ವಿಶ್ವಾಸ ಸೋಹೋನಿ
ಗಣೇಶ ಹಿಂದೂ ಧರ್ಮದ ಪ್ರಮಖ ದೇವತೆಗಳಲ್ಲಿ ಒಬ್ಬ, ಭಾರತ ಮತ್ತು ನೇಪಾಳದಲ್ಲಿ ವಿಶೇಷವಾಗಿ ಇವನಿಗೆ ಪೂಜೆ ಸಲ್ಲುತ್ತದೆ. ಭಾದ್ರಪದ ಮಾಸದಲ್ಲಿ ಬರುವ ಚೌತಿಯ ದಿನ ಗಣೇಶ-ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಗಣೇಶನಿಗೆ ಕನ್ನಡದಲ್ಲಿ ‘ಗಣೇಶ’, ಮಳೆಯಾಳಂ ಮತ್ತು ಮರಾಠಿ ಭಾಷೆಗಳಲ್ಲಿ ‘ವಿನಾಯಕ’, ತಮಿಳು ಭಾಷೆಯಲ್ಲಿ ‘ವಿನಾಯಗರ್’, ‘ಪಿಳ್ಳಾಯರ್’, ತೆಲುಗಿನಲ್ಲಿ ‘ವಿನಾಯಕುಡು’ ಎಂದು ಕರೆಯಲಾಗುತ್ತದೆ.
ಭಾರತದ ಅನೇಕ ನಗರಗಳಲ್ಲಿ, ಅದರಲ್ಲಿಯೂ ವಿಶೇಷವಾಗಿ ಮುಂಬೈ, ಪೂನ, ಬೆಳಗಾವಿ, ಹುಬ್ಬಳ್ಳಿ-ಧಾರವಾಡದಲ್ಲಿ 5-7-11 ದಿನಗಳವರೆಗೆ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಕರೋನ ಕಾಟ ಮತ್ತು ಕಠೋರ ನಿಯಮದ ಪಾಲನೆಯಿಂದ ಅದಕ್ಕೆ ಕಡಿವಾಣ ಹಾಕಲಾಗಿದೆ.
ಆ ಷರತ್ತುಗಳು : ಗರಿಷ್ಠ 5 ದಿನ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ; ಮನೆಯಲ್ಲಿ ಎರಡು, ಸಾರ್ವಜನಿಕ ನಾಲ್ಕು ಅಡಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ; ಸಾರ್ವಜನಿಕ ಮೂರ್ತಿಗೆ ಪೋಲಿಸರ ಅನುಮತಿ; ಶಾಲಾ ಕಾಲೇಜಗಳಲ್ಲಿ ನಿರ್ಬಂಧ; ದೇವಾಲಯಗಳಲ್ಲಿ ಸರಳವಾಗಿ ಆಚರಿಸಲು ಅನುಮತಿ; ಪೆಂಡಾಲ್ ಅಳವಡಿಕೆಗೂ ನಿಯಮ; ಒಂದು ವಾರ್ಡಗೆ ಒಂದೇ ಗಣೇಶ; ಗಡಿ ಜಿಲ್ಲೆಗಳಲ್ಲಿ ಪಾಸಿಟಿವಿಟಿ 2% ಕ್ಕಿಂತ ಕಡಿಮೆ ಇದ್ದರೆ ಮಾತ್ರ ಅವಕಾಶ; ಸಂಗೀತ ಮನೋರಂಜನೆಗೆ ಕಡಿವಾಣ; ಜಿಲ್ಲಾಡಳಿತ ಸೂಚಿಸಿದ ಸ್ಥಳಗಳಲ್ಲಿ ಮಾತ್ರ ಮೂರ್ತಿಗಳ ವಿಸರ್ಜನೆ; ಆಯೋಜಕರಿಗೆ ಕರೋನ ನೆಗೆಟಿವ್ ವರದಿ ಮತ್ತು ಲಸಿಕೆ ಪಡೆದ ವರದಿ ಕಡ್ಡಾಯ; ರಾತ್ರಿ ಕರ್ಫ್ಯೂ ಮುಂದುವರಿಕೆ ಮುಂತಾದ 17 ಮಾರ್ಗಸೂಚಿ ಇದೆ.
ಗಣಪತಿಯ ಶರೀರವು ವಿಚಿತ್ರವಾಗಿದೆ. ತನ್ನದೇ ಆದ ಮೌಲ್ಯ ಮತ್ತು ವೈಶಿಷ್ಟತೆಯನ್ನು ಹೊಂದಿದೆ. ಆನೆಯ ತಲೆ ನಂಬಿಕೆ, ಬುದ್ಧಿವಂತಿಕೆ ಮತ್ತು ವಿವೇಚನಾಶಕ್ತಿಯ ಪ್ರತೀಕವಾಗಿದೆ. ಏಕದಂತವು ಎಲ್ಲಾ ದ್ವಂದ್ವಗಳನ್ನು ಮೀರಿ ನಿಲ್ಲುವ ಸಾಮರ್ಥ್ಯದ ಪ್ರತೀಕವಾಗಿದೆ. ವಿಶಾಲವಾದ ಕಿವಿಗಳು ವಿವೇಕ, ನೆರವು, ಸಹಾಯ ಕೋರುವ ಜನಗಳ ಮೊರೆಯನ್ನು ಆಲಿಸುವ ಸಾಮರ್ಥ್ಯವನ್ನು ಸೂಚಿಸುವುದಲ್ಲದೇ, ಆಧ್ಯಾತ್ಮಿಕ ಸತ್ಯಗಳ ಬಗ್ಗೆ ಚಿಂತನೆ ಮಾಡುವುದನ್ನು ಸೂಚಿಸುತ್ತದೆ. ಶ್ರೇಷ್ಠ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಶ್ರವಣ-ಶಕ್ತಿಯ ಪ್ರಾಮುಖ್ಯತೆಯನ್ನು ವಿಶಾಲವಾದ ಕಿವಿಗಳು ಸೂಚಿಸುತ್ತವೆ. ವಕ್ರವಾದ ಸೊಂಡಿಲು ಸತ್ಯ ಮತ್ತು ಮಿಥ್ಯಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವಂತಹ ಬುದ್ಧಿಶಕ್ತಿಯ ಸಾಮರ್ಥ್ಯವನ್ನು ಸೂಚಿಸುತ್ತದೆ. ಹಣೆಯ ಮೇಲೆ ಚಿತ್ರಿಸಲ್ಪಟ್ಟ ತ್ರಿಶೂಲವು ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲವನ್ನು ಸೂಚಿಸುತ್ತಾ, ಅವುಗಳ ಮೇಲೆ ಗಣೇಶನ ಪ್ರಭುತ್ವವನ್ನು ತೋರಿಸುತ್ತದೆ. ಗಣೇಶನ ದೊಡ್ಡ ಹೊಟ್ಟೆ ಪ್ರಪಂಚದ ದು:ಖ, ಸಂಕಟಗಳನ್ನೆಲ್ಲವನ್ನು ನುಂಗಿ ಜಗತ್ತನ್ನು ರಕ್ಷಿಸುವ ಸಾಮರ್ಥ್ಯವನ್ನು ಸೂಚಿಸುತ್ತದೆ. ಗಣೇಶನ ಪಾದಗಳು ಇಹ ಮತ್ತು ಪರಲೋಕಗಳಲ್ಲಿ ಬಾಳುವ ಸಾಮರ್ಥ್ಯವನ್ನು ಸೂಚಿಸುತ್ತವೆ.
ಅವನ ದೇಹ ದೇವನಾಗರಿ ಅಕ್ಷರದ ‘ಓಂ’ ಅಕ್ಷರದಂತಿದೆ. ಹಾಗಾಗಿ ಗಣೇಶನನ್ನು ‘ಓಂಕಾರ’ ಎಂದು ಕರೆಯುತ್ತಾರೆ. ವಿಶ್ವಕಲ್ಯಾಣದ ಸೇವೆಗಾಗಿ ಅವನಿಗೆ ವಿಶ್ವೋದ್ಧಾರಕ, ಜಗದೋದ್ಧಾರಕ ಎಂದು ಕರೆಯುತ್ತಾರೆ. ಗಣಪತಿ ಎಂದರೆ ‘ಗಣಗಳ-ಸಮೂಹಗಳ ಅಧಿಪತಿ’. ಗಣೇಶನನ್ನು ವಿಶ್ವದ ಮಾನವ ಸಮಾಜಕ್ಕೆ ಒಡೆಯ, ಸರ್ವಗುಣಗಳಧಾರಿ, ಸರ್ವವಿದ್ಯಾ ಪಾರಂಗತ, ಏಕದಂತ, ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಸರ್ವರ ಮಂಗಳಕಾರಿ ಆಗಿರುವುದರಿಂದ ಅವನಿಗೆ ‘ಮಂಗಳಮೂರ್ತಿ’; ವಿಘ್ನಗಳನ್ನು ವಿನಾಶ ಮಾಡುವುದರಿಂದ ‘ವಿಘ್ನೇಶ್ವರ’; ದು:ಖವನ್ನು ದೂರಮಾಡಿ ಸುಖವನ್ನು ನೀಡುವುದರಿಂದ ದು:ಖಹರ-ಸುಖಕರನೆಂದು ಮಹಿಮೆ ಮಾಡಲಾಗುತ್ತದೆ. ಲಂಬೋದರ ಎಂದರೆ ‘ವಿಶಾಲ ಹೊಟ್ಟೆ’ ಅರ್ಥಾತ್ ಎಲ್ಲರ ತಪ್ಪುಗಳನ್ನು ತನ್ನ ಹೊಟ್ಟೆಗೆ ಹಾಕಿಕೊಂಡು ಕ್ಷಮಿಸುವವನು ಎಂದರ್ಥ. ಹೀಗೆ ಅವನ ಅನೇಕ ನಾಮಗಳು ಗುಣಗಳವಾಚಕಗಳಾಗಿವೆ. ಇಲಿ ಚಂಚಲ ಮನಸ್ಸಿನ ಸಂಕೇತವಾಗಿದೆ. ಇಲಿಯ ಮೇಲಿನ ಸವಾರಿಯು ಮನಸ್ಸು-ಬುದ್ಧಿಯ ಮೇಲೆ ನಿಯಂತ್ರಣ ಹೊಂದಿರುವುದನ್ನು ಸೂಚಿಸುತ್ತದೆ. ಗಜಮುಖವು ಬಲಶಾಲಿ ಅಥವಾ ಶಕ್ತಿಯ ಪ್ರತೀಕವಾಗಿದೆ. ಮೋದಕವು ಸ್ನೇಹ ಮತ್ತು ಮಧುರತೆಯ ಸಂಕೇತವಾಗಿದೆ.
ಸಾಮರಸ್ಯ, ಏಕತೆ, ಸಂಘಟನೆಯ ಉದ್ದೇಶದಿಂದ `ಲೋಕಮಾನ್ಯ ತಿಲಕರು’ ಪ್ರಾರಂಭಿಸಿದ ಸಾರ್ವಜನಿಕ ಗಣಪನ ಉತ್ಸವ ಇಂದು ಕರಾಳ ರೂಪವನ್ನು ತಾಳಿದೆ. ಗಣಪನ ಸ್ಥಾಪನೆ-ವಿರ್ಸಜನೆಯ ಸಮಯದಲ್ಲಿ ಅನೇಕ ಪ್ರಕಾರದ ಘರ್ಷಣೆ, ಗಲಾಟೆ, ಹಿಂಸೆಗಳು ನಡೆಯತ್ತಿವೆೆ. ಗಣಪತಿಯ ಮೂರ್ತಿಗಳನ್ನು ಪ್ಲಾಸ್ಟ್ರ್ ಆಫ್ ಪ್ಯಾರೀಸ್‌ನಿಂದ ಮಾಡುತ್ತಾರೆ. ಅನೇಕ ರಾಸಾಯನಿಕ ಬಣ್ಣ ಮತ್ತು ಸಿಡಿಮದ್ದುಗಳಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಇದಕ್ಕೆ ವಿಚಾರವಂತರು, ಬುದ್ಧಿಜೀವಿಗಳು, ಚಿಂತಕರು ಎಲ್ಲರೂ ಸೇರಿದರೆ ಕಡಿವಾಣ ಹಾಕಬಹುದು. ವಾಸ್ತವವಾಗಿ ಗಣಪತಿಯ ಹಬ್ಬವು ನಮಗೆ ಸುಖ, ಶಾಂತಿ ಸಮೃದ್ಧಿ ತರುವ ಹಬ್ಬವಾಗಬೇಕು.
ಗಣೇಶನ ಮೂರ್ತಿಯನ್ನು ಮಣ್ಣಿನಿಂದ ತಯಾರಿಸಿ, ಅದಕ್ಕೆ ಬಣ್ಣವನ್ನು ಹಚ್ಚಿ ಶೃಂಗಾರ ಮಾಡುತ್ತಾರೆ. ನಂತರ ಅದಕ್ಕೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ಕೆಲವು ದಿನಗಳವರೆಗೆ ಪೂಜಿಸಿದ ನಂತರ ಗಣಪನ ವಿರ್ಸಜನೆ ಮಾಡುವರು. ಆಧ್ಯಾತ್ಮಿಕ ಜ್ಞಾನದಲ್ಲಿ ದೇಹವನ್ನು ಮಣ್ಣಿಗೆ ಹೋಲಿಸಲಾಗುತ್ತದೆ. ಈ ದೇಹವು ಪಂಚತತ್ವ ಗಳಿಂದ ಆಗಿದ್ದು, ಆತ್ಮವು ದೇಹ ತ್ಯಜಿಸಿದ ನಂತರ ದೇಹವು ಮತ್ತೆ ಪಂಚತತ್ವಗಳಲ್ಲಿ ಲೀನವಾಗುತ್ತದೆ. ಇದರ ಪ್ರತೀಕವಾಗಿಯೇ ಗಣೇಶನನ್ನು ಮಣ್ಣಿನಿಂದ ತಯಾರಿಸಿ ಮತ್ತೆ ಮಣ್ಣಿಗೆ ಸೇರಿಸಲಾಗುತ್ತದೆ. ನಾವು ಈ ದೇಹವಲ್ಲ, ನಾವು ಆತ್ಮ-ಜ್ಯೋತಿಗಳಾಗಿದ್ದೇವೆ. ನಮಗೆ ಜಾತಿಭೇದಗಳಿಲ್ಲ. ನಾವೆಲ್ಲರೂ ದಿವ್ಯಗುಣಗಳ ಶೃಂಗಾರ ಮಾಡಿಕೊಂಡಾಗ ಪೂಜೆಗೆ ಯೋಗ್ಯರಾಗುವೆವು. ಪಂಚ ವಿಕಾರಿಗುಣಗಳ ತ್ಯಾಗದಿಂದ ಮಾತ್ರ ದಿವ್ಯಗುಣಗಳ ಶೃಂಗಾರ ಮಾಡಿಕೊಳ್ಳಲು ಸಾಧ್ಯವಿದೆ. ಬ್ರಹ್ಮಚಾರಿ ವಿನಾಯಕನಿಗೆ ಸಿದ್ಧಿ ಮತ್ತು ಬುದ್ಧಿ ಎಂಬ ಇಬ್ಬರು ಪತ್ನಿಯರನ್ನು ತೋರಿಸಲಾಗುತ್ತದೆ. ವಾಸ್ತವಿಕವಾಗಿ ಇವರೆಬ್ಬರೂ ಗಣೇಶನ ವಿಶಾಲ ಬುದ್ಧಿ ಮತ್ತು ಸಿದ್ಧಿಯ ಪ್ರತೀಕವಾಗಿದ್ದಾರೆ.
ನಮ್ಮ ಜೀವನವು ಗಣಪತಿಯಂತೆ ನಾಲ್ಕು ದಿನಗಳ ಬಾಳು. ಆದ್ದರಿಂದ ಈ ಅಲ್ಪ ಸಮಯದಲ್ಲಿ ಗಣೇಶನಂತೆ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಜೀವನವನ್ನು ಸುಖ-ಸಮೃದ್ಧಿಯಿಂದ ನಿರ್ವಿಘ್ನ ಮಾಡಿಕೊಳ್ಳೋಣ.
ವಕ್ರ ತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ!
ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದ!!
(ಲೇಖಕರು -ವಿಶ್ವಾಸ ಸೋಹೋನಿ
ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್,
7349632530 ,9483937106)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ