Kannada NewsKarnataka NewsLatestPolitics

*ಕೆರೆಗೆ ಅಪಾಯಕಾರಿ ತ್ಯಾಜ್ಯ: 54 ಕಂಪನಿಗಳಿಂದ 141 ಕೋಟಿ ರೂ. ಪರಿಹಾರ ವಸೂಲಿ*

ತ್ಯಾಜ್ಯ ಜಲ ಸಂಸ್ಕರಿಸದ ಕೈಗಾರಿಕೆ ವಿರುದ್ಧ ಕ್ರಮ

ಪ್ರಗತಿವಾಹಿನಿ ಸುದ್ದಿ: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್.ಜಿ.ಟಿ.) ಸೂಚನೆಯಂತೆ ಈ ಡಿಸೆಂಬರ್ ಅಂತ್ಯದೊಳಗೆ ಅಚ್ಚುಕಟ್ಟು ಪ್ರದೇಶದಲ್ಲಿ ಎಸ್.ಟಿ.ಪಿ. ಕಾಮಗಾರಿ ಮುಕ್ತಾಯವಾಗಬೇಕಿದ್ದು, ಕಾಮಗಾರಿ ತ್ವರಿತಗೊಳಿಸಲು ಸೂಚಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನೋಟಿಸ್ ನೀಡುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಚಂದಾಪುರ ಕೆರೆ ಸಂರಕ್ಷಣೆ ಕುರಿತಂತೆ ಕ್ರಿಯಾಯೋಜನೆ ಅನುಷ್ಠಾನ ನಿಗಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಚಂದಾಪುರ ಕೆರೆಗೆ ನೇರವಾಗಿ ತ್ಯಾಜ್ಯ ನೀರು ಸೇರದಂತೆ ಎಸ್.ಟಿ.ಪಿ. ನಿರ್ಮಿಸಲು ಸಹ ತುರ್ತು ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದರು.


ಜಿಗಣಿ, ಬೊಮ್ಮಸಂದ್ರ, ಹೆಬ್ಬಗೋಡಿ ಮತ್ತು ಚಂದಾಪುರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಗುರುತಿಸಲಾಗಿರುವ 9.36 ಎಕರೆ ಭೂಮಿಯನ್ನು ರೈತರಿಂದ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ತ್ವರಿತಗೊಳಿಸಿ, ನಿಯಮಾನುಸಾರ ಅವರಿಗೆ ಸೂಕ್ತ ಪರಿಹಾರ ಪಾವತಿಸಲು ಸೂಚಿಸಿದರು.


ಈಗಾಗಲೇ ಎನ್.ಜಿ.ಟಿ. ಆದೇಶದ ಮೇರೆಗೆ ಸರ್ಕಾರದ ವತಿಯಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಠೇವಣಿ ಇಡಲಾಗಿರುವ 500 ಕೋಟಿ ರೂ.ಗಳ ಪೈಕಿ 340 ಕೋಟಿ ರೂ. ಬಳಸಿಕೊಂಡು ನಾಲ್ಕು ಎಸ್.ಟಿ.ಪಿ. ನಿರ್ಮಿಸಲು ಸೂಚನೆ ನೀಡಿದರು.
141 ಕೋಟಿ ರೂ. ಪರಿಹಾರ: ಚಂದಾಪುರ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 9,839 ಹೆಕ್ಟೇರ್ ಪ್ರದೇಶವಿದ್ದು, ಈ ಪ್ರದೇಶದಲ್ಲಿರುವ ಸುಮಾರು 543 ಕೈಗಾರಿಕೆಗಳ ಪೈಕಿ 206 ಕೈಗಾರಿಕೆಗಳು ದ್ರವ ತ್ಯಾಜ್ಯ ಉತ್ಪತ್ತಿ ಮಾಡುತ್ತಿದ್ದು, ಈ ಪೈಕಿ 54 ಕಂಪನಿಗಳು ಅಪಾಯಕಾರಿ ತ್ಯಾಜ್ಯವನ್ನು ಹೊರಹಾಕುತ್ತಿರುವ ಕಾರಣ ನೋಟಿಸ್ ನೀಡಲಾಗಿದೆ. ಈ ಪೈಕಿ 12 ಕೈಗಾರಿಕಾ ಘಟಕಗಳನ್ನು ಮುಚ್ಚಲಾಗಿದೆ ಮತ್ತು ಇವರಿಂದ 141 ಕೋಟಿ ರೂ. ಪರಿಹಾರ ಬರಬೇಕಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.


ಮೂರನೇ ಸಂಸ್ಥೆಯಿಂದ ತಪಾಸಣೆ:
ಈ ಎಲ್ಲ ಕೈಗಾರಿಕೆಗಳ ಕುರಿತಂತೆ 3ನೇ ಸಂಸ್ಥೆಯಿಂದ ತಪಾಸಣೆ ಮಾಡಿಸಿ, 141 ಕೋಟಿ ರೂ. ಪರಿಹಾರ ಪಡೆಯಲು ಮತ್ತು ಹಣ ಪಾವತಿ ಮಾಡದ ಕೈಗಾರಿಕೆಗಳ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ವಹಿಸುವಂತೆ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.


ತ್ಯಾಜ್ಯ ಜಲ ಸಂಸ್ಕರಿಸದ ಕೈಗಾರಿಕೆ ವಿರುದ್ಧ ಕ್ರಮ:
ತ್ಯಾಜ್ಯ ಜಲ ಸಂಸ್ಕರಣೆ ಮಾಡದೆ ರಾಜಕಾಲುವೆ ಮತ್ತು ಕೆರೆಗೆ ನೇರವಾಗಿ ಹರಿಯ ಬಿಡುತ್ತಿರುವ ಬಹುಮಹಡಿ ಕಟ್ಟಡಗಳು, ಕೈಗಾರಿಕಾ ಘಟಕಗಳ ವಿರುದ್ಧ ಕ್ರಮ ಜರುಗಿಸುವಂತೆ ಪರಿಸರ ಸಚಿವ ಈಶ್ವರ ಖಂಡ್ರೆ ಸ್ಪಷ್ಟ ಸೂಚನೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button