
ಪ್ರಗತಿವಾಹಿನಿ ಸುದ್ದಿ: ರಾಯಬಾಗ: ಗಾಮೀಣ ಪ್ರದೇಶದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾ ವಹಿಸಬೇಕು ಎಂದು ತಹಶೀಲ್ದಾರ್ ಸುರೇಶ ಮುಂಜೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ತಹಶೀಲ್ದಾರ್ ಕಛೇರಿಯಲ್ಲಿ ಕುಡಿಯುವ ನೀರಿನ ಕುರಿತು ನೆಡೆದ ಸಭೆಯಲ್ಲಿ ಅವರು ಮಾತನಾಡಿದರು.
ಬೇಸಿಗೆ ದಿನಗಳಲ್ಲಿ ಗ್ರಾಮೀಣ ಭಾಗದ ಪ್ರತಿ ಹಳ್ಳಿಗಳಲ್ಲಿ ತಲೆದೂರುವ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಸಮಸ್ಯೆಗಳನ್ನು ಆಲಿಸಿ, ಗ್ರಾಮಗಳಲ್ಲಿರುವ ಓವರ್ ಹೆಡ್ ಟ್ಯಾಂಕ್‌ಗಳನ್ನು ಪ್ರತಿವಾರ ಸ್ವಚ್ಛಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಮಾಡಲಗಿ, ಹುಬ್ಬರವಾಡಿ, ಸವಸುದ್ಧಿ ಗ್ರಾಮಗಳಿಗೆ ಸದ್ಯಕ್ಕೆ ಕುಡಿಯುವ ನೀರಿನ ಆಭಾವ ಇರುವುದರಿಂದ ಜನರಲ್ಲಿ ಜಾಗೃತಿ ಮೂಡಿಸಿ ನೀರನ್ನು ಮಿತವ್ಯಯವಾಗಿ ಬಳಸಲು ಕರೆ ನೀಡಿದರು.
ತಾ. ಪಂ.ಕಾರ್ಯನಿರ್ವಹಣಾಧಿಕಾರಿ ಸುರೇಶ ಕದ್ದು ಸೇರಿದಂತೆ ವಿವಿಧ ಗ್ರಾಮಗಳ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.