ಜಿಲ್ಲೆಯಲ್ಲಿ 39.47 ಲಕ್ಷ ಮತದಾರರು: ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: 1000 ಕ್ಕಿಂತ ಅಧಿಕ ಮತದಾರರಿರುವ ಐದು ಆಕ್ಜಿಲರಿ ಮತಗಟ್ಟೆಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ 4439 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಕ್ರಿಟಿಕಲ್, ದುರ್ಬಲ ವರ್ಗದ ಮತಗಟ್ಟೆಗಳನ್ನು ಗುರುತಿಸಲಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ಜಿಲ್ಲೆಗೆ ಆಗಮಿಸಿರುವ ಎಲ್ಲ ಸಾಮಾನ್ಯ ವೀಕ್ಷಕರ ಸಮ್ಮುಖದಲ್ಲಿ ವಿಟಿಯು ಸೆನೆಟ್ ಸಭಾಂಗಣದಲ್ಲಿ ಭಾನುವಾರ(ಏ.23) ನಡೆದ ಮತಗಟ್ಟೆ ಸಿಬ್ಬಂದಿ (ಪೋಲಿಂಗ್ ಪಾರ್ಟಿ) ರ್ಯಾಂಡಮೈಜೇಷನ್ ಪ್ರಕ್ರಿಯೆ ಸಂದರ್ಭದಲ್ಲಿ ಅವರು ಮಾತನಾಡಿದರು.
ಮುಂಬರುವ ಚುನಾವಣೆಗೆ ಸಂಬಂಧಿಸಿದಂತೆ ಏಪ್ರಿಲ್ 20 ಕ್ಕೆ ಕೊನೆಗೊಂಡಂತೆ 39,47,150 ಮತದಾರರಿದ್ದಾರೆ. ಮತದಾರರ ಅಂತಿಮ ಪಟ್ಟಿ ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದರು.
ಎಂ.ಸಿ.ಸಿ. ನೋಡಲ್ ಅಧಿಕಾರಿಗಳು ಸೇರಿದಂತೆ ವಿವಿಧ ತಂಡಗಳನ್ನು ರಚಿಸಲಾಗಿರುತ್ತದೆ. ಎಲ್ಲ ತಂಡಗಳು ಮಾದರಿ ನೀತಿಸಂಹಿತೆ ಜಾರಿಗೆ ಬಂದ ದಿನದಿಂದ ಕಾರ್ಯಪ್ರವೃತ್ತಗೊಂಡಿವೆ ಎಂದು ವಿವರಿಸಿದರು.
ಶೇ.15 ರಷ್ಟು ವೆಬ್ ಕಾಸ್ಟಿಂಗ್ ಮಾಡಲಾಗಿದ್ದು, ಅಷ್ಟೇ ಅಲ್ಲದೇ ಐದುನೂರು ಹೆಚ್ಚುವರಿ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ.
ಇದುವರೆಗೆ 17 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಇದುವರೆಗೆ ವಶಪಡಿಸಿಕೊಳ್ಳಲಾಗಿದೆ. ಪ್ರತಿ ಮತಕ್ಷೇತ್ರಗಳಲ್ಲಿ ಸಖಿ ಮತಗಟ್ಟೆಗಳು, ವಿಕಲಚೇತನರು ಮತ್ತು ಸಂಪೂರ್ಣ ಮಹಿಳೆಯರೇ ನಿರ್ವಹಿಸಲಿರುವ ವಿಶೇಷ ಮತಗಟ್ಟೆಗಳನ್ನು ಕೂಡ ಸ್ಥಾಪಿಸಲಾಗುವುದು ಎಂದು ವಿವರಿಸಿದರು.
ಈಗಾಗಲೇ ನಿಗದಿಪಡಿಸಿರುವಂತೆ ಏಪ್ರಿಲ್ 29 ರಿಂದ ಮೇ 1 ರವರೆಗೆ ಮೂರು ದಿನಗಳ ಕಾಲ 80 ವರ್ಷ ಮೇಲ್ಪಟ್ಟವರು ಮತ್ತು ವಿಕಲಚೇತನರ ಮತಗಳನ್ನು ಅವರ ಮನೆಗಳಿಗೆ ತೆರಳಿ ಸಂಗ್ರಹಿಸಲಾಗುವುದು ಎಂದು ವಿವರಿಸಿದರು.
ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಅವರು ಭದ್ರತೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿರ್ದೇಶನ ಮತ್ತು ಸ್ಥಳೀಯ ಅಗತ್ಯತೆ ಆಧರಿಸಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಈಗಾಗಲೇ ಪ್ಯಾರಾ ಮಿಲಿಟರಿ ಪಡೆಯು ಪ್ರತಿಯೊಂದು ಮತಕ್ಷೇತ್ರಗಳಲ್ಲಿ ಸಂಚರಿಸಿ ಜನರ ವಿಶ್ವಾಸ ಗಳಿಸುವ ಕೆಲಸವನ್ನು ಮಾಡಿದೆ ಎಂದು ತಿಳಿಸಿದರು.
ಮತಕ್ಷೇತ್ರವಾರು ಅಗತ್ಯವಿರುವ ಮತಗಟ್ಟೆ ತಂಡಗಳನ್ನು ರ್ಯಾಂಡಮೈಜೇಷನ್ ಮೂಲಕ ನಿರ್ಧರಿಸಲಾಗಿದ್ದು, ಮುಂದಿನ ಹಂತದ ರ್ಯಾಂಡಮೈಜೇಷನ್ ಮೂಲಕ ಮತಗಟ್ಟೆವಾರು ತಂಡಗಳನ್ನು ನಿಯೋಜಿಸಲಾಗುತ್ತದೆ.
ಪೊಲೀಸ್ ವೀಕ್ಷಕರಾದ ದಿನೇಶ್ ಕುಮಾರ್ ಯಾದವ್ ಹಾಗೂ ಶ್ರೀಮತಿ ಶೇಮುಷಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಸೇರಿದಂತೆ ವಿವಿಧ ತಂಡಗಳ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ