ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ನೂತನ ಸಚಿವೆ
ಅವರು ಹಾಗಂದ್ರು, ಇವರು ಹೀಗಂದ್ರು ಅಂದ್ರೆ ಸಹಿಸಲ್ಲ
ಪ್ರಗತಿವಾಹಿನಿ ಸುದ್ದಿ, ಮಾಂಜರಿ –
ನೂತನ ಸಚಿವೆ ಶಶಿಕಲಾ ಜೊಲ್ಲೆ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪ್ರವಾಹ ಪೀಡಿತ ಗ್ರಾಮ ಮಾಂಜರಿಗೆ ಭೇಟಿ ನೀಡಿದ್ದರು. ಗ್ರಾಮದ ಪ್ರವಾಹ ಪರಿಸ್ಥಿತಿ ಅವಲೋಕನದ ವೇಳೆ ಅವರು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಅಲ್ಲದೆ ಪರಿಹಾರ ಕೊಡುವಲ್ಲಿ ರಾಜಕೀಯ ಮಾಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಮಾತನಾಡಿದ ಜೊಲ್ಲೆ, ಶೇ.15ರಿಂದ 20ರಷ್ಟು ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ 25 ಸಾವಿರ ರೂ., ಶೇ. 50ರಿಂದ 75ರಷ್ಟು ಮನೆ ಕಳೆದುಕೊಂಡವರಿಗೆ 1 ಲಕ್ಷ ರೂ. ಹಾಗೂ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಅವರಿಗೆ 5 ಲಕ್ಷ ರೂ. ನೀಡಲಾಗುತ್ತೆ. ಈ ಹಣವನ್ನು ಯಾರೂ ದುರುಪಯೋಗ ಮಾಡದಂತೆ ಪ್ರಮಾಣಿಕವಾಗಿ ಸಂತ್ರಸ್ತರಿಗೆ ಉಪಯೋಗ ಆಗುವಂತೆ ಈ ಊರಿನವರೇ ಅಧಿಕಾರಗಳ ಜೊತೆಗೂಡಿ ಕೆಲಸ ಮಾಡಬೇಕು ಎಂದರು.
ಇದನ್ನೂ ಓದಿ – ಹೊಸ ಮಂತ್ರಿಗಳಿಂದ ಮೊದಲ ಸಭೆ
ಬಳಿಕ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ರಾಜಕೀಯ ಮಾಡಬೇಡಿ. ಅವರು ಪ್ರೆಷರ್ ಹಾಕಿದ್ರು, ಇವರು ಪ್ರೆಷರ್ ಹಾಕಿದ್ರು ಎಂದು ನನ್ನ ಬಳಿ ಹೇಳಿದ್ದರೆ ನಾನು ಸುಮ್ಮನೆ ಇರುವುದಿಲ್ಲ. ಅವರು ಹಾಗಂದ್ರು ಇವರು ಹೀಗಂದ್ರು ಎಂದು ನನಗೆ ಸಬೂಬು ನೀಡಿದ್ದರೆ ನಾನು ಸಹಿಸುವುದಿಲ್ಲ. ಅಲ್ಲದೆ, ಈ ವಿಷಯದಲ್ಲಿ ಏನೇ ತಪ್ಪು ನಡೆದರೂ ಸಹ ಕ್ರಮ ಜರುಗಿಸುವ ಅಧಿಕಾರ ನನಗಿದೆ. ನನಗೆ ಅಲ್ಲದೆ ಹಿರಿಯ ಅಧಿಕಾರಿಗಳಿಗೆ, ಸರ್ಕಾರಕ್ಕೆ ಕ್ರಮ ಜರುಗಿಸುವ ಅಧಿಕಾರವಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಈ ವೇಳೆ ಪ್ರವಾಹ ಪೀಡಿತ ಜನರಿಗೆ ಸರಕಾರ ನೀಡುವ ಹತ್ತು ಸಾವಿರ ಸಹಾಯಧನದ ಚೆಕ್ಕನ್ನು ಶಶಿಕಲಾ ಜೊಲ್ಲೆ ಅವರ ಹಸ್ತದಿಂದ ವಿತರಿಸಲಾಯಿತು.
ಈ ವೇಳೆ ಚಿಕ್ಕೋಡಿ ಉಪ ವಿಭಾಗೀಯ ಅಧಿಕಾರಿ ರವೀಂದ್ರ ಕರಲಿಂಗನವರ, ತಹಶೀಲ್ದಾರ ಸಂತೋಷ ಬಿರಾದಾರ್, ಮಾಜರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಣ್ಣಾಸಾಹೇಬ ಯಾದವ, ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಮಾಯಾ ಬೆಳವಡಿ, ಜೊತಿರಾಮ್ ಯಾದವ್, ಮಹೇಶ ದಾಬಡೆ, ಶಂಕರ್ ಕೋರೆ, ಅಣ್ಣಾ ಸಾಹೇಬ್ ಸಂಕೇಶ್ವರಿ, ಸನತ್ ಕುಮಾರ್ ಪಾಟೀಲ್, ದಾದಾ ಸಾಹೇಬ್, ಭಾಸ್ಕರ್ ಶ್ರೀಧರ್, ಭಾಸ್ಕರ್ ಶೀತಲ್ ಯಾದವ್ ಅಮೋಲ್ ಜಾಧವ್, ಜಾವೇದ್ ಮಕಾಂದಾರ್, ಉತ್ತಮ ವಡವಡೆ, ಸಿದ್ಧಾರ್ಥ ಗಾಯಗಳ, ಬಬನ್ ಬೆಳವಡಿ, ಶಶಿಕಾಂತ ಪಾಟೋಳೆ ಹಾಗೂ ನೂರಾರು ನೆರೆಪೀಡಿತ ಗ್ರಾಮದ ಜನರು ಹಾಗೂ ಅಧಿಕಾರಿಗಳು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ