ಪ್ರಗತಿವಾಹಿನಿ ಸುದ್ದಿ: ಜಗತ್ತಿನ ಸೃಷ್ಟಿಗೂ ಮೊದಲೇ ಭಗವಂತ ಗಣಾಧೀಶ್ವರರನ್ನು ಸೃಷ್ಟಿ ಮಾಡಿ, ಅವರಿಗೆ ಆಚಾರ್ಯ ದೀಕ್ಷೆಯನ್ನಿತ್ತು ಅವರಿಂದ ಭೂಲೋಕದಲ್ಲಿ ಪಂಚಸೂತ್ರಗಳ ನೆಲೆಯಲ್ಲಿ ವಿವಿಧ ಋಷಿಗಳಿಗೆ ಬೋಧಿಸಿದ ದರ್ಶನ ಶಾಸ್ತ್ರ ಚಿಂತನೆಯ ವೀರಶೈವ ತತ್ವಜ್ಞಾನವೇ ಭಾರತದ ಆದಿ ತತ್ವಜ್ಞಾನವಾಗಿದೆ ಎಂದು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ಶನಿವಾರ ಮಹಾರಾಷ್ಟ್ರದ ಸೊಲ್ಲಾಪೂರದಲ್ಲಿ ಸಮಾರೋಪಗೊಂಡ ಧರ್ಮ ಜಾಗೃತಿ ಸಮಾವೇಶದಲ್ಲಿ ವಿವಿಧ ಕ್ಷೇತ್ರಗಳ 8 ಜನ ಸಾಧಕರಿಗೆ ಕಾಶಿ ಪೀಠದ ದತ್ತಿ ಪುರಸ್ಕಾರಗಳನ್ನು ಪ್ರದಾನ ಮಾಡಿ ಮಾತನಾಡುತ್ತಿದ್ದರು. ಲೌಕಿಕದ ಅಭ್ಯುದಯ, ಜೊತೆಗೆ ಅಲೌಕಿಕ ನೆಲೆಯ ಮುಕ್ತಿಯ ಸೋಪಾನದ ಮುಕ್ತ ಚಿಂತನೆಯನ್ನು ಹೊಂದಿರುವ ಆಗಮಗಳೇ ಸಂಪೂರ್ಣವಾದ ತತ್ವಜ್ಞಾನವನ್ನು ಉಗ್ಗಡಿಸುತ್ತವೆ. ಯೋಗಾರ್ಥ ಹಾಗೂ ರೂಢಾರ್ಥಗಳಿಂದ ಕೂಡಿದ 28 ಶಿವಾಗಮಗಳ ಸಾರವೇ ವೀರಶೈವ ತತ್ವಜ್ಞಾನವಾಗಿದೆ ಎಂದರು.
ಪಂಚಸೂತ್ರಗಳ ದರ್ಶನ : ಪರಶಿವ ಪದವನ್ನು ಪಡೆದುಕೊಳ್ಳುವ ವಿಧಾನವನ್ನು ತಿಳಿಸುವ ‘ಪಡ್ವಿಡಿ ಸೂತ್ರ’, ಸಕಲ ಜೀವಿಗಳ ಸೃಷ್ಟಿಯ ಮೂಲವೇ ಆಗಿರುವ ‘ವೃಷ್ಟಿ ಸೂತ್ರ’, ಜಗತ್ತಿನ ಆದಿಯಾಗಿರುವ ಈಶ್ವರನ ಸ್ವರೂಪವನ್ನು ನಿರೂಪಿಸುವ ಮೇರು ಬಗೆಯಾದ ‘ಲಂಬನ ಸೂತ್ರ’, ಜಗತ್ತಿನ 36 ತತ್ವಗಳೆಂಬ ಮುತ್ತಿನ ಗೊಂಚಲವಾದ ‘ಮುಕ್ತಾಗುಚ್ಛ ಸೂತ್ರ’ ಹಾಗೂ ಜೀವ ಶಿವನಾಗುವ ಬಗೆಯನ್ನು ವಿವರಿಸುವ ತತ್ವ ಚಿಂತನೆಯೇ ‘ಪಂಚವರ್ಣ ಸೂತ್ರ’ವಾಗಿದ್ದು, ಈ ಪಂಚಸೂತ್ರಗಳ ಮೂಲ ಆದಿ ದರ್ಶನವನ್ನು ವೀರಶೈವ ತತ್ವಜ್ಞಾನವು ಒಳಗೊಂಡಿದೆ ಎಂದೂ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ದತ್ತಿ ಪುರಸ್ಕಾರ ಪ್ರಧಾನ : ಮಹಾರಾಷ್ಟ್ರ ವಾಸೀಮ ನಗರದ ಡಾ. ವೇದಪ್ರಕಾಶ ಡೋಣಗಾಂವಕರ್ ಇವರಿಗೆ ‘ಚಂದ್ರಶೇಖರ ಕಪಾಳೆ ಸಾಹಿತ್ಯ ಪುರಸ್ಕಾರ’, ಸೊಲ್ಲಾಪುರದ ರಾಜೇಂದ್ರ ಬಲಸುರೆ ಇವರಿಗೆ ‘ವೀರಸಂಗಯ್ಯ ಸ್ವಾಮಿ ಆದರ್ಶ ಶಿಕ್ಷಕ ಪುರಸ್ಕಾರ’, ತುಳಜಾಪುರದ ಕುಮಾರಿ ಐಶ್ವರ್ಯಾ ಕುಲಕರ್ಣಿ ಇವರಿಗೆ ‘ಸದಾಶಿವ ಸ್ವಾಮಿ ಪ್ರಜ್ಞಾ ಪುರಸ್ಕಾರ’, ಪುಣೆ ನಗರದ ಮಹೇಶ ಸ್ವಾಮಿ ಇವರಿಗೆ ‘ಬಂಡಯ್ಯ ಮಠಪತಿ ಸಮಾಜ ಸೇವಾ ಪುರಸ್ಕಾರ’, ಸೊಲ್ಲಾಪುರದ ವ್ಯಾಖ್ಯಾನಕೇಸರಿ ಬಸವರಾಜ ಶಾಸ್ತ್ರಿ ಹಿರೇಮಠ ಇವರಿಗೆ ‘ವಿಠಾಬಾಯಿ ದೇವಪ್ಪ ಪ್ರಸಾರಕರ ಕೃತಜ್ಞತಾ ಪುರಸ್ಕಾರ’, ಲಾತೂರದ ಭೀಮಾಶಂಕರ ಮೋತಿಪೌಳೆ ಇವರಿಗೆ ‘ಪರಾಂಡಕರ ಮಹಾರಾಜ ಪತ್ರಕಾರಿಕಾ ಪುರಸ್ಕಾರ’, ಸೊಲ್ಲಾಪುರದ ಗುರುನಾಥ ವಠಾರೆ ಇವರಿಗೆ ‘ಸಿದ್ರಾಮಪ್ಪಾ ಗೋಡೆ ನಾಟ್ಯಕರ್ಮಿ ಪುರಸ್ಕಾರ’ ಹಾಗೂ ಬಾರ್ಸಿ ನಗರದ ಡಾ. ಅನಂತ ಭಾವೂರಾವ ಬಿಡವೆ ಇವರಿಗೆ ‘ಶಾಂತಾಬಾಯಿ ಗಾಯಕವಾಡ ಕೀರ್ತನಕಾರ ಪುರಸ್ಕಾರ’ ಪ್ರದಾನ ಮಾಡಿ ಉಭಯ ಜಗದ್ಗುರುಗಳು ಆಶೀರ್ವದಿಸಿದರು.
ಕಾಶಿ ಜ್ಞಾನ ಪೀಠದ ಕಿರಿಯ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಸಾನ್ನಿಧ್ಯವಹಿಸಿದ್ದರು. ಬಾರ್ಸಿಯ ಶ್ರೀರಾಚಲಿಂಗ ಶಿವಾಚಾರ್ಯರು ಹಾಗೂ ಲಾತೂರಿನ ಶ್ರೀಓಂಕಾರಸಿದ್ಧ ಶಿವಾಚಾರ್ಯರು ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಉತ್ತರಪ್ರದೇಶ ರಾಜ್ಯಗಳ ಭಕ್ತಗಣ ಸಮಾವೇಶದಲ್ಲಿ ಪಾಲ್ಗೊಂಡಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ