
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಸಾಧಕರಿಗೆ ಕೊಡಮಾಡುವ ವಿಪ್ರಶ್ರೀ ಪ್ರಶಸ್ತಿಗೆ ಪ್ರಗತಿ ವಾಹಿನಿ ವೆಬ್ ನ್ಯೂಸ್ ಪ್ರಧಾನ ಸಂಪಾದಕ ಹಾಗೂ ಪ್ರಗತಿ ಮೀಡಿಯಾ ಹೌಸ್ ಸಂಸ್ಥಾಪಕ, ಹಿರಿಯ ಪತ್ರಕರ್ತ ಎಂ.ಕೆ. ಹೆಗಡೆ ಭಾಜನರಾಗಿದ್ದಾರೆ.
ಭಾನುವಾರ ಬೆಳಗಾವಿಯ ಸಿಟಿ ಹಾಲ್‌ನಲ್ಲಿ ನಡೆದ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸಮಾರಂಭದಲ್ಲಿ ಮಂಡಳಿಯ ಅಧ್ಯಕ್ಷ ಎಚ್. ಎಸ್. ಸಚ್ಚಿದಾನಂದಮೂರ್ತಿ ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಿದರು. ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಎಸ್. ಎಂ. ಕುಲಕರ್ಣಿ,ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಹಲವು ನಿರ್ದೇಶಕರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಮೂಲತಃ ಶಿರಸಿ ತಾಲೂಕಿನ ಕಲ್ಮನೆಯವರಾದ ಎಂ.ಕೆ. ಹೆಗಡೆ ಕಳೆದ 28 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಜನಾಂತರಂಗ ಪತ್ರಿಕೆಯ ಹಿರಿಯ ವರದಿಗಾರರಾಗಿ, ಬೆಳಗಾವಿಯಲ್ಲಿ ಕನ್ನಡ ಪ್ರಭ ಪತ್ರಿಕೆಯ ಪ್ರಧಾನ ವರದಿಗಾರಾಗಿ, ವಿಜಯವಾಣಿ ಪತ್ರಿಕೆಯ ಬೆಳಗಾವಿ ಸ್ಥಾನಿಕ ಸಂಪಾದಕರಾಗಿ, ವಿಜಯ ಕರ್ನಾಟಕದ ಸೀನಿಯರ್ ಅಸಿಸ್ಟಂಟ್ ಎಡಿಟರ್ ಆಗಿ, ಬೆಳಗಾವಿ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಧ್ಯ ಪ್ರಗತಿವಾಹಿನಿ ಇ ಪೇಪರ್ ಮತ್ತು ಪ್ರಗತಿ ಮೀಡಿಯಾ ಹೌಸ್ ನಡೆಸುತ್ತಿದ್ದಾರೆ.
ಅವರಿಗೆ ಈಗಾಗಲೇ ಬೆಳಗಾವಿಯ ಸಾರ್ವಜನಿಕ ವಾಚನಾಲಯದಿಂದ ಕೊಡಮಾಡುವ ರಾಜಾಧ್ಯಕ್ಷ ಪ್ರಶಸ್ತಿ, ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ, ಇಂಡಿಯನ್ ಎಕ್ಸ್‌ಪ್ರೆಸ್ ಚೇರ್ಮನ್ಸ್ ಅವಾರ್ಡ್, ಟೈಮ್ಸ್ ಗ್ರೂಫ್ ಚೇರ್ಮನ್ಸ್ ಅವಾರ್ಡ್, ವಿವಿಧ ರೋಟರಿ ಸಂಸ್ಥೆಯ ಎಕ್ಸಲೆನ್ಸ್ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.
೩ ಸಾವಿರಕ್ಕೂ ಹೆಚ್ಚು ವಿಶೇಷ ವರದಿಗಳನ್ನು ಬರೆದಿದ್ದು ಮಹದಾಯಿ ಕುರಿತ ಪುಸ್ತಕ ರಚಿಸಿದ್ದಾರೆ. ಎಂ.ಕೆ. ಹೆಗಡೆ ಅವರ ಪತ್ರಿಕೋದ್ಯಮದ ಸಾಧನೆಯನ್ನು ಪರಿಗಣಿಸಿ ವಿಪ್ರಶ್ರೀ ಪ್ರಶಸ್ತಿ ನೀಡಲಾಗಿದೆ.
ಬಿಜೆಪಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಬ್ರಾಹ್ಮಣ ಸಮಾಜವೇ ಕಾರಣ – ಅಭಯ ಪಾಟೀಲ
https://pragati.taskdun.com/brahmin-society-is-the-reason-why-bjp-has-grown-to-such-a-large-extent-abhay-patil/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ