Wanted Tailor2
Cancer Hospital 2
Bottom Add. 3

ಫುಲ್ ಟೈಂ ಮೀರ್ ಸಾದಿಕ್ ವಾದಿಗೆ ವೆಸ್ಟ್ ಎಂಡ್ ಹೋಟೆಲ್ ಸೋಂಕು: ಎಚ್.ಡಿ. ಕುಮಾರಸ್ವಾಮಿ ಕಿಡಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಢೋಂಗಿ ಸಮಾಜವಾದಿ, ಪುಲ್ ಟೈಂ ಮೀರ್ ಸಾದಿಕ್ ವಾದಿಗೆ ವೆಸ್ಟ್ ಎಂಡ್ ಹೋಟೆಲ್ ಸೋಂಕು ಮತ್ತೆ ತಗುಲಿದೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ್ದಾರೆ.

ಹೇಳಿದ್ದೇ ಹೇಳುವ ಕಿಸುಬಾಯಿ ದಾಸನಿಗೆ ಗೊತ್ತಿರುವುದು ವೆಸ್ಟ್‌ ಎಂಡ್‌ ಹೋಟೆಲ್, ಬಿಜೆಪಿ ಬಿ ಟೀಂ ಅಷ್ಟೇ ಎಂದು ಅವರು ಸರಣಿ ಟ್ವೀಟ್ ಮಾಡಿದ್ದಾರೆ.

ವೆಸ್ಟ್ ಎಂಡ್ ನಲ್ಲಿ ಆಡಳಿತ ನಡೆಸಿಲ್ಲ ಎನ್ನುವ ಗಿಲೀಟು ಗಿರಾಕಿ, ಆವತ್ತು ಮುಖ್ಯಮಂತ್ರಿ ನಿವಾಸವನ್ನೇಕೆ ತೆರವು ಮಾಡಲಿಲ್ಲ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, “5 ವರ್ಷ ಸರಕಾರ ಕೊಟ್ಟ ಸಿದ್ದಪುರುಷ ಇನ್ನೊಬ್ಬರ ಹೆಸರಿನಲ್ಲಿ ಬಂಗಲೆ ಪಡೆದು ಸಾಸಿವೆ ಕಾಳಷ್ಟೂ ಸಂಕೋಚವಿಲ್ಲದೆ ಅದೇ ಜಾಗದಲ್ಲಿ ಹೆಗ್ಗಣವಾಗಿ ಮೈತ್ರಿ ಸರಕಾರಕ್ಕೆ ಕನ್ನ ಕೊರೆದಿದ್ದನ್ನು ಕನ್ನಡಿಗರು ಮರೆತಿಲ್ಲ,” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

I.N.D.I.A. ಕೂಟದ ಸಭೆಯನ್ನು ವೆಸ್ಟ್ ಎಂಡ್ ಬದಲು, ತಮ್ಮ ಸುತ್ತಲಿನ ಕೆನೆಪದರ, ಒಳಪದರ, ತೆಳುಪದರದಂತೆ ತಲೆ ಎತ್ತಿರುವ ʼಪರ್ಸಂಟೇಜ್ ಪಟಾಲಂʼನ ಏಳುಸುತ್ತಿನ ಕೋಟೆಯ ಆವರಣದಲ್ಲಿಯೇ ನಡೆಸಬೇಕಿತ್ತು. ಆಧುನಿಕ ಭಾರತದ ಈಸ್ಟ್‌ ಇಂಡಿಯಾ ಕಂಪನಿ ಕಾಂಗ್ರೆಸ್ ಗೆ ಕರ್ನಾಟಕ ಸಮೃದ್ಧ ಹುಲ್ಲುಗಾವಲಾಗಿ ಪರಿಣಮಿಸಿದೆ. ಸಿದ್ಧ ಪುರುಷ ಉರ್ಫ್ ಶೋಕಿಪುರುಷನೇ ಈ ಹುಲ್ಲುಗಾವಲಿನ ಮೇಟಿ ಎಂದು ಟೀಕಿಸಿದ್ದಾರೆ.

“ವಿದ್ಯುತ್ ಅಭಾವ ಕೃತಕ ಸೃಷ್ಟಿ, ಅದು ಹೆಚ್ಚಿದಷ್ಟೂ ಕಾಂಗ್ರೆಸ್ಸಿಗರಿಗೆ ಕಲೆಕ್ಷನ್ ಜಾಸ್ತಿ. ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿಸಿ ಕಮಿಷನ್ ಹೊಡೆಯುವ ವಿಚಾರವಿದೆ. ಇಲ್ಲವಾದಲ್ಲಿ ವಿದ್ಯುತ್ ಕ್ಷಾಮದ ವಾಸ್ತವಿಕತೆಯ ಶ್ವೇತಪತ್ರ ಹೊರಡಿಸಲಿ” ಎಂದು ಕುಮಾರಸ್ವಾಮಿ ಸವಾಲೆಸೆದರು.

Bottom Add3
Bottom Ad 2

You cannot copy content of this page