LatestUncategorized

*ವಿಧಾನಸೌಧ ಶಾಪಿಂಗ್ ಮಾಲ್‌ನಂತಾಗಿದೆ; ಸಚಿವರೆಲ್ಲ ಅಂಗಡಿ ತೆರೆದು ಕುಳಿತಿದ್ದಾರೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸೌಧವನ್ನು ಬಿಜೆಪಿ ಸರ್ಕಾರ ವ್ಯಾಪಾರ ಸೌಧವನ್ನಾಗಿಸಿದೆ, ಅಕ್ರಮ ಡೀಲಿಂಗ್‌ಗಳ ಅಡ್ಡೆಯನ್ನಾಗಿ ಮಾಡಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕ ಆಕ್ರೋಶ ವ್ಯಕ್ತಪಡಿಸಿದೆ.

ಕೆಲದಿನಗಳ ಹಿಂದೆ ವಿಧಾನಸೌಧದ ಆವರಣದಲ್ಲಿ ಹುದ್ದೆ ಮಾರಾಟದ ಡೀಲಿಂಗ್ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಬಿಜೆಪಿ ಶಾಸಕ ಬಸವರಾಜ್ ದಡೇಸಗೂರ ಶಾಸಕರ ಭವನದಲ್ಲಿ ಪಿಎಸ್ ಐ ಅಭ್ಯರ್ಥಿ ಬಳಿ ಹಣ ಪಡೆದದ್ದು ಬೆಳಕಿಗೆ ಬಂದಿತ್ತು. ಈಗ 10 ಲಕ್ಷ ಲಂಚದ ಹಣ ವಿಧಾನಸೌಧದಲ್ಲಿ ಸಿಕ್ಕಿದೆ. ವಿಧಾನಸೌಧಕ್ಕೆ 10.5 ಲಕ್ಷ ಹಣವನ್ನು PWD ಇಂಜಿನಿಯರ್ ತಂದಿದ್ದೇಕೆ? ಆ ಹಣ ಅದು ಲಂಚ ಪಡೆದ ಹಣವೋ, ಮಂತ್ರಿಗಳಿಗೆ ಕೊಡಲು ತಂದ ಹಣವೋ? 40% ಕಮಿಷನ್ ಲೂಟಿಯ ಹಣವೋ? ಸಿಎಂ ಬೊಮ್ಮಾಯಿ ಉತ್ತರಿಸಬೇಕು ಎಂದು ಒತ್ತಾಯಿಸಿದೆ.

ಈ ಹಣಕ್ಕೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮಿಸಿರುವುದಕ್ಕೂ ಸಂಬಂಧವಿದೆಯೇ? 40% ಕಮಿಷನ್‌ನಲ್ಲಿ ದೆಹಲಿ ಪಾಲು ತಲುಪಿಸಲು ತರಿಸಿದ ಹಣವೇ? ಸಿಎಂ ಹುದ್ದೆಯ 2,500 ಕೋಟಿಯ ಬಾಕಿ ವಸೂಲಿಗೆ ಬಂದಿರುವುದೇ? ಹಾಗೆಯೇ, ಸ್ಯಾಂಟ್ರೋ ರವಿ ವಿಚಾರದಲ್ಲಿ ಇಡೀ ಸರ್ಕಾರವೇ ಕಳವಳಗೊಂಡಿರುವುದೇಕೆ? ಎಂದು ಪ್ರಶ್ನಿಸಿದೆ.

ಬಿಜೆಪಿ ಆಡಳಿತದಲ್ಲಿ ವಿಧಾನಸೌಧ ಶಾಪಿಂಗ್ ಮಾಲ್‌ನಂತಾಗಿದೆ. ಇಲ್ಲಿ ಸಚಿವರೆಲ್ಲರೂ ಅಂಗಡಿ ತೆರೆದು ಕುಳಿತಿದ್ದಾರೆ, ‘40% ಕಮಿಷನ್ ಕಡ್ಡಾಯ’ದೊಂದಿಗೆ ಇಲ್ಲಿ ಎಲ್ಲವೂ ಮಾರಾಟಕ್ಕಿದೆ. ಈ ಶಾಪಿಂಗ್ ಮಾಲಿನಲ್ಲಿ ಲಕ್ಷ, ಕೋಟಿಗಳ ವ್ಯವಹಾರಗಳು ಸಲೀಸಾಗಿ ನಡೆಯುತ್ತಿವೆ. ಸಿಕ್ಕಿಬಿದ್ದ 10 ಲಕ್ಷ ಇದೆಲ್ಲದಕ್ಕೂ ಸಾಕ್ಷಿ. ಕರ್ನಾಟಕ ಬಿಜೆಪಿ ಸರ್ಕಾರದ ಆಡಳಿತ ಇಡೀ ದೇಶದಲ್ಲೇ ಅತ್ಯಂತ ‘ಭ್ರಷ್ಟ ಆಡಳಿತ’ ಎನ್ನುವ ಹೆಗ್ಗಳಿಕೆ ಪಡೆದಿದೆ! ಪಂಚಾಯಿತಿಯಿಂದ ವಿಧಾನಸೌಧದ ವರೆಗೂ ಲಂಚವಿಲ್ಲದೇ ಯಾವ ಕೆಲಸಗಳೂ ಆಗುತ್ತಿಲ್ಲ. ವಿಧಾನಸೌಧದಲ್ಲೇ ಸೆಟಲ್‌ಮೆಂಟ್‌ಗಳು ನಡೆಯುತ್ತಿವೆ, ಸರ್ಕಾರದಲ್ಲಿ ನಡೆಯುವ ಎಲ್ಲ ಭ್ರಷ್ಟಾಚಾರಗಳನ್ನು ಮುಚ್ಚಿಹಾಕಲಾಗುತ್ತಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button