Latest

ವಿದ್ಯಾಗಮ ಯೋಜನೆ; ಕೊರೊನಾಗೆ ಬಲಿಯಾದ ಶಿಕ್ಷಕರು ಎಷ್ಟು ಗೊತ್ತೇ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿದ್ಯಾಗಮ ಯೋಜನೆ ಇದೀಗ ಮಕ್ಕಳು ಹಾಗೂ ಶಿಕ್ಷಕರಿಗೆ ಸಾವಿನ ಮನೆಯಾಗಿದೆಯೇ?

ಈ ಯೋಜನೆ ಜಾರಿಯಾದ ಬಳಿಕ ರಾಜ್ಯದಲ್ಲಿ 110 ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ವಿದ್ಯಾಗಮ ಯೋಜನೆಯಡಿ ಕಲಬುರಗಿಯಲ್ಲಿ ವಾಠಾರ ಶಾಲೆಗೆ ಹೋಗಿದ್ದ ನಾಲ್ವರು ವಿದ್ಯಾರ್ಥಿಗಳಿಗೆ ಇಂದು ಕೊರೊನಾ ಸೋಂಕು ದೃಢಪಡುತ್ತಿದ್ದಂತೆಯೇ ಇದೀಗ ಈ ಪ್ರಕರಣ ಮುನ್ನೆಲೆಗೆ ಬಂದಿದ್ದು , ವಿದ್ಯಾಗಮ ಯೋಜನೆಯಿಂದಾಗಿ ಇದೀಗ ಶಿಕ್ಷಕರು ಹಾಗೂ ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ.

ವಿದ್ಯಾಗಮ ಯೋಜನೆ ಬಳಿಕ ರಾಜ್ಯದಲ್ಲಿ 110 ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಅದರಲ್ಲೂ ಬೆಳಗಾವಿ ಜಿಲ್ಲೆಯೊಂದರಲ್ಲೇ 58 ಶಿಕ್ಷಕರು ಕೊರೊನಾಗೆ ಬಲಿಯಾಗಿದ್ದು, ಅವರಲ್ಲಿ 18 ಶಿಕ್ಷಕರು ವಿದ್ಯಾಗಮಯೋಜನೆ ಪಾಠಮಾಡಲು ತೆರಳಿದವರಾಗಿದ್ದಾರೆ. ಚಿಕ್ಕೋಡಿಯಲ್ಲಿ 17 ಶಿಕ್ಷಕರು ಕೊರೊನಾಗೆ ಸಾವನ್ನಪ್ಪಿದ್ದು, ಅವರಲ್ಲಿ 3 ಶಿಕ್ಷಕರು ವಿದ್ಯಾಗಮದಲ್ಲಿ ಪಾಲ್ಗೊಂಡವರಾಗಿದ್ದಾರೆ. ಬಾಗಲಕೋಟೆಯಲ್ಲಿ 23 ಶಿಕ್ಷಕರು ಸೋಂಕಿಗೆ ಬಲಿಯಾಗಿದ್ದರೆ ಅದರಲ್ಲಿ 6 ಶಿಕ್ಷಕರು ಈ ಯೋಜನೆಯಲ್ಲಿ ಪಾಲ್ಗೊಂಡವರಾಗಿದ್ದಾರೆ. ಕೊಪ್ಪಳದಲ್ಲಿ 12 ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದರೆ. ಅವರಲ್ಲಿ 11 ಶಿಕ್ಷಕರು ವಿದ್ಯಾಗಮದಲ್ಲಿ ಪಾಲ್ಗೊಂಡಿದ್ದರು. ಹಾವೇರಿ ಜಿಲ್ಲೆಯಲ್ಲಿ ಇಬ್ಬರು ಶಿಕ್ಷಕರು ಈ ಯೋಜನೆಗೆ ಬಲಿಯಾಗಿದ್ದಾರೆ. ಚಿತ್ರದುರ್ಗ ಹಾಗೂ ಬಳ್ಳಾರಿಯಲ್ಲಿ ತಲಾ 10 ಶಿಕ್ಷಕರು ಮಹಾಮಾರಿಗೆ ಬಲಿಯಾಗಿದ್ದು ಈ ಎಲ್ಲಾ ಶಿಕ್ಷಕರು ಈ ಯೋಜನೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.

ಉಳಿದಂತೆ ಈ ಯೋಜನೆಯಲ್ಲಿ ಪಾಲ್ಗೊಂಡ ಹಾಸನ ಜಿಲ್ಲೆಯ ಮೂವರು ಹಾಗೂ ಉಡುಪಿ ಜಿಲ್ಲೆಯಲ್ಲಿ ಓರ್ವ ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಕೊರೊನಾ ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಶಾಲೆಗಳನ್ನು ಆರಂಭಿಸಬೇಕೇ ಬೇಡವೇ ಎಂಬ ಬಗ್ಗೆ ರಾಜ್ಯಾದ್ಯಂತ ಚರ್ಚೆ ನಡೆಯುತ್ತಿದೆ. ಈ ನಡುವೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿದ್ಯಾಗಮ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದೆ. ಆದರೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಇನ್ನು ಶಾಲೆ ಆರಂಭವಾದರೆ ಗತಿ ಏನು ಎನ್ನುವ ಪ್ರಶ್ನೆ ಎದುರಾಗಿದೆ.

ವಿಪರ್ಯಾಸವೆಂದರೆ ಇಂತಹ ಶಿಕ್ಷಕರಿಗೆ ಕೊರೋನಾ ಕರ್ತವ್ಯದಲ್ಲಿ ಸಾವಿಗೀಡಾದವರಂತೆ ಯಾವುದೇ ಪರಿಹಾರ ದೊರೆಯುತ್ತಿಲ್ಲ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button