*ವಿಟಿಯುನಿಂದ ರಾಜ್ಯೋತ್ಸವ ಹಾಗೂ ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತರ ಸನ್ಮಾನ*
ಪ್ರಗತಿವಾಹಿನಿ ಸುದ್ದಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ ಟಿ ಯು) ಬೆಳಗಾವಿ ಜಿಲ್ಲೆಯಿಂದ ರಾಜ್ಯೋತ್ಸವ ಹಾಗೂ ಈ ಬಾರಿಯ ವಿಶೇಷ ಸುವರ್ಣ ಕರ್ನಾಟಕ ಪ್ರಶಸ್ತಿಗೆ ಆಯ್ಕೆಯಾದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ವಾದ್ಯ ಗೋಷ್ಠಿಯನ್ನು ಹಮ್ಮಿಕೊಂಡು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿತು.
ಈ ಆಚರಣೆ ಕರ್ನಾಟಕದ ಸಾಂಪ್ರದಾಯಿಕ ಪ್ರಸಿದ್ಧ ನೃತ್ಯ “ಡೊಳ್ಳು ಕುಣಿತ”, “ಕರಡೆ ಮಜಲು” ಮತ್ತು “ವೀರ್ ಗಾಸೆ” ಕಲಾತಂಡಗಳ ಪ್ರದರ್ಶನ ಮೂಲಕ ವಿ ಟಿ ಯುನ ರಾಜ್ಯೋತ್ಸವ ಆಚರಣೆಯು ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲಾಧಿಕಾರಿ ಶ್ರೀ ಮೊಹಮ್ಮದ್ ರೋಶನ್ ಅವರು ಭಾಗವಹಿಸಿದ್ದರು. ಕುಲಪತಿ ಪ್ರೊ.ವಿದ್ಯಾಶಂಕರ್ ಎಸ್. ಅಧ್ಯಕ್ಷತೆಯನ್ನು ವಹಿಸಿದ್ದರು. ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಸಿ.ಕೆ. ಸುಬ್ಬರಾಯ ಗೌರವ ಅತಿಥಿಯಾಗಿದ್ದರು. ಕುಲಸಚಿವ ಪ್ರೊ.ಬಿ.ಈ. ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಟಿ.ಎನ್.ಶ್ರೀನಿವಾಸ, ಹಣಕಾಸು ಅಧಿಕಾರಿ ಡಾ.ಪ್ರಶಾಂತ ನಾಯಕ್ ಜಿ ಉಪಸ್ಥಿತರಿದ್ದರು. .
ಕಾರ್ಯಕ್ರಮದ ಮೊದಲಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬಾಳಾಸಾಹೇಬ್ ಲೋಕಾಪುರ್, ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ಎಸ್.ಎಂ.ಚಲವಾದಿ ಮತ್ತು ಶ್ರೀಮತಿ ಯಮುನಾಬಾಯಿ ಕಲಾಚಂದ್ರ ಅವರನ್ನು ಸನ್ಮಾನಿಸಲಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿಯ ಜಿಲ್ಲಾಧಿಕಾರಿ ಶ್ರೀ ಮೊಹಮ್ಮದ್ ರೋಶನ್ ಅವರು ಕನ್ನಡದ ಬಗ್ಗೆ ಇರುವ ಪ್ರೀತಿ ಮತ್ತು ಅಭಿಮಾನವನ್ನು ಹಂಚಿಕೊಂಡರು. ನಾನು ಹೈದರಾಬಾದಿನವನಾಗಿದ್ದರೂ ಕನ್ನಡವನ್ನು ನಿರರ್ಗಳವಾಗಿ ಮತ್ತು ಎಲ್ಲ ಸಂದರ್ಭದಲ್ಲೂ ಮಾತನಾಡಬಲ್ಲೆ ಆದ್ದರಿಂದ ಕನ್ನಡವು ನನ್ನ ಮಾತೃಭಾಷೆಯಂತಾಗಿದೆ ಎಂದು ಹೇಳಿದರು. ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಕೇವಲ 22 ದಿನಗಳಲ್ಲಿ ಕನ್ನಡ ಕಲಿತಿದ್ದೇನೆ ಎಂದರು. “ನಾನು ಐಎಎಸ್ ಅಧಿಕಾರಿಯಾಗಿ 22 ದಿನಗಳಲ್ಲಿ ಕನ್ನಡ ಕಲಿಯಲು ಸಾಧ್ಯವಾದರೆ, ಭಾರತದ ವಿವಿಧ ಭಾಗಗಳ ವಿದ್ಯಾರ್ಥಿಗಳು 2-3 ತಿಂಗಳಲ್ಲಿ ಏಕೆ ಕಲಿಯಲು ಸಾಧ್ಯವಿಲ್ಲ?” ಎಂದು ಹೇಳುವ ಮೂಲಕ ಸಭಿಕರನ್ನು, ವಿಶೇಷವಾಗಿ ವಿದ್ಯಾರ್ಥಿಗಳನ್ನು ಕನ್ನಡವನ್ನು ಕಲಿಯಲು ಮತ್ತು ಮಾತನಾಡಲು ಪ್ರೇರೇಪಿಸಿದರು. ಶ್ರೀ ರೋಶನ್ ಅವರು ಹೊಸ ಭಾಷೆಗಳು, ಪದಗಳನ್ನು ಕಲಿಯಲು ನಮ್ಮ ಮನವು ಹಂಬಲಿಸಬೇಕು ಏಕೆಂದರೆ ಹೊಸ ಕಲಿಕೆ ಹೊಸ ಅರ್ಥವನ್ನು ಹುಟ್ಟುಹಾಕುತ್ತದೆ ಎಂದು ಹೇಳಿದರು.”ಹೊಸ ಭಾಷೆ ಕಲಿಯುವುದು ಬದುಕಿಗೆ ಹೊಸ ಅರ್ಥವನ್ನು ನೀಡುತ್ತದೆ” ಎಂದು ಹೇಳಿದರು. ನಮ್ಮ ಭಾಷೆಯಲ್ಲಿ ಬಳಕೆಗೆ ಪದಗಳು ಲಭ್ಯವಿಲ್ಲದಿದ್ದರೆ, ನಾವು ಇತರ ಭಾಷೆಯ ಪದಗಳನ್ನು ಬಳಸಬಹುದು ಮತ್ತು ನಮ್ಮ ಮಾತೃಭಾಷೆಯೊಂದಿಗೆ ಸಂಯೋಜಿಸಬಹುದು ಆದರೆ ಈ ಅನ್ಯ ಭಾಷೆಯ ಬಳಕೆ ನಮ್ಮ ಭಾಷೆಯ ಸೌಂದರ್ಯವನ್ನು ಹಾಳುಮಾಡಬಾರದು ಎಂದು ಅವರು ಹೇಳಿದರು. “ಭಾರತವು ಒಂದು ರಾಷ್ಟ್ರವಾಗಿ ವಿಭಿನ್ನ ಸಂಸ್ಕೃತಿಗಳ ಸಮ್ಮಿಲನವಾಗಿದೆ, ಮತ್ತು ಅದೇ ರೀತಿ, ಕರ್ನಾಟಕವು ಅನೇಕ ಪ್ರಪಂಚಗಳನ್ನೇ ಹೊಂದಿರುವ ಒಂದು ರಾಜ್ಯವಾಗಿದೆ” ಎಂದು ಅವರು ಹೇಳಿದರು, ರಾಜ್ಯದ ಅನನ್ಯತೆಯನ್ನು ಸುಂದರವಾಗಿ ಚಿತ್ರಿಸಿದರು.
ಸಮಾರಂಭದ ಅಧ್ಯಕ್ಷತೇ ವಹಿಸಿದ್ದ ಪ್ರೊ.ವಿದ್ಯಾಶಂಕರ ಎಸ್. ಅವರು ಮಾತೃಭಾಷೆಯಲ್ಲಿ ಶಿಕ್ಷಣದ ಮಹತ್ವವನ್ನು ತಿಳಿಸಿದರು. ಮಾತೃಭಾಷೆ ಹೃದಯದ ಭಾಷೆ. ಮಾತೃಭಾಷೆಯಲ್ಲಿ ಯಾವುದಾದರು ವಿಷಯವನ್ನು ಯಾರಾದರೂ ಕಲಿತರೆ ಅದು ಚೆನ್ನಾಗಿ ಅರ್ಥವಾಗುತ್ತದೆ ಮತ್ತು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಅವರು ಹೇಳಿದರು. ಮಾತೃಭಾಷೆ ವಿಷಯದ ಜ್ಞಾನದ ಜೊತೆಗೆ ಕೌಶಲ್ಯವನ್ನು ಕಲಿಸುತ್ತದೆ. ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣದ ಅನುಷ್ಠಾನದಲ್ಲಿ ಎಐಸಿಟಿಇ ಜೊತೆಗೆ ವಿಶ್ವವಿದ್ಯಾನಿಲಯ ನಡೆಸಿದ ಪ್ರಯತ್ನಗಳ ಬಗ್ಗೆ ಅವರು ವಿವರಿಸಿದರು.
ಗೌರವ ಅತಿಥಿ ಪ್ರೊ.ಸಿ.ಕೆ.ಸುಬ್ಬುರಾಯ ಮಾತನಾಡಿದರು, ಪ್ರೊ.ಬಿ.ಈ.ರಂಗಸ್ವಾಮಿ ಸ್ವಾಗತಿಸಿದರು, ಪ್ರೊ.ಟಿ.ಎನ್.ಶ್ರೀನಿವಾಸ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ “ಭೈರವ” ತಂಡದ ಹೆಸರಾಂತ ಕಲಾವಿದರು ಸಿತಾರ್ ಫ್ಯೂಷನ್ ವಾದ್ಯ ಗೋಷ್ಠಿ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ