Kannada NewsKarnataka News

ಕೊರೋನಾ ವಾರಿಯರ್ – ವಿಮಲ್ ಫೌಂಡೇಶನ್ ಚೇರಮನ್ ಕಿರಣ್ ಜಾಧವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ಮಹಾಮಾರಿಯಿಂದಾಗಿ ದೇಶಾದ್ಯಂತ 3.0 ಲಾಕ್ ಡೌನ್ ನಡೆಯುತ್ತಿದೆ. ಕೊರೋನಾ ಮತ್ತು ಲಾಕ್ ಡೌನ್ ನಿಂದಾಗಿ ಪರಿಣಾಮವಾಗದ ಜನರೂ ಯಾರೂ ಇಲ್ಲ. ಕೆಲವರಿಗೆ ಹೆಚ್ಚು ಪ್ರತಿಕೂಲ ಪರಿಣಾಮ ಬೀರಿದ್ದರೆ ಇನ್ನು ಕೆಲವರಿಗೆ ಕಡಿಮೆಯಾಗಿರಬಹುದು. ಉದ್ಯೋಗ, ವ್ಯವಹಾರಗಳಂತೂ ಬಹುತೇಕ ನೆಲಕಚ್ಚಿವೆ. ಸರಕಾರಗಳ ಆದಾಯವೇ ಪಾತಾಳಕ್ಕಿಳಿದಿರುವಾಗ ಜನಸಾಮಾನ್ಯರ ಪರಿಸ್ಥಿತಿ ಹೇಳತೀರದು.

ಇಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ಹಲವು ವರ್ಗದ ಜನರು ತಮ್ಮ ಜೀವದ ಹಂಗು ತೊರೆದು ಜನರ ಸೇವೆಯಲ್ಲಿ ನಿರತರಾಗಿದ್ದಾರೆ. ಸರಕಾರಿ ಸೇವೆಯಲ್ಲಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ವಿವಿಧ ಇಲಾಖೆಗಳ ನೌಕರರು ನಿರಂತರವಾಗಿ ಕೊರೋನಾ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇವರೆಲ್ಲರ ಜೊತೆಗೆ ಹಲವಾರು ಖಾಸಗಿ ವ್ಯಕ್ತಿಗಳು, ಉದ್ಯಮಿಗಳೂ ಬಡವರ, ನಿರ್ಗತಿಕರ ಸೇವೆಯಲ್ಲಿ ನಿರತರಾಗಿದ್ದಾರೆ. ಅಂತವರನ್ನು ಪರಿಚಯಿಸುವ ಕೆಲಸವನ್ನು ಪ್ರಗತಿವಾಹಿನಿ  ಮಾಡಲಿದೆ.  ಈ ರೀತಿಯ ಸೇವೆಯಲ್ಲಿ ನಿರತರಾಗಿರುವವರು ಮಾಹಿತಿಯನ್ನು ವಾಟ್ಸಪ್ (ಮೊಬೈಲ್ -8197712235) ಮಾಡಬಹುದು.

ವಿಮಲ್ ಫೌಂಡೇಶನ್ ಚೇರಮನ್ ಕಿರಣ್ ಜಾಧವ

ಲಾಕ್ ಡೌನ್ ಘೋಷಣೆಯಾದ ದಿನದಿಂದಲೇ  ಬೆಳಗಾವಿಯ ವಿಮಲ್ ಫೌಂಡೇಶನ್ ಚೇರಮನ್ ಕಿರಣ ಜಾಧವ ತಮ್ಮ ಸ್ನೇಹಿತರು ಮತ್ತು ಪರಿವಾರವನ್ನು ಕಟ್ಟಿಕೊಂಡು ಮನೆಯಿಂದ ಹೊರಬಂದರು. ಕೊರೋನಾ ಎಷ್ಟೊಂದು ಅಪಾಯಕಾರಿ ಎನ್ನುವುದು ಅವರಿಗೆ ಅರಿವಿದೆ. ಆದರೆ ಬಡವರು, ನಿರ್ಗತಿಕರ ಸಂಕಷ್ಟ ಅರಿತಿದ್ದ ಕಿರಣ ಜಾಧವ ಮನೆಯಲ್ಲಿ ಕುಳಿತುಕೊಳ್ಳದೆ ನಿರಂತರವಾಗಿ ಕೆಲಸ ಮಾಡಿದರೆ.

ಕಿರಣ್ ಜಾಧವ ಮೂಲತಃ ಬಿಲ್ಡರ್. ತಮ್ಮ ತಾಯಿಯ ಹೆಸರಲ್ಲಿ ಫೌಂಡೇಶನ್ ಕಟ್ಟಿ ತನ್ಮೂಲಕ ಹಿಂದಿನಿಂದಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜಕ್ಕೆ ಕಂಟಕ ಬಂದಾಗಲೆಲ್ಲ ಅವರು ಬೀದಿಗಿಳಿದು ಕೆಲಸ ಮಾಡಿದ್ದಾರೆ. ಕಳೆದ ವರ್ಷ ಪ್ರವಾಹ ಬಂದ ಸಂದರ್ಭದಲ್ಲಿ ಸತತವಾಗಿ ಕಷ್ಟದಲ್ಲಿರುವವರೆ ಸೇವೆ ಮಾಡಿದ್ದಾರೆ. ಇದೀಗ ಕೊರೋನಾ ಸಂದರ್ಭದಲ್ಲಿ ಸಹ ಅವಿಶ್ರಾಂತವಾಗಿ ದುಡಿಯುತ್ತಿದ್ದಾರೆ.

ಬಲಿಷ್ಠ ತಂಡ

ಕಿರಣ್ ಜಾಧವ ಸಂಘಪರಿವಾರದಿಂದ ಬೆಳೆದವರು. ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಆದ ಬಲಿಷ್ಠ ತಂಡ ಕಟ್ಟಿಕೊಂಡಿದ್ದಾರೆ. ಕೊರೋನಾ ಸಂಕಷ್ಟ ಶುರುವಾದ ತಕ್ಷಣ ತಮ್ಮ ಕಾರ್ಯಕರ್ತರ ಸಭೆ ನಡೆಸಿ ಯಾವ ರೀತಿಯಲ್ಲಿ ಸಮಾಜದ ಸೇವೆ ಮಾಡಬಹುದು ಎನ್ನುವ ಕುರಿತು ಚರ್ಚಿಸಿದ್ದಾರೆ.

ಸಂಘಪರಿವಾರ ಹಾಗೂ ಬಿಜೆಪಿಯ ಹಿರಿಯರ ಸಲಹೆ ಪಡೆದಿದ್ದಾರೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಪ್ರತಿ ಹಂತದಲ್ಲೂ ಮಾರ್ಗದರ್ಶನ ನೀಡಿದ್ದಾರೆ. 

ಕೊರೋನಾದಲ್ಲಿ ಕಷ್ಟದಲ್ಲಿರುವವರಿಗೆ ಸಾವಿರಾರು ದಿನಸಿ ಕಿಟ್ ಗಳನ್ನು ತಯಾರಿಸಿ, ತರಕಾರಿಗಳ ಕಿಟ್ ತಯಾರಿಸಿ ಹಂಚಿದ್ದಾರೆ. ಸಕ್ಕರೆ, ಕಾಳು, ರವೆ, ಎಣ್ಣೆ, ಈರುಳ್ಳಿ, ಬಟಾಟೆ, ಅವಲಕ್ಕಿ, ಸೋಪ್, ಪೇಸ್ಟ್ ಹೀಗೆ ಹತ್ತು ಹಲವು ದಿನನಿತ್ಯ ಬಳಸುವ ಸಾಮಗ್ರಿಗಳ ಕಿಟ್ ತಯಾರಿಸಿ ಕೇಂದ್ರ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿ, ಶಾಸಕ ಅನಿಲ ಬೆನಕೆ ಅವರ ಮೂಲಕವೂ ಹಲವೆಡೆ ಹಂಚಿಸಿದ್ದಾರೆ. ಮಾಸ್ಕ್, ಸೆನಿಟೈಸರ್ ಸೇರಿದಂತೆ ಸುರಕ್ಷತಾ ಸಾಮಗ್ರಿಗಳನ್ನು ವಿತರಿಸಿದ್ದಾರೆ.

ಕಿರಣ್ ಜಾಧವ ಕೊರೋನಾದಿಂದ ಸಂಕಷ್ಟದಲ್ಲಿರುವವರ ಸೇವೆಯಲ್ಲಿ ನಿರತರಾಗಿರುವುದನ್ನು ಅರಿತ ಹಲವರು ಅವರಿಗೆ ಫೋನ್ ಮಾಡತೊಡಗಿದರು. ತಮಗೆ ಔಷಧಗಳಿಲ್ಲ ಎಂದೂ ಕೆಲವರು ಅನಾರೋಗ್ಯ ಕಾಡುತ್ತಿದ್ದು ಸಹಾಯ ಮಾಡಿ ಎಂದು ಅಂಗಲಾಚುತ್ತಿದ್ದರು.

ವಿಮಲ್ ಫೌಂಡೇಶನ್ ದಿನದ 24 ಗಂಟೆಯೂ ಸೇವೆ ಸಲ್ಲಿಸಲು ಅಂಬುಲನ್ಸ್ ಹೊಂದಿದ್ದು, ನಗರವಷ್ಟೆ ಅಲ್ಲದೆ ಗ್ರಾಮೀಣ ಪ್ರದೇಶಗಳಿಂದಲೂ ಹಲವಾರು ರೋಗಿಗಳನ್ನು ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ. ಹಲವರಿಗೆ ಮನೆ ಬಾಗಿಲಿಗೆ ಔಷಧಗಳನ್ನು ಪೂರೈಸಿದ್ದಾರೆ.

ವಿಮಲ್ ಫೌಂಡೇಶನ್ ಸೇವೆ ನೋಡಿ ಮೆಚ್ಚಿದ ಹಲವರು ತಾವೂ ದೇಣಿಗೆ ನೀಡಲು ಮುಂದೆ ಬಂದರು. ಅವುಗಳನ್ನೂ ಅತ್ಯಂತ ವ್ಯವಸ್ಥಿತವಾಗಿ ಬಡವರಿಗೆ ಹಂಚಿದರು.

ರಾಜಕೀಯವಾಗಿಯೂ ಒಳ್ಳೆಯ ಹೆಸರು

ಕಿರಣ್ ಜಾಧವ ಒಬ್ಬ ಜನಪ್ರತಿನಿಧಿ ಅಲ್ಲದಿದ್ದರೂ ಅನೇಕ ಜನಪ್ರತಿನಿಧಿಗಳಿಗಿಂತ ಹೆಚ್ಚಾಗಿ ಸ್ವಂತ ಹಣದಿಂದ ಬಡವರು, ನಿರ್ಗತಿಕರ ಸೇವೆ ಮಾಡುತ್ತಿದ್ದಾರೆ. ಬೆಳಗಾವಿ ಮಹಾನಗರ ಹಾಗೂ ಸುತ್ತಮುತ್ತ ಈವರೆಗೆ ಸಾವಿರಾರು ಹೆಚ್ಚು ಕಿಟ್ ಗಳನ್ನು ವಿಮಲ್ ಫೌಂಡೇಶನ್ ಹಂಚಿದೆ.

ತಮ್ಮ ಕ್ರಿಯಾಶೀಲತೆ ಮತ್ತು ನಿಸ್ವಾರ್ಥ ಸೇವೆಯಿಂದಾಗಿ ರಾಜಕೀಯವಾಗಿ ಕಿರಣ ಜಾಧವ ಪಕ್ಷದಲ್ಲೂ ಒಳ್ಳೆಯ ಹೆಸರು ಗಳಿಸಿಕೊಂಡಿದ್ದಾರೆ. ಹೆಸರು ಮತ್ತು ಅಧಿಕಾರದ ಬೆನ್ನತ್ತಿ ಹೋದವರಲ್ಲ.

ವಿಮಲ್ ಫೌಂಡೇಶನ್ ಕೇವಲ ಸಾಮಾಜಿಕ ಕೆಲಸವಲ್ಲದೆ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳ ಮೂಲಕವೂ ಕ್ರಿಯಾಶೀಲವಾಗಿದೆ. ಫೌಂಡೇಶನ್ ಸದಸ್ಯರು ಶಿವಜಯಂತಿ, ಗಣೇಶೊತ್ಸವಗಳಲ್ಲೂ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಾರೆ.

ಕರ್ಮಣ್ಯೇ ವಾದಿಕಾರಸ್ತೆ ಮಾ ಫಲೇಶು ಕದಾಚನ ಎನ್ನುವ ಶ್ರೀಕೃಷ್ಣನ ವಾಣಿಯಂತೆ ಫಲಾಫಲ ನಿರೀಕ್ಷಿಸದೆ ತಮ್ಮ ಕರ್ತವ್ಯ ಎಂದು ತಿಳಿದು ಸಮಾಜ ಸೇವೆಯಲ್ಲಿ ಕಿರಣ ಜಾಧವ ತಮ್ಮನ್ನು ಹಾಗೂ ತಮ್ಮ ತಂಡವನ್ನು ತೊಡಗಿಸಿಕೊಂಡಿದ್ದಾರೆ. ಬೆಳಗಾವಿಗೆ ಸಂಕಷ್ಟ ಬಂದಾಗಲೆಲ್ಲ ಕಿರಣ ಜಾಧವ ತಂಡ ಯಾವುದೇ ಪ್ರತಿಫಲ ಬಯಸದೆ ಮುನ್ನುಗ್ಗುತ್ತದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button