Kannada NewsLatest

ಜನರೇ ಎಲ್ಲದಕ್ಕೂ ಉತ್ತರಿಸಿದ್ದಾರೆ, ಅವರ ವಿಶ್ವಾಸವನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಮಾಡುತ್ತೇನೆ – ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನನ್ನ ವಿರುದ್ಧ ಆರೋಪ ಮಾಡುತ್ತಿದ್ದವರಿಗೆ ಜನರೇ ಉತ್ತರ ಹೇಳಿದ್ದಾರೆ. ನನ್ನ ಜನ ನನ್ನನ್ನು ಮನೆ ಮಗಳಾಗಿ ಸ್ವೀಕರಿಸಿದ್ದಾರೆ. ಮನೆ ಮಗಳನ್ನು ಆಶಿರ್ವದಿಸಿದ್ದಾರೆ. ಆ ವಿಶ್ವಾಸವನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಮಾಡುತ್ತೇನೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಭರ್ಜರಿಗೆಲುವು ಸಾಧಿಸಿರುವ ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕರ್ತರೊಂದಿಗೆ ಸುಳೇಬಾವಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು, ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಪರಸ್ಪರ ಬಣ್ಣ ಎರಚಿ ಸಂಭ್ರಮಾಚರಣೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಸುಳೇಬಾವಿ ಮಹಾಲಕ್ಷ್ಮಿ, ಉಚಗಾವಿಯ ಮಳೆಕರಣಿ, ಶಿವಾಜಿ ಮಹಾರಾಜ, ಡಾ.ಅಂಬೇಡ್ಕರ್, ವಾಲ್ಮೀಕಿ, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಬಸವಣ್ಣ, ಪೈಗಂಬರರು, ಎಲ್ಲ ವಿಶ್ವ ಮಾನವರ, ಎಲ್ಲ ಧರ್ಮ, ಎಲ್ಲ ಜಾತಿಯವರನ್ನು ಕರೆದುಕೊಂಡು ಮುಂದೆ ಹೊಗುತ್ತಿದ್ದೇನೆ. ಎಲ್ಲರ ಆಶಿರ್ವಾದದಿಂದ ಈ ಗೆಲುವು ಬಂದಿದೆ. ಜನರ ಭಾವನೆಗಳಿಗೆ ಸ್ಪಂದಿಸಿ, ಸತತ ಸಂಪರ್ಕದಲ್ಲಿ ಇದ್ದಿದ್ದರಿಂದ ಈ ಗೆಲುವು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಕಳೆದ ಬಾರಿಗಿಂತ ಲೀಡ್ ಜಾಸ್ತಿಯಾಗಲಿದೆ ಎಂದು ಮೊದಲೇ ಹೇಳಿದ್ದೆ. ಎಲ್ಲರ ಮನಸ್ಸನ್ನು ಮುಟ್ಟಿದ್ದೇನೆ. ನನ್ನ ವಿರುದ್ಧ ಮಾತನಾಡಿದವರಿಗೆ, ಆರೋಪ ಮಾಡಿದವರಿಗೆ ಜನರೇ ಉತ್ತರಿಸಿದ್ದಾರೆ. ನಾನು ಏನನ್ನೂ ಹೇಳುವುದಿಲ್ಲ. ಜನರಿಗೆ ನಾನು ತಂಗಿ ರೀತಿ, ತಾಯಿ ರೀತಿ, ಮಗಳ ರೀತಿ ಕಂಡಿದ್ದೇನೆ. ಅದೇ ಸಾಕು. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೆ ಎಲ್ಲರೂ ಲಕ್ಷ್ಮೀ ಅಕ್ಕ ಗೆದ್ದು ಬರಬೇಕು ಎಂದು ಪ್ರಾರ್ಥಿಸಿದ್ದರು. ಅದು ಯಶಸ್ವಿಯಾಗಿದೆ ಎಂದರು.

ರಾಜಕಾರಣದಲ್ಲಿ ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ. ನಾನು 22 ವರ್ಷದಿಂದ ಬಿಸಿಲು, ಮಳೆ ಎಲ್ಲವನ್ನೂ ನೋಡಿದ್ದೇನೆ. ಜಿಲ್ಲೆಯ ಜನರ ಪಾದಗಳಿಗೆ ನಮಸ್ಕಾರ ಮಾಡುತ್ತೇನೆ. ಮಂತ್ರಿ ಮಾಡುವುದು ಹೈಕಮಾಂಡ್ ಗೆ ಬಿಟ್ಟ ವಿಷಯ. ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿರ್ವಹಿಸಲು ಸಿದ್ಧನಿದ್ದೇನೆ ಎಂದು ಅವರು ತಿಳಿಸಿದರು.

ಬರುವ ಸರಕಾರ ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತದೆ. 5 ಗ್ಯಾರಂಟಿಗಳನ್ನು ಈಡೇರಿಸಿ ಜನರ ವಿಶ್ವಾಸ ಇನ್ನೂ ಗಟ್ಟಿಗೊಳಿಸಿಕೊಳ್ಳುತ್ತೇವೆ. ಕಾಂಗ್ರೆಸ್ ಪಕ್ಷಕ್ಕೆ ಮರು ಜನ್ಮ ನೀಡಿದ್ದಕ್ಕೆ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಗೆಲುವಿಗ ಹಲವು ಕಾರಣಗಳಿವೆ. ಸರಕಾರದ ವಿರುದ್ಧ ಜನ ಭ್ರಮನಿರಸನರಾಗಿದ್ದಾರೆ. ನಮ್ಮ ನಾಯಕರು ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಸಮನ್ವಯ, ಸರ್ವೇಜನಾ ಸುಖಿನೋಭವಂತು ಎಂದು ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ ಎಂದು ಅವರು ಹೇಳಿದರು.

https://pragati.taskdun.com/bjp-state-presidentreactionnalin-kumar-kateel/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button