Kannada NewsKarnataka NewsLatest

ನಾವು ತುಳಿದು ಬೆಳೆಯುವವರಲ್ಲ, ಬೆಳೆದು, ಬೆಳೆಸುವವರು – ಮೂಡಲಗಿ ನೆಲದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅಬ್ಬರ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ – ಬೇರೆ ಸಮಾಜಕ್ಕೆ ಯಾವುದೇ ರೀತಿಯ ಅನ್ಯಾಯ ಮಾಡದೆ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ತೆಗೆದುಕೊಂಡೇ ಸಿದ್ಧ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಗುಡುಗಿದ್ದಾರೆ.

ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿಗಾಗಿ ಮೂಡಲಗಿ ತಾಲೂಕಿನ ಕಲ್ಲೋಳ್ಳಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್ವ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜ ಆರ್ಥಿಕವಾಗಿ ಶ್ರೀಮಂತವಲ್ಲ, ಆದರೆ ಶ್ರೀಮಂತ ಹೃದಯವಿರುವವರು ನಮ್ಮ ಸಮಾಜದವರು, ಅದನ್ನು ಅರ್ಥ ಮಾಡಿಕೊಳ್ಳಿ, ಆದರೆ ಅದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ಬಾರಿ ನಮ್ಮ ಸಮಾಜದ ಸಹಾಯ, ಸಹಕಾರ ಪಡೆದುಕೊಂಡು ನಮಗೆ ಮಾತ್ರ ಚಿಪ್ಪು ಕೊಡುತ್ತಾರೆ.

ಮುಖ್ಯಮಂತ್ರಿಗಳು ೨-೩ ಬಾರಿ ಸರ್ವ ಪಕ್ಷಗಳ ಸಭೆಯನ್ನು ಕರೆದಿದ್ದರು. ನಾವು, ಬಸವರಾಜ ಪಾಟೀಲ ಯತ್ನಾಳ ಅವರು ಎಲ್ಲರೂ ಪಾಲ್ಗೊಂಡಿದ್ದೆವು. ಸಭೆಯಲ್ಲಿ ಮುಖ್ಯಮಂತ್ರಿಗಳು ೨ ಎ ಮೀಸಲಾತಿ ನೀಡುವ ಭರವಸೆ ಕೊಟ್ಟಿದ್ದಾರೆ. ಶೀಘ್ರದಲ್ಲಿ ಸರ್ವ ಪಕ್ಷದ ಸಭೆ ಕರೆದು ೨ಎ ಮೀಸಲಾತಿ ನೀಡುವ ನಿರ್ಣಯ ಕೈಗೊಳ್ಳಲಿ ಎಂದು ಮುಖ್ಯಮಂತ್ರಿಗಳಲ್ಲಿ ವಿನಂತಿ ಮಾಡುತ್ತೇನೆ ಎಂದರು.

ನಮ್ಮ ಪಂಚಮಸಾಲಿ ಸಮಾಜದವರು, ನಾವು ಈ ಕ್ಷೇತ್ರದಲ್ಲಿ ೫೦ ಸಾವಿರ ಸಂಖ್ಯೆ ಇದ್ದೇವೆ, ಆ ಕ್ಷೇತ್ರದಲ್ಲಿ ೪೦ ಸಾವಿರ ಸಂಖ್ಯೆಯಲ್ಲಿದ್ದೇವೆ ಎಂದು ಬರೀ ಲೆಕ್ಕ ಹಾಕುತ್ತೇವೆ, ಆದರೆ ನಾವು ಇನ್ನೂ ಚುರುಕಾಗಿಯೇ ಇಲ್ಲ. ಎಮ್ಮೆ ಕಟ್ಟಿ ಹಾಲು ಕರೆದು ಬೆಣ್ಣೆ ಮಾರಿ, ಮಜ್ಜಿಗೆ ಕುಡಿಯುವ ಬುದ್ದಿ ನಮ್ಮದು. ೪೦, ೫೦, ೭೦ ಸಾವಿರದ ಲೆಕ್ಕದಿಂದ ರಾಜಕಾರಣದಲ್ಲಿ ಗೆಲ್ಲಲು ಆಗುವುದಿಲ್ಲ, ಚೆನ್ನಮ್ಮನಿಗೆ ಒಬ್ಬ ಸಂಗೊಳ್ಳಿ ರಾಯಣ್ಣ ಬೇಕೇಬೇಕು, ಹಾಗೆ ಎಲ್ಲ ವರ್ಗದವರೊಂದಿಗೆ ಪಂಚಮಸಾಲಿ ಸಮಾಜ ಒಳ್ಳೆಯ ಸಂಬಂಧ ಇಟ್ಟುಕೊಂಡಿದೆ. ನಾವು ಬಸವಣ್ಣನ ಕುಲದವರು. ಎಲ್ಲರನ್ನು ಒಡಗೂಡಿ ಮುಂದೆ ಹೋಗುವುದು ನಮ್ಮ ಸಮಾಜದ ಅಂತಃಸತ್ವ. ಬೇರೆ ಸಮಾಜದವರಿಗೆ ಇಷ್ಟು ದಿನ ಸಹಾಯ ಸಹಕಾರ ಮಾಡಿದ್ದೇವೆ, ಒಮ್ಮೆ ಪಂಚಮಸಾಲಿಯವರಿಗೆ ಆಶೀರ್ವಾದ ಮಾಡಿ ಎಂದರು.

ನಾವು ರಾಜಕೀಯ ಮೀಸಲಾತಿ ಕೇಳುತ್ತಿಲ್ಲ. ರೈತರಿಗೆ ಸಬ್ಸಿಡಿ ಕೇಳುತ್ತಿಲ್ಲ, ನಮ್ಮ ಮಕ್ಕಳ ಭವಿಷ್ಯದ ಸಲುವಾಗಿ ವಿದ್ಯಾಭ್ಯಾಸಕ್ಕಾಗಿ ಮೀಸಲಾತಿ ಕೇಳುತ್ತಿದ್ದೇವೆ. ೯೫,೯೯ ಪರ್ಸೆಂಟ್ ಅಂಕ ಪಡೆದರೂ ಉನ್ನತ ಶಿಕ್ಷಣದಲ್ಲಿ ಸೀಟ್ ಸಿಗುತ್ತಿಲ್ಲ. ಮೀಸಲಾತಿ ದೊರೆತರೆ ನಮ್ಮ ಮಕ್ಕಳ ಭವಿಷ್ಯ ಒಳ್ಳೆಯದಾಗುತ್ತದೆ ಎಂಬ ಆಶಯವಿದೆ ಎಂದರು.

ನಮ್ಮ ಸಮಾಜದವರಿಗೆ ತುಳಿದು ಬೆಳೆಯುವದರಲ್ಲಿ ವಿಶ್ವಾಸವಿಲ್ಲ, ಬೆಳೆದು ಬೆಳಸೋದರಲ್ಲಿ ನಮಗೆ ವಿಶ್ವಾಸ. ಮುಂದೆ ಬಂದರೆ ಹಾಯೋರಲ್ಲ, ಹಿಂದೆ ಬಂದರೆ ಒದೆಯೋರಲ್ಲ, ಹಾಗಂತ ನಮ್ಮನ್ನು ಹಗುರವಾಗಿ ತೆಗೆದುಕೊಳ್ಳಲು ಹೋಗಬೇಡಿ ಎಂದು ಎಚ್ಚರಿಸಿದರು.

ಬಸವರಾಜ ಪಾಟೀಲ ಯತ್ನಾಳ ಮತ್ತು ಈರಣ್ಣ ಕಡಾಡಿ ಅವರಲ್ಲಿ ವಿನಂತಿಸುತ್ತೇನೆ, ಸರಕಾರ ತಮ್ಮದಿದೆ. ಮುಖ್ಯಮಂತ್ರಿಗಳು ೨ ಎ ಮೀಸಲಾತಿ ನೀಡುವುದಾಗಿ ಮಾತನ್ನು ಕೊಟ್ಟಿದ್ದಾರೆ, ಸಮಾಜಕ್ಕೆ ನ್ಯಾಯ ಕೊಡಿಸಿ. ಮೊನ್ನೆ ಯತ್ನಾಳ ಅವರಿಗೆ ಧ್ವನಿಗೂಡಿಸಿ ನಾನೂ ಸಹ ಸದನದ ಬಾವಿಗಿಳಿದು ಪ್ರತಿಭಟಿಸಿದ್ದೇನೆ. ಸರಕಾರ ಯಾರದ್ದೂ ಇರಲಿ ನಾವು ರಾಜಕೀಯ ನೋಡೋದಿಲ್ಲ. ಸಮಾಜದ ಅಭಿವೃದ್ಧಿ ನಮ್ಮ ಉದ್ದೇಶ. ನಾಳೆ ನಮ್ಮ ಸರಕಾರ ಬಂದರೂ ನನ್ನ ನಿಲುವು ಇದೇ ಆಗಿರುತ್ತದೆ ಎಂದರು.

ವಿನಯ ಕುಲಕರ್ಣಿ ಅವರು ಹೇಳಿದಂತೆ ನಮಗೆ ಮುಂದೆ ಗುರಿ ಇದೆ, ಹಿಂದೆ ಗುರುವಿದ್ದಾರೆ. ಶ್ರೀ ಜಯಮೃತ್ಯುಂಜಯ ಸ್ವಾಮೀಜಿಯವರು ೭೦೦ ಕಿಮೀ ಪಾದ ಯಾತ್ರೆ ನಡೆಸಿದ್ದಾರೆ, ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇಂಥಹ ಗುರುಗಳು ಸಿಕ್ಕಿರುವುದು ನಮ್ಮ ಪುಣ್ಯ ಎಂದರು.

ಬಸವಮೃತ್ಯುಂಜಯ ಸ್ವಾಮಿಗಳು, ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಯತ್ನಾಳ, ರಾಜ್ಯದ ಮಾಜಿ ಸಚಿವರಾದ ವಿನಯ ಕುಲಕರ್ಣಿ, ಎ.ಬಿ.ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಮ ಕಡಾಡಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಹಲವಾರ ಮುಖಂಡರು ಇದ್ದರು.

​ಹರ್ಷ ಸಕ್ಕರೆ ಕಾರ್ಖಾನೆ ಎಥೆನಾಲ್ ಘಟಕ ಉದ್ಘಾಟನೆ, ಕಬ್ಬು ನುರಿಸುವ ಹಂಗಾಮಿಗೆ ಚಾಲನೆ

https://pragati.taskdun.com/latest/inauguration-of-harsha-sugar-factory-ethanol-unit-cane-crushing-season-starts/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button