Kannada NewsKarnataka NewsLatestPolitics

*ಅಕ್ಕಿ ದಾಸ್ತಾನಿದ್ದರೂ ನೀಡದೇ ಖಾಸಗಿಯವರಿಗೆ ಮಾರಲು ಹೊರಟ ಬಿಜೆಪಿ; ಡಿ.ಕೆ.ಶಿವಕುಮಾರ್ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದ ಬಡ ಜನರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆ ಜಾರಿಯನ್ನು ಸಹಿಸಲಾಗದೇ ಅಸೂಯೆಯಿಂದ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ವಾಗ್ದಾಳಿ ನಡೆಸಿದರು.

ವಿಧಾನಸಭೆಯಲ್ಲಿ ಗುರುವಾರದ ಅನ್ನಭಾಗ್ಯ ಯೋಜನೆ ವಿಚಾರವಾಗಿ ಚರ್ಚೆ ಆರಂಭವಾದಾಗ ಬಿಜೆಪಿ ನಾಯಕರು ಅಪಸ್ವರ ಎತ್ತಿ, ಕಲಾಪ ಬಹಿಷ್ಕರಿಸಿ ಹೊರ ನಡೆಯುವಾಗ ಮಾತನಾಡಿದ ಡಿ.ಕೆ.ಶಿವಕುಮಾರ್, ಬಡವರ ಪರವಾಗಿ ನಾವು ಜಾರಿಗೆ ತಂದಿರುವ ಅನ್ನಭಾಗ್ಯ ಕಾರ್ಯಕ್ರಮವನ್ನು ಬಿಜೆಪಿ ಸಹಿಸುತ್ತಿಲ್ಲ. ಭಾರತೀಯ ಆಹಾರ ನಿಗಮದ ಗೋದಾಮಿನಲ್ಲಿ ಮೇ ಅಂತ್ಯದ ವೇಳೆಗೆ 7 ಲಕ್ಷ ಟನ್ ಅಕ್ಕಿ ದಾಸ್ತಾನು ಇದ್ದರೂ ರಾಜ್ಯಕ್ಕೆ 1.66 ಲಕ್ಷ ಟನ್ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿದೆ. ಬಡವರಿಗೆ ತಿನ್ನಲು ಅನ್ನ ನೀಡದೇ ಬೇರೆ ಉತ್ಪನ್ನಗಳನ್ನು ತಯಾರು ಮಾಡಲು ಖಾಸಗಿಯವರಿಗೆ ಅಕ್ಕಿ ಮಾರಲು ಹೊರಟಿದ್ದಾರೆ. ಇದರಿಂದ ಬಿಜೆಪಿ ಬಡವರ ವಿರೋಧಿ ಎಂಬುದು ಸಾಬೀತಾಗಿದೆ ಎಂದರು.

ಬಿಜೆಪಿಯವರು ಪ್ರತಿಭಟನೆ ಮಾಡಿ, ಸಭಾತ್ಯಾಗ ಮಾಡಿ ಹೋದರೆ ನಮಗೂ ಸಮಾಧಾನವೇ. ಕಾರಣ, ನಮ್ಮ ಸರ್ಕಾರ ಜನರ ಹಸಿವನ್ನು ನೀಗಿಸಲು ತೆಗೆದುಕೊಂಡಿರುವ ಕಾರ್ಯಕ್ರಮವನ್ನು ಅವರೇ ಪ್ರಚಾರ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಈ ಹಿಂದೆ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಮೊದಲ ದಿನವೇ ರಾಜ್ಯದ ಜನರು ಹಸಿವಿನಿಂದ ಇರಬಾರದು ಎಂದು ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿದ್ದರು.

ದೇಶದಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದವರು ಯಾರು? ಸೋನಿಯಾ ಗಾಂಧಿ ಅವರು ಯುಪಿಎ ಅಧ್ಯಕ್ಷರಾಗಿ, ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಗಳಾಗಿದ್ದಾಗ ಅದನ್ನು ಜಾರಿಗೆ ತರಲಾಗಿತ್ತು. ಈ ಕಾಯ್ದೆ ಮೂಲಕ ಜನರಿಗೆ 3 ರೂ.ಗೆ ಅಕ್ಕಿ ಸಿಗುವಂತೆ ಮಾಡಿದರು. ನಮ್ಮ ಸರ್ಕಾರ ಜನರಿಂದ 3 ರೂ. ಕೂಡ ಪಡೆಯಬಾರದು ಉಚಿತವಾಗಿ ನೀಡೋಣ ಎಂದು ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆವು.

ನಮ್ಮ ಸರ್ಕಾರ ಆರಂಭದಲ್ಲಿ 5 ಕೆ,ಜಿ ಅಕ್ಕಿ ನೀಡುತ್ತಿತ್ತು, ನಂತರ ಅದನ್ನು 7 ಕೆ.ಜಿಗೆ ಏರಿಕೆ ಮಾಡಲಾಗಿತ್ತು. ಬಿಜೆಪಿ ಸರ್ಕಾರ ಅದನ್ನು ಮತ್ತೆ 5 ಕೆ.ಜಿಗೆ ಇಳಿಸಿತು. ಆಗ ಜನ ಯಾವ ಕಾರಣಕ್ಕೆ ಕಡಿಮೆ ಮಾಡಿದ್ದಾರೆ ಎಂದು ಕೇಳಿದಾಗ, ನಾವು ವಿರೋಧ ಪಕ್ಷವಾಗಿ ಅಧಿಕಾರಕ್ಕೆ ಬಂದರೆ 10 ಕೆ.ಜಿ ನೀಡುತ್ತೇವೆ ಎಂದು ತಿಳಿಸಿದರು. ಇವರು ಸಹಕಾರ ನೀಡಲಿ ಅಥವಾ ನೀಡದೇ ಇರಲಿ ನಮಗೆ ಸಾಮಾಜಿಕ ಬದ್ಧತೆ ಇದೆ.

ಮಂಗಳೂರಿನ ಭಾಗದ ಜನ ಆ ಭಾಗದ ಅಕ್ಕಿ ಕೇಳಿದರೆ, ಉತ್ತರ ಕರ್ನಾಟಕ ಭಾಗದ ಜನ ಜೋಳ ಕೇಳುತ್ತಿದ್ದಾರೆ. ಹಳೇ ಮೈಸೂರು ಭಾಗದ ಜನ ರಾಗಿ ಕೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರಿಗೆ 10 ಕೆ.ಜಿ ಆಹಾರ ಧಾನ್ಯ ನೀಡಲು ಬದ್ಧವಾಗಿದೆ. ಬಡವರಿಗೆ ನೆರವಾಗಲಿ ಎಂದು ನಾವು ಅವರಿಗೆ ಒಂದು ಅವಕಾಶ ನೀಡಿದೆವು.

ನಮ್ಮ ಈ ಯೋಜನೆ ಕೇವಲ ಒಂದು ಜಾತಿ, ಧರ್ಮ, ಪಂಗಡಕ್ಕೆ ಮಾತ್ರವಲ್ಲ. ಎಲ್ಲಾ ಜಾತಿ ಧರ್ಮದವರಿಗೂ ಈ ಯೋಜನೆ ಲಾಭ ಸಿಗುತ್ತದೆ. ಈ ಯೋಜನೆಯ ಎಲ್ಲಾ ಫಲಾನುಭವಿಗಳಿಗೂ 10 ಕೆ.ಜಿ ನೀಡುತ್ತೇವೆ. ಬೇರೆ ರಾಜ್ಯಗಳಿಂದ ಖರೀದಿ, ಮುಕ್ತ ಮಾರುಕಟ್ಟೆಯಲ್ಲಿ ಖರೀದಿ, ನಮ್ಮ ರೈತರಿಗೆ ಅಕ್ಕಿ ಬೆಳೆಯಲು ಅವಕಾಶ ನೀಡಿ ಅವರಿಂದ ಖರೀದಿ ಮಾಡುವ ಅವಕಾಶ ನಮ್ಮ ಮುಂದೆ ಇದೆ.

ಬಿಜೆಪಿ ನಾಯಕರಿಗೆ ನಮ್ಮ ಯೋಜನೆ ಜಾರಿ ವಿಚಾರವಾಗಿ ಅಸೂಯೆ ಹೆಚ್ಚಾಗಿದೆ. ಅವರು ಹೊಟ್ಟೆಕಿಚ್ಚಿನಿಂದ ಈ ರೀತಿ ವರ್ತಿಸುತ್ತಿದ್ದಾರೆ. ಇವರು ಬಡ ವಿರಧಿ, ಭ್ರಷ್ಟ ಸರ್ಕಾರ ಎಂದು ರಾಜ್ಯದ ಜನ ಇವರನ್ನು ಅಧಿಕಾರದಿಂದ ಕಿತ್ತೊಗೆದಿದ್ದು, ಇವರನ್ನು ಮತ್ತೆ ಎಂದಿಗೂ ಕ್ಷಮಿಸುವುದಿಲ್ಲ. ನಮಗೆ ರಾಜ್ಯದ ಜನರ ಬಗ್ಗೆ ಬದ್ಧತೆ ಇದೆ. ನಾವು ರಾಜ್ಯದ ಜನರಿಗೆ ನೀಡಿರುವ ಐದು ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ. ಜಾರಿ ಮಾಡದಿದ್ದರೆ ಮತ್ತೆ ಅವರ ಮುಂದೆ ಹೋಗಿ ಮತ ಕೇಳುವುದಿಲ್ಲ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button