Kannada NewsKarnataka NewsLatest

ಉಮೇಶ ಕತ್ತಿ ಕಾಯುವುದು ಇನ್ನು ಎರಡೇ ದಿನ! -Pragativahini Exclusive

ಉಮೇಶ ಕತ್ತಿ ಕಾಯುವುದು ಇನ್ನು ಎರಡೇ ದಿನ!

Pragativahini Exclusive

ಎಂ.ಕೆ.ಹೆಗಡೆ, ಬೆಳಗಾವಿ –

ಸಧ್ಯದ ರಾಜಕೀಯ ಬೆಳವಣಿಗೆ ನೋಡಿದರೆ ಮತ್ತೊಮ್ಮೆ ಬೆಳಗಾವಿ ರಾಜಕಾರಣಿಗಳಿಂದಲೇ ಸರಕಾರ ಆಪತ್ತಿಗೆ ಸಿಲುಕುವ ಲಕ್ಷಣ ಕಾಣುತ್ತಿದೆ. ಆದರೆ ಈಬಾರಿ ಜಾರಕಿಹೊಳಿ ಬೆಂಕಿಗಿಂತ ಕತ್ತಿ ಹರಿತ ಜೋರಾಗಿದೆ.

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಇನ್ನು ಎರಡೇ ದಿನದಲ್ಲಿ ತೀವ್ರ ಸಂಕಷ್ಟಕ್ಕೆ ಬೀಳಬಹುದು. ಇದಕ್ಕೆ ಕಾರಣ ಹಿರಿಯ ಶಾಸಕ ಉಮೇಶ ಕತ್ತಿ ಆಕ್ರೋಶ ಮತ್ತು ಅವರು ನೀಡಿರುವ ಎರಡು ದಿನದ ಗಡುವು.

ಇದನ್ನೂ ಓದಿ – ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾ ಆ ಒಂದು ಪ್ರಶ್ನೆ?

ಮಂಗಳವಾರ ಬಿಜೆಪಿ ಸರಕಾರದ ಸಚಿವಸಂಪುಟ ವಿಸ್ತರಣೆಯಾಗುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ತೀವ್ರ ಆಕ್ರೋಶ, ಅಸಮಾಧಾನ ಉಂಟಾಗಿದೆ. ಬಿಜೆಪಿಯಲ್ಲಿ ಹಲವರು ಸಂಘಪರಿವಾರದಿಂದ ಬಂದಿರುವುದರಿಂದ ಅವರು ಪಕ್ಷದಿಂದ ಹೊರಗೆ ಹೊಗುವ ಸಾಧ್ಯತೆ ಇಲ್ಲ.

ಆದರೆ ಹಿರಿಯ ಶಾಸಕ ಉಮೇಶ ಕತ್ತಿ ಯಾವ ಪಕ್ಷಕ್ಕೂ ಅಂಟಿಕೊಂಡವರಲ್ಲ. ಅವರು ಎಲ್ಲ ಪಕ್ಷಗಳಲ್ಲೂ ಇದ್ದವರು, ಎಲ್ಲ ಪಕ್ಷಗಳಿಂದ ನಿಂತೂ ಗೆದ್ದು ಬಂದವರು. ತಮ್ಮ ವಯಕ್ತಿಕ ವರ್ಚಸ್ಸಿನಿಂದಲೇ ಅವರು ಚುನಾವಣೆ ಎದುರಿಸಿ 8 ಬಾರಿ ಶಾಸಕರಾದವರು ಅವರು.

2 ದಿನ ಗಡುವು

ಬೆಳಗಾವಿ ಜಿಲ್ಲೆಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಮತ್ತು ಉಮೇಶ ಕತ್ತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿಯಾಗಿದ್ದಾರೆ. ಅದು ಎಂದಿನ ಭೇಟಿಯಾಗಿರಲಿಲ್ಲ. ಬಾಲಚಂದ್ರ ಜಾರಕಿಹೊಳಿ ಸಮಾಧಾನದಿಂದಲೇ ತಮ್ಮ ಅಸಮಾಧಾನ ಹೊರಹಾಕಿದರೆ, ಉಮೇಶ ಕತ್ತಿ ಮಾತ್ರ ಆಕ್ರೋಶಭರಿತರಾಗಿಯೇ ಮಾತನಾಡಿದ್ದಾರೆ ಎಂದು ಪ್ರಗತಿವಾಹಿನಿಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ – ಜಾರಕಿಹೊಳಿ ಕುಟುಂಬಕ್ಕೆ ಮಲ್ಟಿಪಲ್ ಶಾಕ್!

ಯಾವುದೇ ಕಾರಣದಿಂದಲೂ ತಾವು ಪಕ್ಷದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಸಹೋದರ ರಮೇಶ ಕತ್ತಿಗೂ ಲೋಕಸಭೆ ಟಿಕೆಟ್ ನೀಡಿಲ್ಲ. ಆಗಲೇ ನಾನು ನಿರ್ಧಾರ ತೆಗೆದುಕೊಳ್ಳುವವನಿದ್ದೆ. ಆದರೆ ನಿಮ್ಮ ಮೇಲೆ ವಿಶ್ವಾಸವಿಟ್ಟು ಉಳಿದುಕೊಂಡಿದ್ದೆ. ಆಗ ರಮೇಶ ಕತ್ತಿಯನ್ನು ಸಮಾಧಾನಪಡಿಸಿ ಉಳಿದಿದ್ದೇನೆ. ಈಗ ರಮೇಶ ಕತ್ತಿಗೆ ಏನು ಉತ್ತರಿಸಬೇಕು? ಕ್ಷೇತ್ರದ ಜನರಿಗೆ ಏನು ಹೇಳಬೇಕು? ಎಂದು ನೇರವಾಗಿ ಯಡಿಯೂರಪ್ಪನವರನ್ನು ಪ್ರಶ್ನಿಸಿದ್ದಾರೆ.

2 ದಿನ ಕಾಯಿರಿ

ಎಲ್ಲವನ್ನೂ ಸಮಾಧಾನದಿಂದಲೇ ಆಲಿಸಿದ ಯಡಿಯೂರಪ್ಪ ಎರಡೇ ಎರಡು ದಿನ ಕಾಯುವಂತೆ ಉಮೇಶ ಕತ್ತಿಗೆ ವಿನಂತಿಸಿದ್ದಾರೆ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು 2 ದಿನದ ಅವಕಾಶ ಕೇಳಿದ್ದಾರೋ, ಅಥವಾ 2 ದಿನದಲ್ಲಿ ಸಚಿವಸಂಪುಟಕ್ಕೆ ಉಮೇಶ ಕತ್ತಿಯವರನ್ನು ಸೇರಿಸಿಕೊಳ್ಳಲಾಗುತ್ತದೆಯೋ ಗೊತ್ತಿಲ್ಲ.

ಆದರೆ ಯಡಿಯೂರಪನ್ನವರ ಮಾತಿಗೆ ಮನ್ನಣೆ ನೀಡಿ 2 ದಿನ ಕಾಯಲು ಉಮೇಶ ಕತ್ತಿ ನಿರ್ಧರಿಸಿದ್ದಾರೆ. ಆದರೆ 2 ದಿನದ ನಂತರ ಒಂದು ಕ್ಷಣವೂ ನಾನು ಶಾಸಕನಾಗಿ ಉಳಿಯಲಾರೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಇಂದು ಬೆಳಗ್ಗೆ ಹಲವಾರು ಅತೃಪ್ತ ಶಾಸಕರು ಉಮೇಶ ಕತ್ತಿಯವರ ಶಾಸಕರ ಭವನದ ಕೊಠಡಿಯಲ್ಲಿ ಭೇಟಿಯಾಗಿದ್ದಾರೆ. ಮುಂದಿನ ನಡೆ ಕುರಿತು ಚರ್ಚಿಸಲು ಅವರೆಲ್ಲ ಸೇರಿದ್ದರು. ಆ ಸಂದರ್ಭದಲ್ಲೂ ಕತ್ತಿ ಹೇಳಿಕೆ ಒಂದೆ, ನಾನು ಇನ್ನು ಎರಡೇ ದಿನ ಕಾಯುತ್ತೇನೆ. ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಚುನಾವಣೆ ಎದುರಿಸುತ್ತೇನೆ. ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ. ನಿಮ್ಮ ನಿಮ್ಮ ನಿರ್ಧಾರ ನಿಮಗೆ ಬಿಟ್ಟಿದ್ದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಮೂಲಗಳು ಪ್ರಗತಿವಾಹಿನಿಗೆ ತಿಳಿಸಿವೆ.

ಕತ್ತಿಯವರ ಸಿಟ್ಟನ್ನು ಕಂಡು ಇತರ ಶಾಸಕರೆಲ್ಲ ಈ ಸರ್ಕಾರ ಉಳಿಯುವುದು ಕಷ್ಟ ಎನ್ನುತ್ತ ಹೊರಗೆ ಬಿದ್ದಿದ್ದಾರೆ. ಉಮೇಶ ಕತ್ತಿ ಯಾರಿಗೂ ಕಾಯದೆ ರಾಜಿನಾಮೆ ನಿರ್ಧಾರ ಪ್ರಕಟಿಸುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ಇನ್ನು 2 ದಿನದಲ್ಲಿ ಉಮೇಶ ಕತ್ತಿ ವಿಷಯದಲ್ಲಿ ಯಡಿಯೂರಪ್ಪ ಏನು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವುದರ ಮೇಲೆ ಮುಂದಿನ ಬೆಳವಣಿಗೆ ನಿಂತಿದೆ.

ಬಾಲಚಂದ್ರ ಹೇಳಿಕೆ

ಈ ಮಧ್ಯೆ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ನೀಡಿ, ಉಮೇಶ ಕತ್ತಿ ಅವರು ತೀವ್ರ ಆಕ್ರೋಶಗೊಂಡಿರುವುದು ನಿಜ. ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಲಾಗುವುದು. ಅವರು ಸರಿಯಾದರೆ ಉಳಿದೆಲ್ಲ ಸರಿಯಾಗಲಿದೆ. ಎಲ್ಲವನ್ನೂ ಸರಿಮಾಡಿಕೊಂಡು ಸರಕಾರವನ್ನು ಮುನ್ನಡೆಸಿಕೊಂಡು ಹೋಗಲಾಗುವುದು ಎಂದಿದ್ದಾರೆ.

ಬಾಲಚಂದ್ರ ಮಾತಿನಲ್ಲಿ ಉಮೇಶ ಕತ್ತಿಯನ್ನು ಸಮಾಧಾನಪಡಿಸುವುದು ಸಾಧ್ಯವಿಲ್ಲ ಎನ್ನುವ ಸ್ಪಷ್ಟ ಸಂದೇಶವಿತ್ತು.

ಮಾಯವಾದ ಆನಂದ

ಬೆಳಗಾವಿಯಲ್ಲಿ ಮಾತನಾಡಿದ ಸವದತ್ತಿ ಶಾಸಕ ಆನಂದ ಮಾಮನಿ, ಸಚಿವಸ್ಥಾನ ತಪ್ಪಿದ್ದರಿಂದ ತಮಗೆ ತೀವ್ರ ಅಸಮಾಧಾನ ಆಗಿರುವುದು ನಿಜ. ಕಾರ್ಯಕರ್ತರಿಗೆ ಉತ್ತರಿಸುವುದೇ ಕಷ್ಟವಾಗಿದೆ ಎಂದಿದ್ದಾರೆ. ತಾವು ಕಾದು ನೋಡುವ ತಂತ್ರ ಅನುಸರಿಸುವುದಾಗಿ ಅವರು ತಿಳಿಸಿದ್ದಾರೆ.

ಅವನ್ನೆಲ್ಲ ನಾನು ಮಾಡಿಲ್ಲ -ಅಭಯ ಪಾಟೀಲ

ಬೆಳಗಾವಿ ಶಾಸಕ ಅಭಯ ಪಾಟೀಲ ಕೂಡ ಸಚಿವಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಆಪ್ತರೊಂದಿಗೆ ಮಾತನಾಡುತ್ತ, ನನಗೆ ಸಚಿವನಾಗುವ ಅರ್ಹತೆ ಇಲ್ಲ. ಅರ್ಹತೆ ಇದ್ದವರಿಗೆ ಕೊಟ್ಟಿದ್ದಾರೆ. ಸಚಿವನಾಗಲು ಏನೇನು ಮಾಡಬೇಕೋ ಅವನ್ನೆಲ್ಲ ನಾನು ಮಾಡಿಲ್ಲ ಎಂದು ಅವರು ಒಳ ನೋವನ್ನು ಹೊರಹಾಕಿದ್ದಾರೆ.

ಕ್ಷೇತ್ರದ ಜನರಿಗೆ ಉತ್ತರ ಕೊಡುವುದೇ ಕಷ್ಟವಾಗಿದೆ. ನೂರಾರು ಜನರು ಫೋನ್ ಮಾಡುತ್ತಿದ್ದಾರೆ. ಆದರೆ ಪಕ್ಷದ ನಿರ್ಧಾರಕ್ಕೆ ನಾನು ಗೌರವ ಕೊಡುತ್ತೇನೆ. ನಾನು ಸಂಘಪರಿವಾದ ನಿಷ್ಠಾವಂತ ಕಾರ್ಯಕರ್ತನಾಗಿ ಬೆಳೆದುಬಂದವನು. ಪರಿವಾರ ನನಗೆ ಏನನ್ನು ಕಲಿಸಿದೆಯೋ ಅದನ್ನು ಅನುಸರಿಸುತ್ತೇನೆ. ಆ ದಿಸೆಯಲ್ಲಿ ಪಕ್ಷದ ಮತ್ತು ಕ್ಷೇತ್ರದ ಕೆಲಸದಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ ಎಂದು ಅಭಯ ಪಾಟೀಲ ಹೇಳಿಕೊಂಡಿದ್ದಾರೆ ಎಂದು ಪ್ರಗತಿವಾಹಿನಿಗೆ ಗೊತ್ತಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button