*ವಿಧಾನಪರಿಷತ್ ನಲ್ಲಿ ಕೋಲಾಹಲ; ಕೈಕೈ ಮಿಲಾಯಿಸುವ ಹಂತ ತಲುಪಿದ ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರು*
ಪ್ರಗತಿವಾಹಿನಿ ಸುದ್ದಿ: ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಗೆದ್ದ ಅಭ್ಯರ್ಥಿಗಳು ಸಂಭ್ರಮಿಸುತ್ತಿದ್ದ ವೇಳೆ ವಿಧಾನಸೌಧ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿರುವ ಆರೋಪ ವಿಧಾನಮಂಡಲ ಉಭಯ ಸದನಗಳಲ್ಲಿ ಪ್ರತಿಧ್ವನಿಸಿದೆ. ಉಭಯ ಸದನಗಳಲ್ಲಿ ಗದ್ದಲ-ಕೋಲಾಹಲಕ್ಕೆ ಕಾರಣವಾಗಿದೆ.
ವಿಧಾನಪರಿಷತ್ ನಲ್ಲಿ ಈ ವಿಚಾರ ವಿಪಕ್ಷ ಹಾಗೂ ಆಡಳಿತ ಪಕ್ಷ ಸದಸ್ಯರ ನಡುವೆ ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೂ ಹೋಯಿತು. ಪರಿಷತ್ ಸದಸ್ಯ ಎನ್.ರವಿ ಕುಮಾರ್ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ವಿಷಯ ಪ್ರಸ್ತಾಪಿಸಿದರು. ಇದೇ ವೇಳೆ ಮಾತಿನ ಬರದಲ್ಲಿ ದೇಶದ್ರೋಹಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಕೆಂಡಾಮಂಡಲರಾದ ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ವಾಗ್ದಾಳಿ ಸರಿಯಲ್ಲ ಎಂದು ಕಿಡಿಕಾರಿದರು. ಮಾತು ನಿಲ್ಲಿಸದ ಎನ್.ರವಿಕುಮಾರ್ ವಿರುದ್ಧ ಗುಡುಗಿದ ಸದಸ್ಯ ಅಬ್ದುಲ್ ಜಬ್ಬಾರ್ ಅವನ ಬಾಯಿ ಬಂದ್ ಮಾಡಿ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಜಬ್ಬಾರ್ ಮಾತಿಗೆ ರೊಚ್ಚಿಗೆದ್ದ ಬಿಜೆಪಿ ಸದಸ್ಯರು ಏಕವಚನದಲ್ಲಿ ಮಾತನಾಡಿದರೆ ಸರಿ ಇರಲ್ಲ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ರವಿ ಕುಮಾರ್ ಎದ್ದು ಜಬ್ಬಾರ್ ಬಳಿ ಹೋಗುತ್ತಿದ್ದಂತೆ ತುಳಸಿ ಮುನಿರಾಜುಗೌಡ ಕೂಡ ಮುನ್ನುಗ್ಗಿ ಹೋದರು. ಆಡಳಿತ ಹಾಗೂ ವಿಪಕ್ಷ ಸದಸ್ಯರು ಸಭಾಪತಿ ಕುರ್ಚಿ ಬಳಿ ಜಮಾಯಿಸಿ ಕೈಕೈ ಮಿಲಾಯಿಸುವ ಹಂತ ತಲುಪಿದರು.
ಈ ವೇಳೆ ಮಾರ್ಷಲ್ ಗಳು ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರು. ಮಧ್ಯಪ್ರವೇಶಿಸಿದ ಸಚಿವ ಹೆಚ್.ಕೆ.ಪಾಟೀಲ್ ಎರಡೂ ಪಕ್ಷಗಳ ಸದಸ್ಯರನ್ನು ಸಮಾಧಾನಪಡಿಸಿದರು. ಕ್ಷಮೆ ಕೇಳುವಂತೆ ಸಲಹೆ ನೀಡಿದರು. ಈ ವೇಳೆ ಜಬ್ಬಾರ್ ರಮಿಕುಮಾರ್ ಮಾತಿಗೆ ಕೋಪಗೊಂಡು ಆಡಿದ ಮಾತಿನಿಂದ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಕ್ಷಮೆ ಕೇಳಿದರು. ಈ ವೇಳೆ ರವಿಕುಮಾರ್ ದೇಶದ ಪರವಾಗಿ ನಾನು ಮಾತನಾಡಿದ್ದೇನೆ ಅದು ಕ್ಷಮೆ ಕೇಳುವ ವಿಷಯವೇ? ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ