ಪ್ರಗತಿವಾಹಿನಿ ಸುದ್ದಿ; ಚಿಕ್ಕನಾಯಕನಹಳ್ಳಿ: ಸರ್ವಜ್ಞ ಒಂದು ಮಾತು ಹೇಳಿದ್ದಾನೆ. ಹುಳಿಗಳಲ್ಲಿ ನಿಂಬೆ ಹಣ್ಣಿನ ಹುಳಿ ಶ್ರೇಷ್ಠ, ಕಪ್ಪು ಬಣ್ಣಗಳಲ್ಲಿ ದುಂಬಿಯ ಕಪ್ಪು ಬಣ್ಣ ಶ್ರೇಷ್ಠ, ದೇವರುಗಳಲ್ಲಿ ಶಿವ ಶ್ರೇಷ್ಠ, ಅದೇ ರೀತಿ ಮನುಷ್ಯನ ಗುಣಗಳಲ್ಲಿ ನಂಬಿಕೆಗಿಂತ ದೊಡ್ಡ ಗುಣವಿಲ್ಲ ಎಂದು ಹೇಳಿದ್ದಾರೆ. ಅದೇ ರೀತಿ ನನ್ನ ಚುನಾವಣ ಪ್ರಚಾರದ ಮೊದಲ ಸಭೆಗೆ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮಹಾಜನತೆ ಯಶಸ್ಸು ನೀಡುತ್ತಾರೆ ಎಂಬ ನಂಬಿಕೆಯೊಂದಿಗೆ ನಾನು ಇಲ್ಲಿಗೆ ಬಂದು ಚುನಾವಣಾ ಪ್ರಚಾರ ಮಾಡುತ್ತಿದ್ದೇನೆ.
ಚಿಕ್ಕನಾಯಕನಹಳ್ಳಿಯಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ನನ್ನ ಮಿತ್ರ ಕಿರಣಕುಮಾರ್ ಅವರಿಗೆ ನಾಲ್ಕು ವರ್ಷಗಳಿಂದ ಗಾಳ ಹಾಕುತ್ತಿದ್ದೆ. ಅವರು ಬಿದ್ದಿರಲಿಲ್ಲ. ಕೊನೆಯದಾಗಿ ನಾನು ಹೊಸ ಗಾಳ ತರಿಸಿ ಹಾಕಿದಾಗ ತಕ್ಷಣವೇ ಕಚ್ಚಿಕೊಂಡರು. ಈಗ ಅವರನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಕಿರಣ್ ಕುಮಾರ್ ಅವರು ಇಂದು ನನಗೆ ವಿಧಾನಸೌಧದ ಪ್ರತಿಮೆಯನ್ನು ಸ್ಮರಣಿಕೆಯಾಗಿ ನೀಡಿದ್ದಾರೆ. ಕೇಸರಿ ಮೈಸೂರು ಪೇಟ ಹಾಕಿದ್ದಾರೆ. ಕಿರಣ ಎಂದರೆ ಸೂರ್ಯನ ಬೆಳಕು. ಅವರ ಮೂಲಕ ನಿಮ್ಮ ಮನೆ ಬಾಗಿಲಿಗೆ ಬದಲಾವಣೆಯ ಬೆಳಕು ಬರುತ್ತಿದೆ ಎಂದರು.
ಮರಗಳಿಗೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆಯೂ ಅಷ್ಟೇ ಮುಖ್ಯ. ಚಿಕ್ಕನಾಯಕನಹಳ್ಳಿಯಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಭಾವಿಸಿದ್ದರೆ ಅದನ್ನು ನಿಮ್ಮ ತಲೆಯಿಂದ ತೆಗೆದುಹಾಕಿ. ನಾನು ಕೆಲ ದಿನಗಳ ಹಿಂದೆ ಇಲ್ಲಿನ ಮಠಕ್ಕೆ ಬಂದಾಗ ಅಂದು ಸಾವಿರಾರು ಮಂದಿ ನನ್ನ ಸ್ವಾಗತ ಮಾಡಿದ್ದೀರಿ. ನಾನು ಸಮೀಕ್ಷೆ ಮಾಡಿಸಿದಾಗ, ಅವರು ಈ ಜಿಲ್ಲೆಯಲ್ಲಿ 8 ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳುತ್ತಿದ್ದರು. ಆಗ ನಾನು ಚಿಕ್ಕನಾಯಕನಹಳ್ಳಿ ಸೇರಿ ಒಂಬತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದ್ದೆ.
ನೀವೆಲ್ಲರೂ ಬಹಳ ಪ್ರೀತಿ ಅಭಿಮಾನದಿಂದ ನಮ್ಮನ್ನು ಸ್ವಾಗತಿಸಿದ್ದೀರಿ. ರಾಜ್ಯದಲ್ಲಿ ಬಿಜೆಪಿ ಕಳೆದ ನಾಲ್ಕು ವರ್ಷಗಳಿಂದ ಅಧಿಕಾರ ಮಾಡಿತ್ತು. ಮಾಧುಸ್ವಾಮಿ ಅವರು ಮಂತ್ರಿಯಾಗಿದ್ದರು. ಅವರು ಮೇಧಾವಿಗಳಿದ್ದಾರೆ. ಸ್ವತಃ ಮಾಧುಸ್ವಾಮಿ ಅವರೇ ಬಿಜೆಪಿ ಸರ್ಕಾರವನ್ನು ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ. ಕಿರಣ್ ಕುಮಾರ್ ಅವರು ಮಾಜಿ ಶಾಸಕರು ಹಾಗೂ ಮಂಡಳಿ ಅಧ್ಯಕ್ಷರಾಗಿದ್ದರು. ಅವರು ಯಡಿಯೂರಪ್ಪ ಅವರಿಗೆ ಬಹಳ ಆಪ್ತರಾಗಿದ್ದವರು.
ನಾಲ್ಕೂವರೆ ವರ್ಷಗಳಿಂದ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಈ ಸರ್ಕಾರದಿಂದ ಆಗಿಲ್ಲ. ಈಗ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಈ ಚುನಾವಣೆಯಲ್ಲಿ ಒಂದು ಅವಕಾಶ ಸಿಗುತ್ತಿದೆ. ಮೇ 10 ರಂದು ಚುನಾವಣೆ ನಡೆಯುತ್ತಿದ್ದು, ಆ ದಿನ ಕೇವಲ ಮತದಾನ ಮಾಡುವ ದಿನ ಮಾತ್ರವಲ್ಲ. ಕರ್ನಾಟಕದಲ್ಲಿ ಬದಲಾವಣೆ ತರುವ ದಿನ. ಭ್ರಷ್ಟ ಬಿಜೆಪಿಯನ್ನು ಬಡಿದೋಡಿಸುವ ದಿನ, ನಿಮ್ಮ ಭವಿಷ್ಯವನ್ನು ನೀವೇ ನಿರ್ಧಾರ ಮಾಡಿಕೊಳ್ಳುವ ದಿನ.
ಕೊಬ್ಬರಿ ಬೆಲೆ ಕುಸಿತದಿಂದ ನಿಮಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತಹ ದಿನ. ನಿಮ್ಮ ಸಂಕಟಗಳಿಗೆ ಮುಕ್ತಿ ನೀಡುವ ದಿನ. ಕನ್ನಡದ ಸ್ವಾಭಿಮಾನ ಉಳಿಸಿಕೊಳ್ಳುವ ದಿನ.
ಕಾಂಗ್ರೆಸ್ ಪಕ್ಷ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಮೋದಿ ಅವರು ಕಳೆದ ಚುನಾವಣೆ ಸಮಯದಲ್ಲಿ ಅಡುಗೆ ಅನಿಲ 50 ರೂ. ಹೆಚ್ಚಾದಾಗ ನೀವು ಮತ ಹಾಕಲು ಹೋಗುವ ಮುನ್ನ ನಿಮ್ಮ ಮನೆಯ ಅಡುಗೆ ಸಿಲಿಂಡರ್ ನೋಡಿಕೊಂಡು ನಮಸ್ಕಾರ ಹಾಕಿಕೊಂಡು ಹೋಗಿ ಮತ ಹಾಕಿ ಎಂದು ಹೇಳಿದ್ದರು. ನೀವುಗಳು ಕೂಡ ಇನ್ನು ಮುಂದೆ ಪ್ರಚಾರ ಮಾಡುವಾಗ ಪ್ರತಿ ಬೂತ್ ಮುಂದೆ ಒಂದು ಸಿಲಿಂಡರ್ ಇಟ್ಟುಕೊಂಡು ಪ್ರಚಾರ ಮಾಡಿ.
ಬೆಲೆ ಏರಿಕೆಯಿಂದ ರಾಜ್ಯದ ಜನಸಾಮಾನ್ಯರ ಬದುಕು ಬೀದಿಗೆ ಬಿದ್ದಿದೆ. ಹೀಗಾಗಿ ಅವರಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಮೊದಲನೇ ಗ್ಯಾರಂಟಿ ಯೋಜನೆಯಾಗಿ ಗೃಹಜ್ಯೋತಿ ಪ್ರಕಟಿಸಿದೆ. ಈ ಯೋಜನೆ ಮೂಲಕ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಆಮೂಲಕ ಈ ಕ್ಷೇತ್ರದ ಬಹುತೇಕ ಮಂದಿ ಇನ್ನುಮುಂದೆ ಕರೆಂಟ್ ಬಿಲ್ ಕಟ್ಟುವ ಅಗತ್ಯ ಇರುವುದಿಲ್ಲ. ಈ ಯೋಜನೆ ಮೂಲಕ ಪ್ರತಿ ಕುಟುಂಬ ಪ್ರತಿ ತಿಂಗಳು 1500 ರೂ ಉಳಿತಾಯ ಮಾಡಬಹುದು. ಇನ್ನು ಎರಡನೇ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆ ಪ್ರಕಟಿಸಿದ್ದೇವೆ. ಆಮೂಲಕ ಸಂಸಾರ ನಡೆಸಲು ಪರದಾಟ ನಡೆಸುತ್ತಿರುವ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಆಮೂಲಕ ವರ್ಷಕ್ಕೆ 24 ಸಾವಿರ ನೀಡಲಾಗುವುದು. ಇನ್ನು ರಾಜ್ಯದಲ್ಲಿ ಯಾವುದೇ ಬಡ ವ್ಯಕ್ತಿ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯಲ್ಲಿ ನೀಡಲಾಗುತ್ತಿರುವ ಉಚಿತ ಅಕ್ಕಿ ಪ್ರಮಾಣವನ್ನು 10 ಕೆ.ಜಿಗೆ ಏರಿಕೆ ಮಾಡಲಾಗುವುದು. ಇನ್ನು ನಿರುದ್ಯೋಗ ಸಮಸ್ಯೆಯಿಂದ ಬಳಲಿರುವ ಯುವಕರಿಗೆ ಧೈರ್ಯ ತುಂಬುವ ಉದ್ದೇಶದಿಂದ ನಿರುದ್ಯೋಗ ಪಧವೀದರರಿಗೆ ಪ್ರತಿ ತಿಂಗಳು 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ನಾವು ಈ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡದಿದ್ದರೆ, ನಾವು ಮತ್ತೆ ನಿಮ್ಮ ಮನೆ ಮುಂದೆ ಬಂದು ಮತ ಕೇಳುವುದಿಲ್ಲ.
ಈ ಸರ್ಕಾರ ಸರ್ಕಾರಿ ಹುದ್ದೆ ನೇಮಕಾತಿಗಳಲ್ಲಿ ಅಕ್ರಮ ಎಸಗುವ ಮೂಲಕ ಲಕ್ಷಾಂತರ ಯುವಕರ ಭವಿಷ್ಯವನ್ನು ನಾಶ ಮಾಡಿದೆ. ಇಂತಹ ಸರ್ಕಾರದ ಪರಿಣಾಮವಾಗಿ ಪೊಲೀಸ್ ಅಧಿಕಾರಿಗಳಿಂದ ಅಭ್ಯರ್ಥಿಗಳವರೆಗೂ 100ಕ್ಕೂ ಹೆಚ್ಚುಮಂದಿ ಜೈಲು ಪಾಲಾಗಿದ್ದಾರೆ. ನಾನು ಇಂಧನ ಸಚಿವನಾಗಿದ್ದಾಗ 25 ಸಾವಿರ ನೇಮಕಾತಿ ಮಾಡಿದ್ದೆ. ಯಾರಾದರೂ ಒಬ್ಬರು ನನಗೆ ಲಂಚಕೊಟ್ಟು ಕೆಲಸಕ್ಕೆ ಸೇರಿದ್ದಾರಾ? ಪಾವಗಡದಲ್ಲಿ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ಮಾಡಿದ್ದೇವೆ. 13 ಸಾವಿರ ಎಕರೆಯನ್ನು ಖರೀದಿ ಮಾಡದೇ ಅವರಿಂದ ಲೀಸ್ ಮೂಲಕ ಜಮೀನು ಪಡೆದಿದ್ದೇವೆ. ಯಾರಿಂದಾದರೂ ಒಂದು ರೂಪಾಯಿ ಲಂಚ ಪಡೆದಿದ್ದೇನಾ? ಈ ರೈತರ ಖಾತೆಗೆ ಪ್ರತಿ ವರ್ಷ 25 ಸಾವಿರ ಹಣ ಸೇರುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಆಡಳಿತ.
ಈ ನಾಡು ಕಲ್ಪತರನಾಡು. 20 ಸಾವಿರ ಇದ್ದ ಕೊಬ್ಬರಿ ಬೆಲೆ ಈಗ 8800 ರೂ.ಗೆ ಕುಸಿದಿದೆ. ಈ ಸರ್ಕಾರ ಏನು ಮಾಡುತ್ತಿದೆ. ಈ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಜನರ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಾಗಲಿಲ್ಲ. ಈಗ ಚುನಾವಣೆ ಸಮಯದಲ್ಲಿ ಮುಂದೆ ಸರ್ಕಾರ ಬಂದಮೇಲೆ ಮಾಡುತ್ತೇವೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಅಲ್ಲಮಪ್ರಭುಗಳು ಹೇಳಿರುವಂತೆ ಕೊಟ್ಟ ಕುದುರೆಯನ್ನು ಏರಲಾಗದೇ, ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ. ಅದೇ ರೀತಿ ಅದಿಕಾರ ಇದ್ದಾಗ ಬಿಜೆಪಿ ನಾಯಕರು ರೈತನಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ, ಯುವಕರಿಗೆ ಏನನ್ನೂ ಮಾಡಲಿಲ್ಲ. ಇನ್ನು ಮುಂದೆ ಅಧಿಕಾರಕ್ಕೆ ಬಂದ ನಂತರ ಮಾಡುವರೇ?
ರೈತನಿಗೆ ಸಂಬಳ, ಲಂಚ, ಬಡ್ತಿ, ಪಿಂಚಣೆ ಯಾವುದೂ ಇಲ್ಲ. ಮಾಧುಸ್ವಾಮಿ ಅವರಾಗಲಿ, ಬೇರೆ ಬಿಜೆಪಿ ನಾಯಕರು ಅಧಿಕಾರ ಇದ್ದಾಗ ಈ ಬಡಜನರ ನೋವು ನಲಿವಿಗೆ ಸ್ಪಂದಿಸದಿದ್ದಾಗ ಇವರಿಗೆ ಮತ್ತೆ ಅಧಿಕಾರ ಯಾವ ಕಾರಣಕ್ಕೆ ನೀಡಬೇಕು? ಇನ್ನು 30 ದಿನಗಳು ಮಾತ್ರ. ಆನಂತರ ಇವರು ಮಾಜಿ ಮಂತ್ರಿಗಳಾಗುತ್ತಾರೆ.
ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಗಳನ್ನು ನೀಡಬೇಕು. ಅವರ ಹೆಸರು ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಬೇಕು. ನಾವು ಇವರ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸುತ್ತೇವೆ. ನಂತರ ಜೂನ್ ತಿಂಗಳಲ್ಲಿ ಇವರ ಮನೆಗೆ ಜಿಲ್ಲಾಧಿಕಾರಿ ಕಚೇರಿಯಿಂದ ಕರೆ ಹೋಗಿ ಈ ನಾಲ್ಕು ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯಬಹುದಾಗಿದೆ.
ಯಾರೋ ಕೆಲವರು ಚಿಕ್ಕನಾಯಕನಹಳ್ಳಿಯಲ್ಲಿ ಕಾಂಗ್ರೆಸ್ ಸತ್ತುಹೋಗಿದೆ ಎಂದು ಹೇಳಿದ್ದರು. ಇದು ಸುಳ್ಳು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತ ಗಳಿಸಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಮಹಾತ್ಮಾ ಗಾಂಧಿ ಒಂದು ಒಂದು ಮಾತು ಹೇಳಿದ್ದರು. ಭಾರತ ಸತ್ತಾಗ ಮಾತ್ರ ಕಾಂಗ್ರೆಸ್ ಸಾಯುತ್ತದೆ ಎಂದು ಹೇಳಿದ್ದರು.
ದೇವರು ನಮಗೆ ವರವನ್ನೂ ನೀಡುವುದಿಲ್ಲ, ಶಾಪವನ್ನು ನೀಡುವುದಿಲ್ಲ. ಕೇವಲ ಅವಕಾಶಗಳನ್ನು ಮಾತ್ರ ನೀಡುತ್ತಾನೆ. ನಿಮಗೆ ಸಿಕ್ಕಿರುವ ಈ ಅವಕಾಶವನ್ನು ಬಳಸಿಕೊಂಡು ನೀವು ಪ್ರತಿಯೊಬ್ಬರು ಬಿಜೆಪಿ ಹಾಗೂ ಜೆಡಿಎಸ್ ಮತದಾರರಿಂದ ಕನಿಷ್ಠ ಐವರ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕಿಸಬೇಕು. ಇಲ್ಲಿ ಕೇವಲ ಕಿರಣ್ ಕುಮಾರ್ ಮಾತ್ರ ಅಭ್ಯರ್ಥಿಯಲ್ಲ. ಡಿ.ಕೆ. ಶಿವಕುಮಾರ್, ಪರಮೇಶ್ವರ್, ಸಿದ್ದರಾಮಯ್ಯ ಅವರು ಅಭ್ಯರ್ಥಿ. ನಾವು ಕೇವಲ ಜಾತಿ ಮೇಲೆ ಲೆಕ್ಕಾಚಾರ ಮಾಡುವುದಿಲ್ಲ. ನಮ್ಮದು ನೀತಿಯ ಮೇಲೆ ಲೆಕ್ಕಾಚಾರ ಹಾಕುತ್ತೇವೆ ಎಂದು ಶಿವಕುಮಾರ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ