ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜ್ಯಾದ್ಯಂತ ಮತದಾನ ಆರಂಭವಾಗಿದೆ. 224 ವಿಧಾನ ಸಭೆ ಕ್ಷೇತ್ರಗಳಿಗೆ ಒಟ್ಟೂ 58,545 ಮತಗಟ್ಟೆ ತೆರೆಯಲಾಗಿದ್ದು, ಎಲ್ಲ ಕಡೆ ಶಾಂತವಾಗಿ ಮತದಾನ ನಡೆಯುತ್ತಿದೆ.
ಒಟ್ಟೂ 5.30 ಕೋಟಿ ಜನ ಮತದಾನದ ಹಕ್ಕು ಹೊಂದಿದ್ದಾರೆ.
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗ್ಗೆ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಮತಗಟ್ಟೆಗೆ ತೆರಳಿದ್ದಾರೆ. ಹುಬ್ಬಳ್ಳಿಯ ಅಶೋಕ ನಗರದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಪುತ್ರ ಭರತ ಹಾಗೂ ಪುತ್ರಿ ಅದಿತಿ ಸಾಥ್ ನೀಡಿದರು. ನಂತರ ಗಬ್ಬೂರು ಕ್ರಾಸ್ ಬಳಿ ಪಾರ್ಶ್ವ ಪದ್ಮಾಲಯ ಧಾಮ್ ಮಂದಿರಕ್ಕೆ ಸಹ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಬೆಳಗಾವಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ವಿಶ್ವೇಶ್ವರಯ್ಯ ನಗರದ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಬೆಳಿಗ್ಗೆಯೇ ತಮ್ಮ ಮತವನ್ನು ಚಲಾಯಿಸಿದರು.
ರಾಜ್ಯದ ವಿವಿಧೆಡೆ ಜನಪ್ರತಿನಿಧಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಕಲಾವಿದರು, ಅಧಿಕಾರಿಗಳು ಮತ ಚಲಾಯಿಸುತ್ತಿದ್ದಾರೆ. ಇನ್ಫೋಸಿಸ್ ಮುಖ್ಯಸ್ಥರಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ. ಚಿತ್ರ ನಟ ರಮೇಶ ಅರವಿಂದ, ಮೈಸೂರಲ್ಲಿ ಪ್ರಮೋದಾದೇವಿ ಮೊದಲಾದವರು ಮತ ಹಾಕಿದ್ದಾರೆ.
ಮಧ್ಯಾಹ್ನ ನಂತರ ಮಳೆಯ ಸಾಧ್ಯತೆ ಇರುವುದರಿಂದ ಬೆಳಗ್ಗೆಯೇ ಸಾಧ್ಯವಾದಷ್ಟು ಮತದಾನ ಮಾಡುವುದು ಉತ್ತಮ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ