Vikalachetanara Day
Cancer Hospital 2
Bottom Add. 3

ನೀರು ಸಂಸ್ಕರಣಾ ಘಟಕ: ರೈತರ ಪರ ಧ್ವನಿ ಎತ್ತಿದ ಸಚಿವರು; ಹೆಚ್ಚಿನ ಪರಿಹಾರ ನೀಡಲು ಕೋರಿ ಹೊಸದಾಗಿ ಪ್ರಸ್ತಾವನೆ ಸಲ್ಲಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಒಳ ಚರಂಡಿ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ ಜಮೀನು ನೀಡಿರುವ ಹಲಗಾ ಗ್ರಾಮದ ರೈತರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತಿರುವ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಹೆಚ್ಚಿನ ಪರಿಹಾರ ನೀಡುವಂತೆ ಕೋರಿ ಸರಕಾರಕ್ಕೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ, ರೈತರ ಅಹವಾಲು ಆಲಿಸಿದ ನಂತರ ಅವರು ಈ ವಿಷಯ ತಿಳಿಸಿದರು. ಜಮೀನು ಸ್ವಾಧೀನ ಪಡಿಸಿಕೊಳ್ಳುವಾಗ ರೈತರಿಗೆ ಎಕರೆಗೆ 3 ಲಕ್ಷ ರೂ ಪರಿಹಾರ ನೀಡಲು ಪ್ರಸ್ತಾವಿಸಲಾಗಿತ್ತು. ಆದರೆ ಅಲ್ಲಿನ ರೈತರಿಗೆ ಬೆಳೆ ಪರಿಹಾರವಾಗಿ ವರ್ಷಕ್ಕೆ 3.60 ಲಕ್ಷ ರೂಗಳನ್ನು ಸರಕಾರವೇ ನೀಡಿದೆ. ಹಾಗಾಗಿ ರೈತರ ಕೋರಿಕೆಯಂತೆ ಎಕರೆಗೆ 4 ಕೋಟಿ ರೂ ಪರಿಹಾರ ನೀಡುವಂತೆ ಜಿಲ್ಲಾಡಳಿತದಿಂದ ಮತ್ತು ಮಹಾನಗರ ಪಾಲಿಕೆಯಿಂದ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಬೇಕು. ಜೊತೆಗೆ ಆ ಸಂದರ್ಭದಲ್ಲಿ ರೈತರಿಗೆ ನೀಡಲಾಗಿರುವ ಎಲ್ಲ ಭರವಸೆಗಳನ್ನೂ ಈಡೇರಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ರೈತರಿಗೆ ಯಾವುದೇ ಕಾರಣದಿಂದ ಅನ್ಯಾಯವಾಗಬಾರದು. ಈ ಹಿಂದಿನ ಸಭೆಗಳ ನಡಾವಳಿಗಳನ್ನು ತರಿಸಿಕೊಂಡು ಸಮಗ್ರವಾಗಿ ಪರಿಶೀಲನೆ ನಡೆಸಲಾಗಿದೆ. ರೈತರಿಂದಲೂ ಅಹವಾಲು ಆಲಿಸಲಾಗಿದೆ. 2017ರಲ್ಲಿ ಆಗಿನ ನಗರಾಭಿವೃದ್ಧಿ ಸಚಿವರು, ಸರಕಾರದ ಜೊತೆಗೆ ಮಹಾನಗರ ಪಾಲಿಕೆಯಂದಲೂ ಪರಿಹಾರ ನೀಡುವಂತೆ ಆದೇಶಿಸದ್ದ ಹಾರು. ಹಾಗಾಗಿ ಹೊಸದಾಗಿ ಪ್ರಸ್ತಾವನೆ ಪಡೆದು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಆದಷ್ಟು ಬೇಗ ರೈತರಿಗೆ ಹೆಚ್ಚಿನ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸರಕಾರ ಮತ್ತು ಮಹಾನಗರ ಪಾಲಿಕೆಯಿಂದಲೂ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ರೈತರಿಗೆ ಭರವಸೆ ನೀಡಿದರು.

ರೈತರಿಗೆ ಹೆಚ್ಚಿನ ಪರಿಹಾರ, ಉದ್ಯೋಗ ಮತ್ತು ಮಳಿಗೆ ನೀಡುವ ಭರವಸೆಯನ್ನು ಆಗಿನ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು ನೀಡಿದ್ದರು. ಆದರೆ ರೈತರಿಗೆ ಅನ್ಯಾಯವಾಗಿದೆ. ಮುಂದೆ ಯಾವುದೇ ಕಾರಣದಿಂದ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು. ಪೊಲೀಸರೂ ಸಹ ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಸಚಿವೆ ಹೆಬ್ಬಾಳಕರ್ ಸೂಚಿಸಿದರು.

ರೈತರ ಪರವಾಗಿ ಧ್ವನಿ ಎತ್ತಿರುವುದಕ್ಕಾಗಿ ಈ ಸಂದರ್ಭದಲ್ಲಿ ಸಚಿವರಿಗೆ ರೈತರು ಧನ್ಯವಾದಗಳನ್ನು ಸಲ್ಲಿಸಿದರು.

 ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಈ ಹಿಂದಿನ ಸಭೆಗಳ ನಡಾವಳಿಗಳನ್ನು ಪರಿಶೀಲಿಸಿ ರೈತರಿಗೆ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸಲು ಕ್ರಮ ತೆಗೆದುಕೊಳ್ಳುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. 

​ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಬೆಳಗಾವಿ ಉಪವಿಭಾಗಾಧಿಕಾರಿ, ತಹಸಿಲ್ದಾರ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Bottom Add3
Bottom Ad 2

You cannot copy content of this page