*ಕಾಗದಗಳನ್ನು ಚೂರು ಚೂರು ಮಾಡಿ ಡೆಪ್ಯೂಟಿ ಸ್ಪೀಕರ್ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಶಾಸಕರು; ವಿಧಾನಸಭೆಯಲ್ಲಿ ಕೋಲಾಹಲ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರ ಶಿಷ್ಠಾಚಾರ ಉಲ್ಲಂಘನೆ ಮಾಡಿ ಐಎ ಎಸ್ ಅಧಿಕಾರಿಗಳನ್ನು ವಿಪಕ್ಷ ನಾಯಕರ ಸಭೆಗೆ ನೇಮಕ ಮಾಡಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಹೈಡ್ರಾಮಾ ಮಾಡಿರುವ ಪ್ರಸಂಗ ನಡೆದಿದೆ.
ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಶಿಷ್ಠಾಚಾರ ಉಲ್ಲಂಘನೆ ಆರೋಪ ಮಾಡಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು. ಸದನದಲ್ಲಿ ಗದ್ದಲ-ಕೋಲಾಹಲ ಆರಂಭವಾಗುತ್ತಿದ್ದಂತೆ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಬಿಜೆಪಿ ಸದಸ್ಯರಿಗೆ ತಮ್ಮ ತಮ್ಮ ಸ್ಥಳಕ್ಕೆ ಹೋಗಿ ಕುಳಿತುಕೊಳ್ಳುವಂತೆ ಸೂಚಿಸಿದರು.
ಡೆಪ್ಯೂಟಿ ಸ್ಪೀಕರ್ ಮಾತಿಗೂ ಬಗ್ಗದ ಬಿಜೆಪಿ ಸದಸ್ಯರು, ವಿಧೇಯಕಗಳನ್ನು ಹರಿದು ಕಾಗದಗಳನ್ನು ಚೂರು ಚೂರು ಮಾಡಿ ಡೆಪ್ಯೂಟಿ ಸ್ಪೀಕರ್ ಮೇಲೆ ಎಸೆದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಬಿಜೆಪಿ ಸದಸ್ಯರ ವರ್ತನೆಗೆ ಕಿಡಿಕಾರಿದ ಡೆಪ್ಯೂಟಿ ಸ್ಪೀಕರ್, ಬಿಜೆಪಿ ಸದಸ್ಯರು ಕಲಪಕ್ಕೆ ಅಡ್ಡಿಪಡಿಸುವ ದುರುದ್ದೇಶದಿಂದಲೇ ಈರೀತಿ ನಡೆದುಕೊಳ್ಳುತ್ತಿದ್ದೀರಿ. ಇದು ಸದನಕ್ಕೆ ನೀವು ತೋರುವ ಅಗೌರವ. ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿದರು. ಆದರೂ ಕೇಳದ ಬಿಜೆಪಿ ಸದಸ್ಯರಾದ ಆರ್.ಅಶೋಕ್, ಅಶ್ವತ್ಥನಾರಾಯಣ, ಅರಗ ಜ್ಞಾನೇಂದ್ರ, ವೇದವ್ಯಾಸ ಕಾಮತ್ ಸೇರಿದಂತೆ ಹಲವರು ಕಾಗದಗಳನ್ನು ಹರಿದು ಸ್ಪೀಕರ್ ಟೇಬಲ್ ಮೇಲೆ ಎಸೆದು ಗದ್ದಲ ಆರಂಭಿಸಿದರು. ಬಿಜೆಪಿ ಸದಸ್ಯರ ಗದ್ದಲ ಹಿನ್ನೆಲೆಯಲ್ಲಿ ಕಲಾಪವನ್ನು ಕೆಲ ಕಾಲ ಮುಂದೂಡಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ