*ಬಡವರಿಗೆ ನೀಡುವ ಬ್ಯಾಂಕ್ ಸಾಲಕ್ಕೆ ಪ್ರಧಾನಿ ಮೋದಿಯೇ ಶ್ಯೂರಿಟಿ, ಅವರೇ ಗ್ಯಾರಂಟಿ: ವಿಪಕ್ಷ ನಾಯಕ ಆರ್.ಅಶೋಕ್*
ಪ್ರಗತಿವಾಹಿನಿ ಸುದ್ದಿ; ಉಡುಪಿ: ವಿಶ್ವಕರ್ಮ ಯೋಜನೆಯಡಿ ಬಡವರಿಗೆ ಬ್ಯಾಂಕ್‌ಗಳಿಂದ 1 ಲಕ್ಷ ರೂ. ಸಾಲ ನೀಡುತ್ತಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಶ್ಯೂರಿಟಿ, ಅವರೇ ಗ್ಯಾರಂಟಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ದಾಪುರದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಚಿತ್ರಣವನ್ನು ಬದಲಿಸಿದ್ದಾರೆ. ಪ್ರತಿ ಬಡವರು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ ಎಂಬುದನ್ನು ಅವರು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಹಿಂದೆ ಹಣ ಠೇವಣಿ ಇಟ್ಟು ಬ್ಯಾಂಕ್‌ನಲ್ಲಿ ಖಾತೆ ತೆರೆಯುತ್ತಿದ್ದೆವು. ಆದರೆ ಶೂನ್ಯ ಠೇವಣಿಯಲ್ಲಿ ಖಾತೆ ತೆರೆಯುವ ಕ್ರಮವನ್ನು ಪ್ರಧಾನಿ ಜಾರಿಗೆ ತಂದರು. ಇತ್ತೀಚೆಗೆ ಜಾರಿಯಾದ ವಿಶ್ವಕರ್ಮ ಯೋಜನೆಯಡಿ ಹಲವಾರು ಬಗೆಯ ಉದ್ಯೋಗಗಳಿಗೆ ಒಂದು ಲಕ್ಷ ರೂಪಾಯಿ ಸಾಲ ನೀಡುತ್ತಿದ್ದಾರೆ. ಈ ಸಾಲ ಪಡೆಯಲು ಮನೆ ಪತ್ರ ನೀಡುವಂತಿಲ್ಲ, ಶ್ಯೂರಿಟಿ ಕೊಡಬೇಕಿಲ್ಲ. ಯಾವುದೇ ರೀತಿಯ ಅನಗತ್ಯ ದಾಖಲೆಗಳನ್ನು ಪಡೆಯುವಂತಿಲ್ಲ. ಈ ಸಾಲಕ್ಕೆ ಪ್ರಧಾನಿ ನರೇಂದ್ರ ಮೋದಿಯವರದ್ದೇ ಶ್ಯೂರಿಟಿ, ಅವರದ್ದೇ ಗ್ಯಾರಂಟಿ ಎಂದರು.
ಈ ಯೋಜನೆಯಡಿ ಸರಿಯಾಗಿ ಮರು ಪಾವತಿ ಮಾಡಿದರೆ, ಎರಡನೇ ಬಾರಿಗೆ ಎರಡು ಲಕ್ಷ ರೂ. ಸಾಲ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಬಡವರಿಗಾಗಿ ಮೊದಲ ಬಾರಿಗೆ ಇಂತಹ ಯೋಜನೆ ತಂದಿದ್ದು, ಬಡವರಿಗೆ, ಮಹಿಳೆಯರಿಗೆ, ಕೂಲಿ ಮಾಡುವವರಿಗೆ ಸ್ವಯಂ ಉದ್ಯೋಗ ಮಾಡುವ ಅವಕಾಶ ಸಿಕ್ಕಿದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು. ಈ ಯೋಜನೆಯಡಿ ಎಲ್ಲರಿಗೂ ಸಾಲ ದೊರೆಯಬೇಕು. ಅದಕ್ಕಾಗಿ ನಮ್ಮ ಶಾಸಕರು ತಮ್ಮ ಕ್ಷೇತ್ರದಲ್ಲಿ ಸಾಲ ಕೊಡಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದ್ದೇನೆ ಎಂದು ತಿಳಿಸಿದರು.
ನಮ್ಮೆಲ್ಲರಿಗೂ ಕುಟುಂಬವಿದ್ದು, ಆ ಕುಟುಂಬಕ್ಕಾಗಿ ಕೆಲಸ ಮಾಡುತ್ತೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ 18 ಗಂಟೆಗಳ ಕಾಲ ಇಡೀ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಬಂಧು ಬಳಗಕ್ಕಾಗಿ ಕೆಲಸ ಮಾಡುವುದಿಲ್ಲ. ದೇಶವನ್ನು ಸುಭದ್ರಗೊಳಿಸುತ್ತಿರುವ ಅವರು ತಂದಿರುವ ಯೋಜನೆಗಳ ಲಾಭವನ್ನು ಎಲ್ಲರೂ ಪಡೆಯುವಂತೆ ಮಾಡಬೇಕು. ಈ ಯೋಜನೆಯ ಬಗ್ಗೆ ಎಲ್ಲರಿಗೂ ತಿಳಿಸಬೇಕು ಎಂದರು.
ಪಕ್ಕದ ಪಾಕಿಸ್ತಾನದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 350 ರೂ. ಆಗಿದೆ. ಅಲ್ಲಿ ಚಹ ಕುಡಿಯಲು 200 ರೂ. ನೀಡಬೇಕು. ಆದರೆ ಭಾರತ ಆರ್ಥಿಕತೆಯಲ್ಲಿ ಪ್ರಗತಿ ಸಾಧಿಸಿದೆ. ಪ್ರಧಾನಿ ಮೋದಿ ಬಂದ ನಂತರ ದೇಶದ ಆರ್ಥಿಕ ಪರಿಸ್ಥಿತಿ ಸದೃಢವಾಗಿದ್ದು, 2047 ರ ವೇಳೆಗೆ ನಂ.1 ಆಗುವ ಗುರಿಯನ್ನು ಅವರು ನೀಡಿದ್ದಾರೆ. ಈಗ 500 ವರ್ಷಗಳ ಕನಸು ನನಸಾಗಿ ರಾಮಮಂದಿರ ಉದ್ಘಾಟನೆಯಾಗುತ್ತಿದ್ದು, ಎಲ್ಲೆಲ್ಲೂ ರಾಮನಾಮ ಕೇಳುತ್ತಿದೆ. ಮಹಾತ್ಮ ಗಾಂಧಿ ಹೇಳಿದಂತೆ ರಾಮರಾಜ್ಯ ನಿರ್ಮಾಣವಾಗುತ್ತಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ