*ವಿಧಾನಸೌಧದಲ್ಲಿ ಸಿಎಂ ಜನಸ್ಪಂದನ: ಕುಸಿದಿರುವ ಆಡಳಿತ ಯಂತ್ರದ ಪ್ರತಿಫಲನ*
ಪ್ರಗತಿವಾಹಿನಿ ಸುದ್ದಿ: ವಿಧಾನಸೌಧದ ಮುಂದೆ ನಡೆಯುತ್ತಿರುವ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ಅದೇನೋ ಮಹಾ ದೊಡ್ಡ ಸಾಧನೆ ಅಂತ ಮೆರೆಯುತ್ತಿದ್ದೀರಲ್ಲ ಸಿಎಂ ಸಿದ್ದರಾಮಯ್ಯನವರೇ, ಅಸಲಿಗೆ ಅದು ರಾಜ್ಯದಲ್ಲಿ ಸಂಪೂರ್ಣವಾಗಿ ಕುಸಿದಿರುವ ಆಡಳಿತ ಯಂತ್ರಕ್ಕೆ ಜೀವಂತ ನಿದರ್ಶನ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ರಾಜ್ಯದಲ್ಲಿ 34 ಸಂಪುಟ ಸಚಿವರಿದ್ದಾರೆ. ಪ್ರತೀ ಜಿಲ್ಲೆಗೆ ಒಬ್ಬ ಉಸ್ತುವಾರಿ ಸಚಿವರಿದ್ದಾರೆ. ಸಂಪುಟ ದರ್ಜೆ ಸ್ಥಾನಮಾನದ 34 ನಿಗಮ ಮಂಡಳಿಗಳ ಅಧ್ಯಕ್ಷರಿದ್ದಾರೆ. ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒಗಳು ಇದ್ದಾರೆ. ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಪಂಚಾಯಿತಿಗಳು ಇವೆ.
ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಒಬ್ಬ ಬಡ ವ್ಯಕ್ತಿ ತನ್ನ ಸಮಸ್ಯೆ ಬಗೆಹರಿಸಿಕೊಳ್ಳಲು ದೂರದ ಊರುಗಳಿಂದ ಬಸ್ಸು, ರೈಲು ಚಾರ್ಜು ಕೊಟ್ಟು ಅರ್ಜಿ ಹಿಡಿದುಕೊಂಡು ವಿಧಾನಸೌಧಕ್ಕೆ ಬಂದು ದಿನವೆಲ್ಲಾ ಕಾದು ಸಿಎಂ ಮುಂದೆ ಕೈಚಾಚಬೇಕಾದ ಪರಿಸ್ಥಿತಿ ಇದೆ ಎಂದರೆ ಅದು ನಿಮ್ಮ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ. ಅರ್ಜಿ ಹಿಡಿದು ಕೈಚಾಚುವ ಜನರ ಗೋಳನ್ನು ನಿಮ್ಮ ಬಿಟ್ಟಿ ಪ್ರಚಾರದ ಗೀಳಿಗೆ ಬಳಸಿಕೊಳ್ಳುತ್ತಿದ್ದೀರಲ್ಲ ಸಿಎಂ ಸಿದ್ದರಾಮಯ್ಯನವರೇ, ನಿಮಗೆ ನಿಜಕ್ಕೂ ನಾಚಿಕೆಯಾಗಬೇಕು.
ಜನಸ್ಪಂದನ ಅಂತ ಪ್ರಚಾರಕ್ಕಾಗಿ ನಾಟಕ ಆಡುವ ಬದಲು ಮುಖ್ಯಮಂತ್ರಿಗಳು ತಮ್ಮ ಉಸ್ತುವಾರಿ ಮಂತ್ರಿಗಳಿಗೆ ಆಯಾ ಜಿಲ್ಲಾ ಕೇಂದ್ರಗಳಿಗೆ, ತಾಲ್ಲೂಕು ಕೇಂದ್ರಗಳಿಗೆ ಹೋಗಿ ಜನರ ಸಮಸ್ಯೆ ಆಲಿಸುವಂತೆ ಸೂಚನೆ ನೀಡಬೇಕು. ಶಾಸಕರು ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒ ಸಮ್ಮುಖದಲ್ಲಿ ಸ್ಥಳೀಯ ಮಟ್ಟದಲ್ಲೇ ಜನತಾ ದರ್ಶನ ನಡೆಸಿ ಅಲ್ಲೇ ಜನರ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ