ಪ್ರಗತಿವಾಹಿನಿ ಸುದ್ದಿ: ವಿಜಯನಗರ ಜಿಲ್ಲೆಯಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಕ್ಕೆ ಪರಿಹಾರ ವಿಳಂಬವಾಗುತ್ತಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವಿಜಯನಗರ ಜಿಲ್ಲೆಯಲ್ಲಿ 2023-24 ರಲ್ಲಿ ಒಟ್ಟು 34 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಾಲಿನಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಅಧಿಕಾರಿಗಳ ಮಾಹಿತಿಗೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಲ್ಲಿ ಪ್ರತಿಯೊಬ್ಬ ರೈತರ ಕುಟುಂಬಕ್ಕೆ ಪರಿಹಾರ ದೊರಕಿದೆಯೇ ಎಂದು ಪ್ರಶ್ನಿಸಿದರು.
ಉಳಿದೆಲ್ಲರಿಗೂ ಸರಿಯಾದ ಸಮಯಕ್ಕೆ ಆತ್ಮಹತ್ಯೆ ಪರಿಹಾರದ 5 ಲಕ್ಷ ಮೊತ್ತ ಜಮೆ ಆಗಿದೆ. ಐದು ಮಂದಿ ರೈತರ ಕುಟುಂಬಕ್ಕೆ ಮಾತ್ರ ತಾಂತ್ರಿಕ ತೊಂದರೆ ಆಗಿದ್ದು ಏಕೆ? ಎಫ್ಎಸ್ಎಲ್ ವರದಿ 20 ದಿನದೊಳಗೆ ಬರುತ್ತದೆ. ಆದರೂ ಪ್ರಕ್ರಿಯೆ ತಡೆವಾಗಿದ್ದಕ್ಕೆ ಮುಖ್ಯಮಂತ್ರಿಗಳು ಗರಂ ಆಗಿ ತರಾಟೆಗೆ ತೆಗೆದುಕೊಂಡರು. ರೈತರ ಬದುಕು ಮತ್ತು ಬವಣೆಗಳ ಬಗ್ಗೆ ಚೆಲ್ಲಾಟ ಆಡಿದರೆ ಹುಷಾರ್ ಎಂದು ಎಚ್ಚರಿಸಿದರು.
ಸರ್ಕಾರ ಹಣ ಕೊಟ್ಟಿದೆ: ರೈತರಿಗೆ ತಲುಪಿಸಲು ಏನು ತೊಂದರೆ?
ಸರ್ಕಾರ ಅಗತ್ಯವಿದ್ದಷ್ಟು ಹಣವನ್ನು ಕೊಟ್ಟು ಯಾವ ಕಾಲ ಆಯ್ತು. ಆದರೂ ಸರ್ಕಾರ ಕೊಟ್ಟ ಹಣವನ್ನು ರೈತರ ಕುಟುಂಬಗಳಿಗೆ ತಲುಪಿಸಲು ಏನು ತೊಂದರೆ ಆಗಿದೆ ಎಂದು ಪ್ರಶ್ನಿಸಿದ ಸಿಎಂ ಇದನ್ನು ಸಹಿಸುವುದಿಲ್ಲಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮದ್ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ, ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಗವಿಯಪ್ಪ, ಕಂಪ್ಲಿ ಗಣೇಶ್, ಲತಾ ಎಂ.ಪಿ.ಪ್ರಕಾಶ್, ಶ್ರೀನಿವಾಸ್ ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ