Latest

ನೀರು ಕೇವಲ ಭೌತವಸ್ತುವಲ್ಲ, ನಮ್ಮ ಜೀವನಾಂಶ !

ಸಂಗಮೇಶ ಆರ್. ನಿರಾಣಿ
(ಅಧ್ಯಕ್ಷರು, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮೀತಿ)

ಅನ್ನಮಾಪಃ ಅಮೃತಮಾಪಃ ಸ್ವರಾಡಮಾಪ: ವಿರಾಡಮಾಪಃ

ನೀರೆಂದರೆ ಅನ್ನ, ನೀರೆಂದರೆ ಅಮೃತ, ನೀರೆಂದರೆ ಅಂತಸ್ತೇಜ, ನಿರೇಂದರೆ ವಿರಾಟ ಚೇತನ, ನೀರೆಂದರೆ ಬೆಳಕು ಎಂಬ ಉಪನಿಷತ್ತಿನ ಸಾಲುಗಳು ನಮ್ಮ ಧ್ಯೇಯ ಮಂತ್ರವಾಗಬೇಕು. ಭಾರತೀಯ ಸಂಸ್ಕೃತಿಯಲ್ಲಿ ನೀರಿಗೆ ವಿಶೇಷ ಸ್ಥಾನವಿದೆ. ನೀರು ಕೇವಲ ಭೌತವಸ್ತುವಲ್ಲ. ರಸಾಯನ ಶಾಸ್ತ್ರದ ಭಾಷೆಯಲ್ಲಿ ೨ ಭಾಗ ಜಲಜನಕ ಹಾಗೂ ೧ ಭಾಗ ಆಮ್ಲಜನಕದಿಂದ ಉತ್ಪತ್ತಿಯಾಗುವ ಒಂದು ದ್ರವ ವಸ್ತು ಅಂತ ಕರೆದರೂ ನಾವು ಅದನ್ನು ಗಂಗೆ ಎಂದು ಗೌರವಿಸುತ್ತೇವೆ. ನೀರಿಗೆ ತೀರ್ಥದ ರೂಪ ಕೊಟ್ಟು ಮಾತೃತ್ವದ ಭಾವದಿಂದ ಪೂಜಿಸುತ್ತೇವೆ.
ಬ್ರಹ್ಮಪುತ್ರ ಒಂದನ್ನು ಬಿಟ್ಟು ಬಹುತೇಕ ನಮ್ಮ ಎಲ್ಲ ನದಿಗಳ ಹೆಸರುಗಳು ಸ್ತ್ರೀನಾಮಗಳಿಂದ ಕೂಡಿವೆ. ಹೀಗಾಗಿ ನಮ್ಮ ಮನೆಯ ಹೆಣ್ಣು-ಮಕ್ಕಳಿಗೂ ಆ ನದಿಗಳ ಹೆಸರುಗಳನ್ನೇ ಇಟ್ಟು ಸಮೃದ್ದಿಯನ್ನು ಮನೆ-ಮನಗಳಲ್ಲಿ ತುಂಬಿಕೊಳ್ಳುತ್ತೇವೆ. ಗಂಗೋತ್ರಿ, ಯಮನೋತ್ರಿ, ಮಹಾಬಳೇಶ್ವರ, ತಲಕಾವೇರಿ ಸೇರಿದಂತೆ ಎಲ್ಲ ನದಿಗಳ ಉಗಮ ಸ್ಥಾನಗಳು ನಮ್ಮ ಪಾಲಿಗೆ ಧಾರ್ಮಿಕ ಶ್ರದ್ದಾ ಕೇಂದ್ರಗಳಾಗಿವೆ. ಜಗತ್ತಿನ ಬಹುತೇಕ ನಾಗರಿಕತೆಗಳು ಉದಯಿಸಿದ್ದು ನದಿ ದಂಡೆಗಳ ಮೇಲೆಯೇ ಅಲ್ಲವೇ?
ನಮ್ಮ ಸಂಸ್ಕೃತಿ ನಮಗೆ ಕಲಿಸಿಕೊಟ್ಟ ಪ್ರತಿಯೊಂದು ಆಚಾರ-ವಿಚಾರಗಳು ಹಾಗೂ ಪಾಠ-ಪ್ರವಚನಗಳ ಹಿಂದೆ ಒಂದು ಸದುದ್ದೇಶವಿರುತ್ತದೆ. ಈ ಮಾತನ್ನು ಯಾರೂ ಅಲ್ಲಗಳೆಯುವಂತಿಲ್ಲ. ನಮ್ಮ ಹಿರಿಯರು ನೀರನ್ನು ಅಷ್ಟು ಎತ್ತರದಲ್ಲಿ ಇಟ್ಟು ಗೌರವಿಸುವುದರ ಹಿನ್ನೆಲೆ ಎನೆಂದರೆ ಇಡೀ ಸೃಷ್ಟಿಯ ಮೂಲ ನೀರು. ಅದ್ದರಿಂದ ಅದನ್ನು ಸಮರ್ಪಕವಾಗಿ ಬಳಸುವುದು ಹಾಗೂ ಹಾಳಾಗದಂತೆ ಸಂರಕ್ಷಿಸುವುದು ನಮ್ಮ ಕರ್ತವ್ಯ ಆಗಿದೆ. ಅದರಂತೆ ನೀರು ಕೂಡ ನಮ್ಮ ದಿನನಿತ್ಯದ ಎಲ್ಲ ಚಟುವಟಿಕೆಗಳ ಕೇಂದ್ರಸ್ಥಾನವನ್ನು ಆವರಿಸಿಕೊಂಡಿದೆ. ನೀರು ನಮ್ಮ ರಾಷ್ಟ್ರದ ಅಭ್ಯುದಯದ ಮತ್ತು ವಿಕಾಸದ ಉರುಗೋಲಾಗಿದೆ. ನದಿಗಳು ಸೇರಿದಂತೆ ಎಲ್ಲ ನೀರಿನ ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳದೇ ಯಾವ ದೇಶವೂ ಅಭಿವೃದ್ದಿ ಹೊಂದಲು ಸಾಧ್ಯವಿಲ್ಲ ಎಂಬುದು ಎಲ್ಲರೂ ಒಪ್ಪಿಕೊಳ್ಳಬೇಕಾದ ಮಾತು.
ಭಗವಂತನ ಸೃಷ್ಟಿಯಲ್ಲಿ ೯ ಗ್ರಹಗಳಿದ್ದರೂ ಮನುಷ್ಯ ಜೀವಿಸಲು ಸಾಧ್ಯವಿರುವುದು ಕೇವಲ ಭೂಮಿಯಲ್ಲಿ ಮಾತ್ರ. ಏಕೆಂದರೆ ಉಳಿದ ಯಾವ ಗ್ರಹಗಳಲ್ಲಿಯೂ ನೀರಿನ ಆಂಶಗಳು ದೊರೆಯಲಿಲ್ಲ. ಅದ್ದರಿಂದ ನೀರು ದೊರೆಯುವ ಭೂಮಿಯೊಂದೇ ಮಾನವ ಜೀವಿಸಲು ಮತ್ತು ತನ್ನೆಲ್ಲ ಬೇಕು-ಬೇಡಗಳನ್ನು ಇಡೇರಿಸಿಕೊಳ್ಳಲು ಆಶ್ರಯದ ತಾಣವಾಯಿತು. ನೀರು ನಮ್ಮ ಜೀವನದ ಆಧಾರ. ಹೀಗಾಗಿಯೇ ನೀರು ನಮಗೆ ಎಲ್ಲ ಕಡೆ ಸಿಗುತ್ತದೆ. ಭೂಮಿಯನ್ನೂ ಆಳವಾಗಿ ಅಗೆದರೂ, ಆಕಾಶದಲ್ಲಿ ತೇಲುವ ಮೋಡದಲ್ಲೂ ಮತ್ತು ವಾತಾವರಣದಲ್ಲಿ ಹಬೆಯ ರೂಪದಲ್ಲಿಯೂ ನೀರು ನಮಗೆ ದೊರೆಯುತ್ತದೆ.

ಜಲವಿಲ್ಲದ ಕೆರೆ, ಫಲವಿಲ್ಲದ ಬನ,
ಭಕ್ತನಿಲ್ಲದ ಗ್ರಾಮ ಸುಡುಗಾಡಯ್ಯ !
ಅಲ್ಲಿ ಶಿವನಿಲ್ಲ !
ಪ್ರೇತಜನಾರಣ್ಯದಲ್ಲಿ ಹೋಗಬಹುದೇ
ಗುಹೇಶ್ವರಾ !

ಅಲ್ಲಮಪ್ರಭುಗಳು ರಚಿಸಿದ ಈ ವಚನದಲ್ಲಿ ಜಲದ ಮಹತ್ವವನ್ನು ಅತ್ಯಂತ ಅರ್ಥಪೂರ್ಣವಾಗಿ ತಿಳಿಸಿದ್ದಾರೆ. ನೀರು ಇಲ್ಲದ ಕಡೆ ಭಗವಂತನೂ ಇರಲು ಬಯಸುವುದಿಲ್ಲ. ಜಲವಿಲ್ಲದ ಬೂಮಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂಬುದನ್ನು ಇಲ್ಲಿ ನಮಗೆ ಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದಾರೆ.
ನೀರು ಜೀವಶಕ್ತಿ, ಪಾರಸಮಣಿ, ನೆಲದ ಶ್ರೇಷ್ಟ ಅಮೃತ.
ಎಲ್ಲ ಮಂದಿರಗಳಲ್ಲಿ ಅದ್ದರಿಂದಲೇ ನೀರಿಗೆ ತೀರ್ಥದ ಸ್ಥಾನ ಕೊಟ್ಟಿದ್ದಾರೆ

ಕೆ.ಎಲ್.ರಾವ್, ಸರ್ ಎಂ. ವಿಶ್ವೇಶ್ವರಯ್ಯ, ಎಸ್. ಜಿ. ಬಾಳೆಕುಂದ್ರಿ ಸೇರಿದಂತೆ ಶ್ರೇಷ್ಟ ಮಹನೀಯರು ಶಾಶ್ವತ ನೀರಾವರಿ ಯೋಜನೆಗಳನ್ನು ಕೊಟ್ಟು ನಮ್ಮ ದೇಶವನ್ನು ಸೃಮೃದ್ದಗೊಳಿಸಿದ್ದಾರೆ. ನೀರು ಮನುಕುಲದ ಶ್ರೇಷ್ಟ ಅಮೃತ. ಇತ್ತಿಚ್ಚಿನ ದಿನಗಳಲ್ಲಿ ನೀರಿನ ಕುರಿತು ಜನಾಂದೋಲನಗಳು ಹಾಗೂ ಜಲಜಾಗೃತಿ ಮೂಡುತ್ತಿರುವುದು ಆರೋಗ್ಯಕರ ಬೆಳವಣಿಗೆ. ಅದ್ದರಿಂದ ಜಲ ಸಂವರ್ಧನೆ ಮತ್ತು ಸದ್ಬಳಕೆಗೆ ಮುಂದಾಗಬೇಕು. ಮಳೆ ನೀರು ಕೊಯ್ಲು ಪದ್ದತಿಯನ್ನು ಎಲ್ಲ ಗ್ರಾಮಗಳಲ್ಲಿ ಅಳವಡಿಸಿಕೊಂಡು ಪ್ರತಿ ಗ್ರಾಮಗಳಲ್ಲಿ ಮಳೆ ನೀರು ಸಂಗ್ರಹಿಸಬೇಕು, ಕರೆ-ಕಟ್ಟೆಗಳು ಹಾಗೂ ಜಲಮೂಲಗಳ ಸಂರಕ್ಷಣೆಯಾಗಬೇಕು. ಈ ಮೂಲಕ ಅಂತರ್ಜಲ ವೃದ್ದಿಯಾಗುತ್ತದೆ. ಪ್ರತಿಯೊಬ್ಬರು ವ್ಯಕ್ತಿಗತವಾಗಿ ಅವಶ್ಯವಿರುವಷ್ಟೆ ನೀರನ್ನು ಬಳಸಬೇಕು. ಕೃಷಿ ಹಾಗೂ ಕೈಗಾರಿಕೆಗಳಲ್ಲಿ ತಾಂತ್ರಿಕ ವಿಧಾನದ ಮೂಲಕ ನೀರಿನ ಬಳಕೆ ಮಾಡಬೇಕು ಹಾಗೂ ಬಳಕೆ ಮಾಡಿದ ನೀರನ್ನು ಪುನರ್ ಶುದ್ದಿಕರಿಸಿ ಬಳಕೆ ಮಾಡುವ ಪದ್ದತಿ ನಮ್ಮಲ್ಲಿ ಜಾರಿಯಾಗಬೇಕು. ಇವೇ ಜಲ ಸಂರಕ್ಷಣೆ ಮತ್ತು ಸಂವರ್ಧನೆಯ ಮೂಲತತ್ವಗಳು.
ನೀರಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲು ನಮಗೆ ಸಾಧ್ಯವಿಲ್ಲ. ಜನರಿಗೆ ಜಲವೇ ದೈವ. ಜಲವಿಲ್ಲದ ದೈವವಿಲ್ಲ ಸಂಸ್ಕೃತದ ಒಂದು ಶ್ಲೋಕದ ಭಾವಾರ್ಥವಾಗಿದೆ. ನಾವು ಬದುಕಿರುವವರೆಗೂ ನಮ್ಮನ್ನು ಪೊರೆಯುವ ನೀರನ್ನು ಮಿತವಾಗಿ ಬಳಸುವುದು. ಅದರ ಅಸ್ತಿತ್ವವನ್ನು ಉಳಿಸುವುದು, ಪೋಷಿಸುವುದು ಹಾಗೂ ಜಲದ ಮೂಲಗಳನ್ನು ಸಂರಕ್ಷಿಸುವುದು ನಮ್ಮ ಬದುಕಿನ ಧ್ಯೇಯವಾಗಬೇಕು. ಹಿಂದಿನ ಕಾಲದಲ್ಲಿ ಒಬ್ಬ ರಾಜನ ಹಿರಿಮೆಯು ಆತ ಕಟ್ಟಿಸಿದ ಕೆರೆ, ಭಾವಿಕಟ್ಟೆಗಳು, ಕಲ್ಯಾಣಿಗಳು ಮತ್ತು ಕೈಗೊಂಡ ನೀರಾವರಿ ಯೋಜನೆಯ ಮೇಲೆ ಅವಲಂಭಿತವಾಗಿರುತ್ತಿತ್ತು.
ಇವತ್ತಿಗೂ ಹಳೆ ಮೈಸೂರು ಪ್ರಾಂತ್ಯದ ಯಾರದ್ದೇ ಮನೆಗೆ ಹೋದರೂ ನಮಗೆ ಆ ಮನೆಯಲ್ಲಿ ಎರಡು ಫೋಟೋಗಳನ್ನು ಗೋಡೆಗೆ ನೇತು ಹಾಕಿದ್ದನ್ನು ಕಾಣಬಹುದು. ಅದರಲ್ಲಿ ಒಂದು ಮೈಸೂರಿನ ಮಹಾರಾಜರದ್ದು ಮತ್ತು ಇನ್ನೊಂದು ಸರ್ ಎಂ. ವಿಶ್ವೇಶ್ವರಯ್ಯನವರದ್ದು. ಅಂದು ಅವರು ಕನ್ನಂಬಾಡಿ ಕಟ್ಟೆಯನ್ನು ಕಟ್ಟದಿದ್ದರೆ ಇಂದು ಮಂಡ್ಯ-ಮೈಸೂರು ಭಾಗಗಳಲ್ಲಿ ಈ ಸಮೃದ್ದಿಯನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಪ್ರತಿ ದೂರದೃಷ್ಟಿಯ ನೀರಾವರಿ ಯೋಜನೆಗಳಿಗೂ ಮುಂದಿನ ಪಿಳಿಗೆಯನ್ನು ಉತ್ಕೃಷ್ಟವಾಗಿ ನಿರ್ಮಿಸುವ ಶಕ್ತಿ ಇರುತ್ತದೆ. ಅಂತಹ ಯೋಜನೆಗಳು ಹಾಗೂ ಅವುಗಳನ್ನು ಜಾರಿಗೆ ತಂದ ಮಹಾನ್ ವ್ಯಕ್ತಿಗಳು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿದು ಬಿಡುತ್ತಾರೆ.
ಕೆಲ ವರ್ಷಗಳ ಹಿಂದೆ ನಮ್ಮ ಭಾರತದಲ್ಲಿಯೂ ನೀರಿನ ಸಂಪನ್ಮೂಲಗಳ ನಿರ್ವಹಣೆ ಅದ್ಭುತವಾಗಿತ್ತು. ಪ್ರತಿಯೊಂದು ಹಳ್ಳಿಗಳಲ್ಲಿಯೂ ಕಲ್ಯಾಣಿಗಳಿದ್ದವು. ಹಾಗೂ ಅವು ಒಂದಕ್ಕೊಂದು ಪರಸ್ಪರ ಜೊಡಣೆಯಾಗಿದ್ದವು. ಆ ಕಲ್ಯಾಣಿಗಳಲ್ಲಿ ನೀರು ಶೇಖರಿಸಲಾಗುತ್ತಿತ್ತು. ಇದರಿಂದಾಗಿ ಅಂತರ್ಜಲ ಮಟ್ಟವು ಸದಾ ಮೆಲ್ಮಟ್ಟದಲ್ಲಿ ಇರುತ್ತಿತ್ತು. ಪ್ರತಿಯೊಂದು ದೇವಸ್ಥಾನದಲ್ಲಿಯೂ ಕಲ್ಯಾಣಿಗಳನ್ನು ನಿರ್ಮಿಸಲಾಗಿತ್ತು. ಬರದ ಸಮಯದಲ್ಲಿ ಅವು ಕುಡಿಯುವ ನೀರಿನ ಮೂಲಗಳಾಗಿದ್ದವು. ಈ ಎಲ್ಲ ಮೂಲಗಳನ್ನು ಶ್ರದ್ದೆಯಿಂದ ಅತ್ಯಂತ ಜೋಪಾನವಾಗಿ ಸಂರಕ್ಷಿಸುವುದರೊಂದಿಗೆ ದೊರೆತ ನೀರನ್ನು ಮಿತವಾಗಿ ಬಳಸುತ್ತಿದ್ದರು. ಪ್ರತಿ ಮಳೆಗಾಲದಲ್ಲಿಯೂ ನದಿ, ಕೆರೆ, ಕಲ್ಯಾಣಿಗಳು ತುಂಬಿದಾಗ ಅವುಗಳಿಗೆ ಭಕ್ತಿಯಿಂದ ಸಮೃದ್ದಿ ಹಾಗೂ ಹಾರೈಕೆಯ ಪ್ರತೀಕವಾಗಿ ಬಾಗೀಣ ಸಮರ್ಪಿಸುತ್ತಿದ್ದರು. ಆ ಮೂಲಕ ಜೀವನಕ್ಕೆ ಮೂಲವಾದ ನೀರಿನ ಕುರಿತಾದ ಪೂಜ್ಯತೆಯ ಭಾವ ವ್ಯಕ್ತವಾಗುತ್ತಿತ್ತು.
ಈ ವ್ಯವಸ್ಥೆಯನ್ನು ಸ್ಥಳೀಯ ನಾಯಕರು ಬೆಳೆಸಿ ಪೋಷಿಸುತ್ತಿದ್ದರು. ಮತ್ತು ಅಲ್ಲಿಯ ಸ್ಥಳೀಯ ಸಮುದಾಯ ಇದಕ್ಕೆ ಯಜಮಾನನ್ನು ನೇಮಿಸಿ ಈ ಎಲ್ಲ ನೀರಿನ ಮೂಲಗಳನ್ನು ಸಂರಕ್ಷಿಸುತ್ತಿತ್ತು. ಇಂತಹ ಅದ್ಬುತವಾದ ವ್ಯವಸ್ಥೆ ಮತ್ತು ಶ್ರೇಷ್ಟ ಪರಂಪರೆಯಿಂದ ಬಂದ ನಾವು ಇಂದು ನೀರಿನ ಮೂಲಗಳು ಕಲುಷಿತಗೊಳ್ಳುವುದನ್ನು ತಡೆಯಬೇಕು. ಈಗಗಾಲೇ ನಮ್ಮ ದಡ್ಡತನದಿಂದ ಹಲವಾರು ನದಿ ಮೂಲಗಳು ಅಳಿವಿನಂಚಿನಲ್ಲಿವೆ. ಆಧುನಿಕರಣ ಹಾಗೂ ಪ್ರಕೃತಿಯಲ್ಲಾದ ಅಸಹಜ ಬದಲಾವಣೆಗಳಿಂದ ಅವಸಾನದ ಅಂಚಿನಲ್ಲಿರುವ ಮತ್ತು ಬರಿದಾಗುತ್ತಿರುವ ನೀರಿನ ಮೂಲಗಳಿಗೆ ಲಭ್ಯವಿರುವ ನೀರಾವರಿ ವಿಧಾನಗಳ ಮೂಲಕ ಹೊಸ ಕಾಯಕಲ್ಪ ನೀಡಬೇಕು. ಇಂದಿನ ಆಧುನಿಕತೆ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಬರಡು ಭೂಮಿಗಳಿಗೆ ನೀರು ಹರಿಸಿ ಹಸಿರು ಕ್ರಾಂತಿ ಮಾಡಬೇಕು. ಇದರಿಂದಾಗಿ ಭೌಗೋಳಿಕವಾಗಿ ಮತ್ತು ಆರ್ಥಿಕವಾಗಿ ಸಮತೋಲನ ಸಾಧಿಸಬಹುದು.

ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರವಂ ಮೂಡಿಸು

ಲಕ್ಷ್ಮೀಧರಾಮತ್ಯನ ಶಾಸನದ ಈ ಸಾಲುಗಳು ವಿಜಯನಗರ ಸಾಮ್ರಾಜ್ಯದ ಪ್ರೌಢದೇವರಾಯನ ಕಾಲದಲ್ಲಿ ಪ್ರತಿ ತಾಯಂದಿರು ಮಕ್ಕಳಿಗೆ ಹಾಲುಣಿಸುವ ಜೊಗುಳದ ಸಾಲುಗಳಾಗಿ ನೀರಿನ ಸಂರಕ್ಷಣೆಯ ಪಾಠ ಹೇಳುತ್ತಿದ್ದರು ಎಂಬುದನ್ನು ತೊರ್ಪಡಿಸುತ್ತದೆ. ಈ ಸಾಲುಗಳು ನಾಳೆಯ ಜಗತ್ತಿನ ಭವಿಷ್ಯಕ್ಕಾಗಿ ಜಲಸಂರಕ್ಷಣೆ ನಮ್ಮೆಲ್ಲರಿಗೂ ಇಂದಿಗೂ ಪ್ರಸ್ತುತವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button