12ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿಗೆ ನಾಂದಿಹಾಡಿದವರು ವಿಶ್ವಗುರು ಬಸವಣ್ಣ – ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವಗುರು, ಕ್ರಾಂತಿಯೋಗಿ,ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿಯ ಸಂದರ್ಭದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾನುವಾರ ಹಿರೇಬಾಗೇವಾಡಿಯ ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.
‘ಅನುಭವ ಮಂಟಪ’ದ ಮೂಲಕ ವಚನ ಸಾಹಿತ್ಯಕ್ಕೆ ಚಳುವಳಿಯ ರೂಪ ನೀಡಿ, ಜಾತಿ ವ್ಯವಸ್ಥೆ, ಸಾಮಾಜಿಕ ತಾರತಮ್ಯ, ಶೋಷಣೆ, ಮೂಢನಂಬಿಕೆಯ ವಿರುದ್ಧ ಸಮರ ಸಾರಿದ ಬಸವಣ್ಣನವರ ತತ್ವಾದರ್ಶಗಳು ಸದಾಕಾಲವೂ ಸ್ಮರಣೀಯ ಎಂದು ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಹೇಳಿದರು.
12 ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿಗೆ ನಾಂದಿಹಾಡಿದವರು ವಿಶ್ವಗುರು ಬಸವಣ್ಣನವರು. ಅಂದಿನ ಕಾಲಕ್ಕೆ ಪ್ರಜಾಪ್ರಭುತ್ವ, ಕಾಯಕ, ಸ್ತ್ರೀ ಸಮಾನತೆಗೆ ಮಹತ್ವ ಕೊಡುವ ಮೂಲಕ ಜಾತೀಯತೆ ಅಳಿಸಲು ಪ್ರಧಾನ ಆದ್ಯತೆಯನ್ನು ನೀಡಿ ಭಕ್ತಿ ಮಾರ್ಗವನ್ನು ಪ್ರತಿಪಾದಿಸಿದ ಅಪರೂಪದ ವಿಶ್ವಗುರು ಬಸವಣ್ಣನವರು. ಬಸವಣ್ಣ ಕೇವಲ ಸಾಮಾಜಿಕ ಕ್ರಾಂತಿಗೆ ಮಾತ್ರವಲ್ಲ ರಾಜಕೀಯವಾಗಿಯೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿ ಹಾಡಿದವರು. ಜನಸಾಮಾನ್ಯರಿಗೆ ಸರಳವಾಗಿ ಅರ್ಥವಾಗುವ ವಚನ ಸಾಹಿತ್ಯದ ಮೂಲಕ ಜನರಲ್ಲಿನ ಅಂಧ ಶ್ರದ್ಧೆ ತೊಡೆದು ಹಾಕಲು ಪ್ರಯತ್ನಿಸಿದ್ದವರು. ಅನುಭವ ಮಂಟಪದ ಮೂಲಕ ಲಿಂಗ, ಜಾತಿ ಸಮಾನತೆಗೆ ಒತ್ತು ಕೊಟ್ಟವರು. ಸಮಾಜದಲ್ಲಿ ಮೇಲು ಕೀಳೆಂಬ ಭಾವನೆ ಇರಬಾರದು, ಎಲ್ಲರೂ ಸಮಾನರು ಎಂದು ಬೋಧಿಸಿ, ಆಚರಣೆ ಮಾಡಿದವರು ಎಂದು ಅವರು ಸ್ಮರಿಸಿದರು.
ಹಲವಾರು ಸ್ಥಳೀಯ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ