ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ತಿದ್ದುಪಡಿ ಸೇರಿದಂತೆ ವಿವಿಧ ನಮೂನೆಗಳಲ್ಲಿ ಸ್ವೀಕರಿಸಲಾಗಿರುವ 77,898 ಅರ್ಜಿಗಳ ಪೈಕಿ ಬಾಕಿ ಉಳಿದಿರುವ 471 ಅರ್ಜಿಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು ಎಂದು ಜಿಲ್ಲಾ ಮತದಾರರ ಪಟ್ಟಿಯ ವೀಕ್ಷಕರಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಎಲ್.ಕೆ..ಅತೀಕ್ ಅವರು ಹೇಳಿದರು.
ದಿನಾಂಕ 1-1-2021 ನ್ನು ಆಧರಿಸಿ ಭಾವಚಿತ್ರ ಇರುವ ಮತದಾರರ ಪಟ್ಟಿ ಪರಿಶೀಲನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ(ಜ.7) ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಹದಿನೆಂಟು ವಿಧಾನಸಭಾ ಮತಕ್ಷೇತ್ರಗಳಲ್ಲಿ ಫೆ.8, 2020 ರಿಂದ ಡಿ.17, 2020 ರವರೆಗೆ 6, 6ಎ, 7, 8 ಹಾಗೂ 8 ಎ ನಮೂನೆಗಳಲ್ಲಿ ಒಟ್ಟಾರೆ 78,898 ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಇದರಲ್ಲಿ 69,062 ಅರ್ಜಿಗಳನ್ನು ಪರಿಷ್ಕರಣೆಗೆ ಸ್ವೀಕರಿಸಿ ಅವುಗಳ ಪೈಕಿ 68,920 ಅರ್ಜಿಗಳನ್ನು ಅಪ್ಡೇಟ್ ಮಾಡಲಾಗಿದ್ದು, 471 ಬಾಕಿ ಉಳಿದಿವೆ.
ಜಿಲ್ಲೆಯಲ್ಲಿರುವ 67 ಸಾವಿರ ವಿಕಲಚೇತನರ ಪೈಕಿ 25 ಸಾವಿರ ಜನರು ಮತದಾರರ ಪಟ್ಟಿಯಲ್ಲಿದ್ದಾರೆ. ಒಟ್ಟು ವಿಕಲಚೇತನರ ಪೈಕಿ ಮಕ್ಕಳು ಮತ್ತಿತರರನ್ನು ಹೊರತುಪಡಿಸಿ ಉಳಿದ ಅರ್ಹರನ್ನು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.
ಮತದಾರರ ಪಟ್ಟಿಯಿಂದ ಹೆಸರು ಕಡಿಮೆ ಮಾಡುವುದು, ತಿದ್ದುಪಡಿ, ಸ್ಥಳಾಂತರ, ಬದಲಾವಣೆಗೆ ಸಂಬಂಧಿಸಿದ ಅರ್ಜಿಗಳನ್ನು ಇತ್ಯರ್ಥಪಡಿಸುವಾಗ ಜಾಗರೂಕತೆ ವಹಿಸುವಂತೆ ಹೇಳಿದರು.
ಯುವ ಮತದಾರರು ಸೇರಿದಂತೆ ಮಹಿಳಾ ಮತದಾರರ ನೋಂದಣಿ ಪ್ರಮಾಣ ಹೆಚ್ಚಿಸಲು ಆದ್ಯತೆ ನೀಡಬೇಕು. ಸಾರ್ವಜನಿಕ ದೂರುಗಳ ನಿವಾರಣೆಗೆ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ವ್ಯವಸ್ಥೆ ಕಲ್ಪಿಸುವಂತೆ ಅತೀಕ್ ಅವರು ತಿಳಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಬಹುತೇಕ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಬಾಕಿ ಇರುವ ಅರ್ಜಿಗಳ ಇತ್ಯರ್ಥಕ್ಕೆ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ