ಸ್ಪೀಕರ್ ಸ್ಥಾನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಬಿಜೆಪಿಯ ಸ್ಪೀಕರ್ ಅಭ್ಯರ್ಥಿ ದಿಢೀರ್ ಬದಲಾಗಿದ್ದು ಬೋಪಯ್ಯ ಬದಲು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಆಯ್ಕೆ ಮಾಡಲಾಗಿದೆ. ಹೈಕಮಾಂಡ್ ನಿರ್ದೇಶನದಂತೆ ಕಾಗೇರಿ ನಾಮಪತ್ರ ಸಲ್ಲಿಸಿದ್ದಾರೆ.
ಸ್ಪೀಕರ್ ಸ್ಥಾನಕ್ಕೆ ಕಾಗೇರಿ ಮಾತ್ರ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧ ಆಯ್ಕೆ ಖಚಿತ. ಇಂದು ಸಂಜೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಳೆ ಅಧಿಕೃತವಾಗಿ ಘೋಷಿಸಲಾಗುತ್ತದೆ.
ಸ್ಪೀಕರ್ ಸ್ಥಾನಕ್ಕೆ ಕೆ.ಆರ್.ರಮೇಶ್ ಕುಮಾರ್ ರಾಜೀನಾಮೆ ಹಿನ್ನೆಲೆಯಲ್ಲಿ ವಿಧಾನಸಭೆಯ ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಸ್ಪೀಕರ್ ಚುನಾವಣೆ ಸಂಬಂಧ ಡೆಪ್ಯೂಟಿ ಸ್ಪೀಕರ್ ಕೃಷ್ಣಾರೆಡ್ಡಿ ವಿಧಾನಸಭೆಯಲ್ಲಿ ಪ್ರಕಟಿಸಿದರು.
ಡೆಪ್ಯೂಟಿ ಸ್ಪೀಕರ್ ಅವರೇ ಈ ಚುನಾವಣೆ ನಡೆಸಿಕೊಡಲಿದ್ದಾರೆ. ನಂತರ ಅವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ. ಬಳಿಕ ನೂತನ ಡೆಪ್ಯೂಟಿ ಸ್ಪೀಕರ್ ಆಯ್ಕೆ ಪ್ರಕ್ರಿಯೆಯಾಗಲಿದೆ.
ಬುಧವಾರ ಬೆಳಗ್ಗೆ 11 ಗಂಟೆಗೆ ಹೊಸ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಸಂಬಂಧ ಮಂಗಳವಾರ ಮಧ್ಯಾಹ್ನ ಕಾಗೇರಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ವಿಧಾನಸಭೆಯ ರಾಜ್ಯ ಸರ್ಕಾರದ ಕಾರ್ಯದರ್ಶಿಗಳಿಗೆ ಕಾಗೇರಿ ನಾಮಪತ್ರ ಸಲ್ಲಿಸಿದ್ದಾರೆ.
ನಿನ್ನೆಯವರೆಗೆ ಕೆ.ಜಿ.ಬೋಪಯ್ಯನವರೇ ಬಿಜೆಪಿ ಅಭ್ಯರ್ಥಿ, ಅವರೇ ಆಯ್ಕೆಯಾಗುವುದು ಖಚಿತ ಎನ್ನಲಾಗಿತ್ತು. ಬೋಪಯ್ಯ ಈ ಹಿಂದೆಯೂ ಬಿಜೆಪಿ ಸರಕಾರದ ಅವಧಿಯಲ್ಲಿ ವಿಧಾನಸಭೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 15ನೇ ವಿಧಾನಸಭೆ ಅಸ್ತಿತ್ವಕ್ಕೆ ಬಂದಾಗಲೂ ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ಕಾರ್ಯ ನಿರ್ವಹಿಸಿದ್ದರು.
ಒಪ್ಪದ ಶೆಟ್ಟರ್
ಜಗದೀಶ ಶೆಟ್ಟರ್, ಸುರೇಶ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ ಪೈಕಿ ಒಬ್ಬರನ್ನು ಈ ಹುದ್ದೆಗೆ ಪರಿಗಣಿಸಲು ಪಕ್ಷದ ವಲಯದಲ್ಲಿ ಚರ್ಚೆಯಾಗಿತ್ತು. ಆದರೆ, ಈ ಬಾರಿ ಕಲಾಪ ನಡೆಸಲು ಸೌಮ್ಯ ಸ್ವಭಾವದವರ ಬದಲು ಸ್ವಲ್ಪ ಖಡಕ್ ಆದ ಹಾಗೂ ಕಾನೂನಿನ ಬಗ್ಗೆ ಹೆಚ್ಚು ತಿಳಿವಳಿಕೆ ಉಳ್ಳವರೇ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಹಾಗಾಗಿ ಶೆಟ್ಟರ್ ಜತೆಗೆ ಬೋಪಯ್ಯ ಹೆಸರು ಪ್ರಸ್ತಾಪವಾಗಿತ್ತು. ಸಚಿವ ಸಂಪುಟ ಸೇರ್ಪಡೆಗೆ ಆಸಕ್ತಿ ತೋರಿದ ಶೆಟ್ಟರ್ ಸ್ಪೀಕರ್ ಹುದ್ದೆಯನ್ನು ನಿರಾಕರಿಸಿದ್ದರು. ಕೊನೆಗೆ ಬೋಪಯ್ಯನವರ ಹೆಸರೇ ಅಂತಿಮವಾಗಿತ್ತು. ಆದರೆ ಏಕಾಏಕಿ ಈಗ ಅವರ ಬದಲು ಕಾಗೇರಿಗೆ ನಾಮಪತ್ರ ಸಲ್ಲಿಸಲು ಹೈಕಮಾಂಡ್ ಸೂಚಿಸಿತ್ತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ತಿ ಜಗದೀಶ ಶೆಟ್ಟರ್ ಸೇರಿದಂತೆ ಬಿಜೆಪಿ ಪ್ರಮುಖರೊಂದಿಗೆ ತೆರಳಿ ಕಾಗೇರಿ ನಾಮಪತ್ರ ಸಲ್ಲಿಸಿದರು.
ಹೆಬ್ಬಾರ್ ಗೆ ಸಚಿವಸ್ಥಾನ?
ಶಾಸಕ ಸ್ಥಾನಕ್ಕೆ ಈಚೆಗೆ ರಾಜಿನಾಮೆ ನೀಡಿರುವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಸಚವರನ್ನಾಗಿ ಮಾಡುವ ಸಾಧ್ಯತೆ ಇದೆ. ಹಾಗಾಗಿಯೇ ಕಾಗೇರಿಯನ್ನು ಸ್ಪೀಕರ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಕಾಗೇರಿ ಬಿಟ್ಟು ಹೆಬ್ಬಾರ್ ಅವರನ್ನು ಮಂತ್ರಿ ಮಾಡುವುದು ಪಕ್ಷಕ್ಕೆ ಕಷ್ಟವಾಗಿತ್ತು. ಒಂದೇ ಜಿಲ್ಲೆಯಲ್ಲಿ ಇಬ್ಬರಿಗೆ, ಅದರಲ್ಲೂ ಇಬ್ಬರು ಬ್ರಾಹ್ಮಣರಿಗೆ ಮಂತ್ರಿಸ್ಥಾನ ಕೊಡಲು ಸಾಧ್ಯವಿರಲಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ