
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: “”ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾದ ವಿಜಯ ಸಂಕಲ್ಪ ಯಾತ್ರೆ ಬುಧವಾರ (ಮಾ.8) ಮಧ್ಯಾಹ್ನ 3 ಗಂಟೆಗೆ ನಗರಕ್ಕೆ ಆಗಮಿಸಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಭವ್ಯವಾದ ರೋಡ್‍ಶೋ ಆಯೋಜಿಸಲಾಗಿದೆ” ಎಂದು ಮುಜರಾಯಿ, ವಕ್ಫ್ ಹಾಗೂ ಹಜ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದ ಜೊಲ್ಲೆ ಶಿಕ್ಷಣ ಸಂಕೀರ್ಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಸಹಸಂಘಟನೆ ಕಾರ್ಯದರ್ಶಿ ಸಿ.ಟಿ. ರವಿ, ಸಚಿವ ಭೈರತಿ ಬಸವರಾಜ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಮತೇಶ ಕವಟಗಿಮಠ ಅವರ ಉಪಸ್ಥಿತಿಯಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ದೊರೆಯಲಿದೆ” ಎಂದರು.
“ಈ ಯಾತ್ರೆಯು ನಗರದ ಬಸವೇಶ್ವರ ವೃತ್ತದಿಂದ ಪ್ರಾರಂಭಗೊಂಡು, ಬಸ್ ನಿಲ್ದಾಣ ವೃತ್ತ, ಸಾಖರವಾಡಿ, ಬೆಳಗಾವಿ ನಾಕಾ, ಶಿವಾಜಿ ಚೌಕ್, ಚಾಟೆ ಮಾರ್ಕೇಟ್, ತಾನಾಜಿ ಚೌಕ್, ಕೋಠಿವಾಲೆ ಕಾರ್ನರ್ ಮಾರ್ಗವಾಗಿ ಕಿತ್ತೂರ ರಾಣಿ ಚನ್ನಮ್ಮ ವೃತ್ತಕ್ಕೆ ಬಂದು ಕೊನೆಗೊಳ್ಳಲಿದೆ. ಯಾತ್ರೆಯ ಅಂಗವಾಗಿ ಇಡೀ ನಗರವನ್ನು ಕೇಸರಿಮಯಗೊಳಿಸಲಾಗುತ್ತಿದೆ. ಎಲ್ಲ ಕಾರ್ಯಕರ್ತರು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು” ಎಂದು ಶಶಿಕಲಾ ಜೊಲ್ಲೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಯವಂತ ಭಾಟಲೆ, ರಾಜೇಂದ್ರ ಗುಂದೇಶಾ, ಪ್ರಣವ ಮಾನವಿ, ಬಂಡಾ ಘೋರ್ಪಡೆ, ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ