ಪ್ರಗತಿವಾಹಿನಿ ಸುದ್ದಿ: ಒಂದು ದಿನದ ಹಿಂದೆ ಹೃದಯಾಘಾತದಿಂದ ವಿರಕ್ತಮಠದ ಸ್ವಾಮೀಜಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಸ್ವಾಮೀತಿ ಹೃದಯಾಘಾತದಿಂದ ಅಲ್ಲ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದ ಮುರಘೇಂದ್ರ ಶಿವಯೋಗಿಗಳ ವಿರಕ್ತಮಠದ (ದೊಡ್ಡಮಠ) ಪೀಠಾಧಿಪತಿಯಾಗಿದ್ದ ಸಿದ್ದರಾಮ ಸ್ವಾಮೀಜಿ (35) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶ್ರೀಮಠದಲ್ಲಿ ಅನಾರೋಗ್ಯದ ಕಾರಣ ಪ್ರವಚನ ನೀಡಲು ಸಮಸ್ಯೆಯಾಗಿರುವುದೇ ಆತ್ಮಹತ್ಯೆಗೆ ಕಾರಣ ಎಂದು ಸ್ವಾಮೀಜಿಯ ವಾಹನ ಚಾಲಕ ಮತ್ತು ಸೇವಕ ಜಗನ್ನಾಥ ಶಿವರಾಯ ಮಳ್ಳಪ್ಪನವರ್ ಮಾಹಿತಿ ನೀಡಿದ್ದಾರೆ. ಸ್ವಾಮೀಜಿಗೆ ಗಂಟಲು ನೋವು ಇತ್ತು. ಪ್ರವಚನಕ್ಕೆ ತೊಂದರೆಯಾಗುತ್ತಿತ್ತು. ನಾಲ್ಕು ವರ್ಷಗಳ ಹಿಂದೆ ಗಂಟಲಿಗೆ ಶಸ್ತ್ರಚಿಕಿತ್ಸೆ ಮಾಡಲಾತ್ತು. ಬೇರೆ ಕಡೆಯಲ್ಲಿ ತೋರಿಸಿ ಚಿಕಿತ್ಸೆ ಪಡೆದಿದ್ದರೂ ಗುಣಮುಖವಾಗದೆ ಪ್ರವಚನ ಕೊಡಲು ತೊಂದರೆಯಾಗುತ್ತಿತ್ತು. ಇದರಿಂದ ಜಿಗುಪ್ಸೆಗೊಂಡಿದ್ದ ಸ್ವಾಮೀಜಿ ವಿಶ್ರಾಂತಿ ಕೊಠಡಿಯೊಳಗೆ ಮಧ್ಯರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜಗನ್ನಾಥ ಶಿವರಾಯ ಮಳ್ಳಪ್ಪನವರ್ ತಿಳಿಸಿದ್ದಾರೆ.
ವಿಷಯ ತಿಳಿದು ನಾನಾ ಮಠಾಧೀಶರು, ವಿವಿಧ ಊರುಗಳಿಂದ ಅಪಾರ ಭಕ್ತರು ಶ್ರೀಮಠಕ್ಕೆ ಆಗಮಿಸಿದರು. ಹುಲಸೂರಿನ ಶಿವಾನಂದ ಸ್ವಾಮೀಜಿ ಮತ್ತು ಭರತನೂರಿನ ಚಿಕ್ಕಗುರುನಂಜೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಹಲವು ಸ್ವಾಮೀಜಿ, ಮಠಾಧೀಶರೊಂದಿಗೆ ಶಾಸಕ ಡಾ. ಅವಿನಾಶ ಜಾಧವ, ಬಸವರಾಜ ಮತ್ತಿಮಡು, ಜಗದೇವ ಗುತ್ತೇದಾರ, ಮಾಜಿ ಸಂಸದ ಡಾ.ಉಮೇಶ ಜಾಧವ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಮುಖಂಡರಾದ ಸುಭಾಷ ರಾಠೋಡ, ಸಂಜೀವನ್ ಯಾಕಾಪುರ, ರಾಜೇಶ ಗುತ್ತೇದಾರ, ಗೋಪಾಲರಾವ ಕಟ್ಟಿಮನಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ