ. ರಾಜ್ಯದಲ್ಲಿಯೂ ಕ್ರಮ ಕೈಗೊಳ್ಳಲಾಗುವುದು.
4. ಬೆಂಗಳೂರು, ಮೈಸೂರು, ಮಂಗಳೂರು, ಕಲಬುರಗಿ, ಬೀದರ್, ತುಮಕೂರು, ಉಡುಪಿ-ಮಣಿಪಾಲಗಳಲ್ಲಿ ಏಪ್ರಿಲ್ 10ರಿಂದ 20ರ ವರೆಗೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯ ವರೆಗೆ ಕೊರೊನಾ ಕರ್ಫ್ಯೂ ಜಾರಿಗೊಳಿಸಲಾಗುವುದು.
ಈ ಅವಧಿಯಲ್ಲಿ ಅಗತ್ಯ ಸೇವೆಗಳು ಅಬಾಧಿತವಾಗಿರುತ್ತವೆ.
5. ಯುವಜನರು ಮುನ್ನೆಚ್ಚರಿಕೆಯ ಕ್ರಮಗಳನ್ನು ತಪ್ಪದೆ ಪಾಲಿಸುವ ಕುರಿತು ಆದ್ಯತೆ ನೀಡುವಂತೆ ಸಲಹೆ ನೀಡಿದರು.
6. ಕೋವಿಡ್ ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ಪ್ರಸಿದ್ಧ ವ್ಯಕ್ತಿಗಳು, ಸಮಾಜದ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳ ಸಹಯೋಗ ಪಡೆಯಲು ಸೂಚಿಸಿದರು.
7. ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವಂತೆ ಹಾಗೂ ನಿಖರತೆಗೆ ಆದ್ಯತೆ ನೀಡುವಂತೆ ಪ್ರಧಾನ ಮಂತ್ರಿಯವರು ಸಲಹೆ ನೀಡಿದ್ದಾರೆ.
8. ಇದರೊಂದಿಗೆ ಮೈಕ್ರೋ ಕಂಟೇನ್ ಮೆಂಟ್ ವಲಯಗಳಿಗೆ ಆದ್ಯತೆ ನೀಡುವಂತೆ ತಿಳಿಸಿದರು.
9. ಆಂಬ್ಯುಲೆನ್ಸ್, ಆಕ್ಸಿಜನ್ ಪೂರೈಕೆ ಹಾಗೂ ವೆಂಟಿಲೇಟರ್ ಸೌಲಭ್ಯಗಳಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.
10. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಜಾತ್ರೆ, ಹಬ್ಬಗಳು ಮತ್ತಿತರ ಧಾರ್ಮಿಕ ಮತ್ತು ಸಾಮಾಜಿಕ ಸಮಾವೇಶಗಳನ್ನು ನಿಷೇಧಿಸಲಾಗಿದೆ. ಈ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಅನುಷ್ಠಾನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಮಾಡದ, ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಧಿಸಲಾಗುತ್ತಿದೆ.
11. ಲಸಿಕೆ ಅಭಿಯಾನವನ್ನು ತೀವ್ರಗತಿಯಲ್ಲಿ ನಡೆಸಲಾಗುತ್ತಿದೆ. ಪ್ರತಿದಿನ ಆರು ಸಾವಿರ ಲಸಿಕಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ 5400 ಸರ್ಕಾರಿ ಹಾಗೂ 600 ಖಾಸಗಿ ಆರೋಗ್ಯ ಸಂಸ್ಥೆಗಳು. ಈ ವರೆಗೆ 53 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. 45 ವರ್ಷಕ್ಕೂ ಮೇಲ್ಪಟ್ಟ ಜನಸಂಖ್ಯೆಯ ಶೇ. 22.31ರಷ್ಟು ಜನರಿಗೆ ಲಸಿಕೆ ಹಾಕಲಾಗಿದೆ. ಈ ವರ್ಗದ ರಾಷ್ಟ್ರೀಯ ಸರಾಸರಿ ಏಪ್ರಿಲ್ 5 ರಂದು ಶೇ. 13. 94 ರಷ್ಟು ಇದೆ.
12. ಲಸಿಕೆಗಳು ವ್ಯರ್ಥವಾಗುವ ಪ್ರಮಾಣ ಅತಿ ಕಡಿಮೆ ಇದೆ.
13. ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ದಿನ ನಡೆಸುವ ಪರೀಕ್ಷೆಗಳ ಪ್ರಮಾಣ ದುಪ್ಪಟ್ಟಾಗಿದ್ದು, 1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಶೇ. 95 ಕ್ಕೂ ಹೆಚ್ಚು ಆರ್ ಟಿ ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
14. ಆಸ್ಪತ್ರೆಗಳಲ್ಲಿ ಸಾಮಾನ್ಯ ಬೆಡ್ ಗಳು, ಆಕ್ಸಿಜನ್ ಸಂಪರ್ಕವಿರುವ ಬೆಡ್ ಗಳು ಮತ್ತು ಐಸಿಯುಗಳು ಸಾಕಷ್ಟು ಲಭ್ಯವಿದೆ. 42 ಸಾವಿರ ಸಾಮಾನ್ಯ ಹಾಸಿಗೆಗಳು, 30 ಸಾವಿರ ಆಮ್ಲಜನಕ ಸಂಪರ್ಕವಿರುವ ಹಾಸಿಗೆಗಳು ಹಾಗೂ 3 ಸಾವಿರ ಐಸಿಯುಗಳು ಮತ್ತು 2900 ವೆಂಟಿಲೇಟರ್ ಗಳಿರುವ ಹಾಸಿಗೆಗಳು ಲಭ್ಯವಿದೆ.
15. ಮುಂಜಾಗ್ರತೆಯ ಕ್ರಮವಾಗಿ ಪಿಎಂ-ಕೇರ್ಸ್ ನಿಧಿಯಿಂದ ಆಕ್ಸಿಜನ್ ಜನರೇಟರುಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
16. ಕೋವಿಡ್ ಸಾಂಕ್ರಾಮಿಕ ನಿಯಂತ್ರಿಸಲು ಕೇಂದ್ರ ಸರ್ಕಾರದ ನೆರವಿನೊಂದಿಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
17. ಇದರಲ್ಲಿ ನಾಗರಿಕರ ಸಹಕಾರ ಹಾಗೂ ಜವಾಬ್ದಾರಿಯುತ ನಡವಳಿಕೆ ಅತಿ ಮುಖ್ಯ. ರಾಜ್ಯದ ಜನತೆ ಸರ್ಕಾರದ ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸರ್ಕಾರದೊಂದಿಗೆ ಸಹಕರಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದರು.
Highlights of the PM Video Conference with Chief Ministers -Night Corona Curfew
ಶನಿವಾರದಿಂದಲೇ ರಾಜ್ಯದ 8 ಜಿಲ್ಲೆಗಳಲ್ಲಿ ಕೊರೋನಾ ಕರ್ಫ್ಯೂ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ