ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕನ್ನಡ ನಾಡಿನ ಸೌಹಾರ್ದ ಮತ್ತು ಜಾತ್ಯತೀತ ಪರಂಪರೆಯ ರಕ್ಷಣೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ದ್ವೇಷ ರಾಜಕಾರಣವನ್ನು ಬಲಿ ಹಾಕಿ, ಭಯದ ವಾತಾವರಣ ಅಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗೃಹ ಕಚೇರಿ ‘ಕೃಷ್ಣ’ದಲ್ಲಿ ಸುಮಾರು 40 ಕ್ಕೂ ಹೆಚ್ಚು ಮಂದಿ ಸಾಹಿತಿ ಬರಹಗಾರರು ಹಾಗೂ ನಾನಾ ಜನಪರ ಸಂಘಟನೆಗಳ ಮುಖ್ಯಸ್ಥರ ಜತೆಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
“ದೇಶವನ್ನು ಅಪಾಯದ ಸುಳಿಗೆ ದೂಡುತ್ತ , ಈ ಮಣ್ಣಿನ ಬಹುತ್ವವನ್ನು ನಾಶ ಮಾಡುತ್ತಿರುವ ಬಿಜೆಪಿ ಪರಿವಾರದ ವಿರುದ್ಧ ಖಚಿತ ನಿಲುವು ತೆಗೆದುಕೊಂಡು ಸ್ವಯಂಪ್ರೇರಿತವಾಗಿ ಈ ಚುನಾವಣೆಯಲ್ಲಿ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದಕ್ಕಾಗಿ ಸಾಹಿತಿ-ಬರಹಗಾರರಿಗೆ ಅಭಿನಂದನೆ ಸಲ್ಲಿಸಿದರು.
“ಪಠ್ಯ ಮತ್ತು ಪಾಠಗಳ ಮೂಲಕ ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಲು ನಡೆಸಿರುವ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ಶೈಕ್ಷಣಿಕ ವರ್ಷ ಆರಂಭ ಆಗಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಕನ್ನಡ ಹೋರಾಟಗಾರರು, ರೈತ-ಕಾರ್ಮಿಕ-ದಲಿತ ಚಳವಳಿಗಳ ಹೋರಾಟಗಾರರು ಮತ್ತು ಸಾಹಿತಿ, ಬರಹಗಾರರ ಮೇಲೆ ಹಾಕಿರುವ ಸುಳ್ಳು ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗುವುದು. ಹೊಸ ಶಿಕ್ಷಣ ನೀತಿ ಹೆಸರಲ್ಲಿ ಶಿಕ್ಷಣ ಕ್ಷೇತ್ರವನ್ನು ಗಬ್ಬೆಬ್ಬಿಸಲು ಅವಕಾಶ ಕೊಡುವುದಿಲ್ಲ. ಈ ಬಗ್ಗೆ ಮತ್ತೊಮ್ಮೆ ಪ್ರತ್ಯೇಕವಾದ ಸಭೆ ಕರೆದು ಸಮಗ್ರವಾಗಿ ಚರ್ಚಿಸಿ ನಿಷ್ಠುರವಾದ ಮತ್ತು ಖಚಿತವಾದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
“ಅನೈತಿಕ ಪೊಲೀಸ್ ಗಿರಿ, ದ್ವೇಷದ ರಾಜಕಾರಣ, ತೇಜೋವಧೆ ಮಾಡುವ ಟ್ರೋಲ್ ಗಳು ಮತ್ತು ಸಾಹಿತಿಗಳಿಗೆ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಈಗಾಗಲೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಖಡಕ್ ಸೂಚನೆ ನೀಡಿದ್ದೇನೆ. ಉಳಿದಂತೆ ಸಾಹಿತಿ ಬರಹಗಾರರು ನೀಡಿರುವ ಮನವಿ ಪತ್ರದಲ್ಲಿನ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಅಗತ್ಯಕ್ಕೆ ತಕ್ಕಂತೆ ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ” ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಸಾಹಿತಿಗಳು, ಚಿಂತಕರು “ಹೊಸ ಸರ್ಕಾರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಈ ನಿಟ್ಟಿನಲ್ಲಿ ಸಂವಿಧಾನ ವಿರೋಧಿ, ಕೋಮುವಾದಿ ಪಠ್ಯಪುಸ್ತಕಕ್ಕೆ ಕೂಡಲೇ ತಿದ್ದುಪಡಿ ಮಾಡಿ, ಮಕ್ಕಳ ಮನಸಿನ ಮೇಲೆ ಬೀರುವ ದುಷ್ಪರಿಣಾಮವನ್ನು ತಡೆಯಬೇಕು. ಮುಂದಿನ ವರ್ಷದ ವೇಳೆಗೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಬೇಕು. ಶಿಕ್ಷಣ ಇಲಾಖೆಯ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.
“ಪ್ರೌಢಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆಯನ್ನು ಮುಂದುವರೆಸಬೇಕು. ಬೈಸಿಕಲ್ ವಿತರಣೆ ಯೋಜನೆಯನ್ನು ಮುಂದುವರೆಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚನೆ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ DERAಯನ್ನು ಸಕ್ರಿಯಗೊಳಿಸಬೇಕು. ರದ್ದಾಗಿರುವ ವಿದ್ಯಾರ್ಥಿವೇತನ ಯೋಜನೆ ಮರುಜಾರಿಯಾಗಬೇಕು. UUCMS ವ್ಯವಸ್ಥೆಯ ಮರುಪರಿಶೀಲಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂಪಡೆಯಬೇಕು. ಸಮ ಸಮಾಜಕ್ಕಾಗಿ ಸಮಾನ ಶಿಕ್ಷಣ ಆಶಯವನ್ನು ಸಾಕಾರಗೊಳಿಸಬೇಕು. ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ NEET ವ್ಯವಸ್ಥೆಯಿಂದ ಹೊರ ಬರುವ ಅಗತ್ಯವಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿ ಅನುಷ್ಠಾನ ಸಮರ್ಪಕವಾಗಿ ಆಗಬೇಕು” ಎಂದು ಆಗ್ರಹಿಸಿದರು.
“ವಿವಿಧ ಸಾಂಸ್ಕೃತಿಕ ಪ್ರತಿಷ್ಠಾನಗಳಲ್ಲಿ ಹೊಸ ಪ್ರತಿಭಾವಂತರಿಗೆ ಅವಕಾಶ ನೀಡಬೇಕು. ಗ್ರಂಥಾಲಯ ಇಲಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ ಪುಸ್ತಕ ಖರೀದಿ ಆಗಿಲ್ಲ. ಪುಸ್ತಕ ಖರೀದಿಗೆ ಅವಕಾಶ ಕಲ್ಪಿಸಬೇಕು. ಹೆಣ್ಣುಮಕ್ಕಳ ದೌರ್ಜನ್ಯ ಅಧ್ಯಯನ ಸಮಿತಿಯ ವರದಿಯ ಶಿಫಾರಸುಗಳ ಜಾರಿಗೆ ಕ್ರಮ ಕೈಗೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆ ರಕ್ಷಣೆ ಮಾಡಲು ಮಸೂದೆ ಮಂಡಿಸಬೇಕು. ಹಿಜಾಬ್ ವಿವಾದದಿಂದಾಗಿ ಸಾವಿರಾರು ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಮವಸ್ತ್ರ ಕುರಿತ ಸರ್ಕಾರಿ ಆದೇಶವನ್ನು ಪರಿಷ್ಕರಿಸಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಕುರಿತ ಸರ್ಕಾರಿ ಆದೇಶವನ್ನು ಹಿಂಪಡೆಯಬೇಕು. ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ. ಮೇಲ್ವಿಚಾರಣಾ ಸಮಿತಿ ಪ್ರತಿ ತಿಂಗಳೂ ಈ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ, ಸಮರ್ಪಕ ಅನುಷ್ಠಾನ ಖಾತರಿಪಡಿಸಬೇಕು.
ಹಲವರು ಸಾಹಿತಿ, ಚಿಂತಕರಿಗೆ ನಿರಂತರವಾಗಿ ಬೆದರಿಕೆ ಪತ್ರಗಳು ಬರುತ್ತಿದ್ದು, ಭಯದ ವಾತಾವರಣ ನಿರ್ಮಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಗಳಲ್ಲಿ ನಿರ್ದಿಷ್ಟ ಸಮುದಾಯದ ಜನರೇ ನೇಮಕಗೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳ ಪಠ್ಯಕ್ರಮಕ್ಕೆ ಪೂರಕವಾದ ಪುಸ್ತಕಗಳನ್ನಷ್ಟೇ ಖರೀದಿಸಲು ಕ್ರಮ ವಹಿಸಬೇಕು. ಕೆಲವೆಡೆ ಅಪ್ರಸ್ತುತ ಪುಸ್ತಕಗಳನ್ನು ಖರೀದಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಸಮುದಾಯ ಭವನಗಳಲ್ಲಿ ಸಂವಿಧಾನದ ಬಗ್ಗೆ, ಸಾಮರಸ್ಯದ ಬಗ್ಗೆ ಅರಿವು ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಸಾಹಿತಿಗಳು ಮತ್ತು ಚಿಂತಕರು ಒತ್ತಾಯಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ