ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಪೊಲೀಸರಿಗೆ ವಾರದ ರಜೆ ನೀಡುತ್ತಿಲ್ಲವೆಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಕಡ್ಡಾಯವಾಗಿ ಸಿಬ್ಬಂದಿಗೆ ವಾರದ ರಜೆ ನೀಡುವಂತೆ ಗುರುವಾರ ತುರ್ತು ಸುತ್ತೋಲೆ ಹೊರಡಿಸಿದ್ದಾರೆ.
”ರಾಜ್ಯ ಪೊಲೀಸ್ ಸಿಬ್ಬಂದಿಗೆ ವಾರದಲ್ಲಿ ಒಂದು ದಿನ ಕಡ್ಡಾಯ ರಜೆ ನೀಡಲು ಸೂಚಿಸಿದ್ದು ತಪ್ಪಿದರೆ, ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ಸುತ್ತೋಲೆಯಲ್ಲಿ ಎಚ್ಚರಿಸಿದ್ದಾರೆ.
ರಾಜ್ಯದ ಪೊಲೀಸ್ ಕಮಿಷನರ್‌ಗಳು, ಐಜಿಪಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಸುತ್ತೋಲೆ ಕಳುಹಿಸಲಾಗಿದೆ. ಈ ಹಿಂದೆಯೂ ಸಿಬ್ಬಂದಿಗೆ ವಾರದ ರಜೆ ನೀಡುವ ಸಂಬಂಧ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ, ಕೆಲಸದ ಒತ್ತಡದಿಂದಾಗಿ ಠಾಣಾಧಿಕಾರಿಗಳು ಸಿಬ್ಬಂದಿಗೆ ರಜೆ ನೀಡುತ್ತಿರಲಿಲ್ಲ.
ಇದರಿಂದ ತೀವ್ರ ಬೇಸತ್ತ ಸಿಬ್ಬಂದಿ, ಪ್ರವೀಣ ಸೂದ್ ಅವರಿಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ವಾರದ ರಜಾ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ