Kannada NewsKarnataka NewsLatest

ವಿಟಿಯು ಉದ್ಯೋಗ ಮೇಳ: 5,800 ಜನ ಭಾಗಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ  ಆವರಣದಲ್ಲಿ  ಉದ್ಯೋಗ ಮೇಳ ಕ್ಯಾಂಪಸ್ ಟು ಕಾರ್ಪೋರೇಟ್-೨೦೨೦ ವನ್ನು ಆಯೋಜಿಸಲಾಗಿತ್ತು. ವಿಶ್ವವಿದ್ಯಾಲಯದ ಕೌಶಲ್ಯ ಅಭಿವೃದ್ದಿ ವಿಭಾಗ ಹಾಗು ಉದ್ಯಮಶೀಲತೆ ಹಾಗು ಜೀವನೋಪಾಯ ವಿಭಾಗಗಳ ಜಂಟಿ ಸಹಯೋಗದಲ್ಲಿ ಸದರಿ ಮೇಳವನ್ನು ಆಯೋಜಿಸಲಾಗಿತ್ತು.

ಸಿವಿಲ್, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಉತ್ಪಾದನೆ ಮತ್ತು ಸೇವಾ ತಂತ್ರಜ್ಞಾನದಂತಹ ವಿವಿಧ ಕ್ಷೇತ್ರಗಳ ೪೦ ಸಂಸ್ಥೆಗಳು ಈ ಮೇಳದಲ್ಲಿ ಭಾಗವಹಿಸಿದ್ದರಿಂದ ಈ ಉದ್ಯೋಗಮೇಳವು ಒಂದು ಮಹತ್ವದ ಕಾರ್ಯಕ್ರಮವಾಗಿತ್ತು.

ಈ ಮೇಳದಲ್ಲಿ ಕರ್ನಾಟಕದಾದ್ಯಂತ ೫೮೩೪ ಇಂಜಿನಿಯರಿಂಗ್, ಎಂ.ಟೆಕ್, ಎಮ್.ಬಿ.ಎ, ಮತ್ತು ಎಮ್.ಸಿ.ಎ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೊನೆಯಲ್ಲಿ ೨೬೩ ಜನ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಾಯಿತು. ಮತ್ತು ೬೭೩ ಜನರನ್ನು ಮುಂದಿನ ಸುತ್ತಿಗೆ ಆಯ್ಕೆ ಮಾಡಲಾಯಿತು.
ಕುಲಪತಿ  ಡಾ.ಕರಿಸಿದ್ದಪ್ಪ ಅವರು  ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಹಿರಿಯ ಕೆ.ಎ.ಎಸ್.ಅಧಿಕಾರಿ,  ಜಿಲ್ಲಾ ನೌಕರರ ವಿನಿಮಯ ಕೇಂದ್ರ ಬೆಳಗಾವಿ-ಹುಬ್ಬಳ್ಳಿ ನಿರ್ದೇಶಕಿ  ಸಾಧನಾ ಪೋಟೆ   ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಅವರು ಮೇಳವನ್ನು ಉದ್ದೇಶಿಸಿ ಮಾತನಾಡುತ್ತ ತಾಂತ್ರಿಕ ಹಿನ್ನೆಲೆಯಿರುವ ವಿದ್ಯಾರ್ಥಿಗಳಿಗೆ ಈ ಮೇಳವು ತುಂಬ ಉಪಯುಕ್ತವಾಗಿದೆ. ಅಲ್ಲದೆ  ವಿವಿಧ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಚರ್ಚಿಸಿ ಇಂತಹ ಮೇಳಗಳ ಸಫಲತೆ ಹೇಗೆಂದರೆ ವಿದ್ಯಾರ್ಥಿಗಳು ಇವುಗಳನ್ನು ಸರಿಯಾಗಿ ಬಳಸಿಕೊಳಂಡಲ್ಲಿ ಮಾತ್ರ ತಮ್ಮ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಕುಲಸಚಿವ ಡಾ.ಎ.ಎಸ್.ದೇಶಪಾಂಡೆ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಯುವ ಪದವಿಧರರು ಒಂದೇ ಸೂರಿನಡಿಯಲ್ಲಿ ಅನೇಕ ಉದ್ಯೋಗದಾತರೊಂದಿಗೆ ಸಂದರ್ಶನಕ್ಕೊಳಪಡುವ ಈ ಅಪರೂಪದ ಸನ್ನಿವೇಶ ಇದಾಗಿದೆ ಎಂದು ಹೊಗಳಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿಜಯ ಶಾಲಿಗಳಾಗಬೇಕಾದರೆ ಪ್ರತಿ ವಿದ್ಯಾರ್ಥಿ ಕಠಿಣ ಪರಿಶ್ರಮ, ತಾಳ್ಮೆ, ಮತ್ತು ಸಕಾರಾತ್ಮಕ ಮನೋಭಾವ ಹೊಂದುವುದು ಪ್ರಮುಖ ಅಂಶವಾಗಿದೆ ಎಂದು ತಿಳಿಸಿದರು. ಮೌಲ್ಯಮಾಪನ ಕುಲಸಚಿವ ಡಾ.ಸತೀಶ ಅಣ್ಣೀಗೇರಿ ಕಾರ್ಯಕ್ರಮಕ್ಕೆ  ಸ್ವಾಗತಿಸಿದರು.  ಎಮ್.ಎ.ಸಪ್ನಾ  ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button