Kannada NewsKarnataka News

ಸಿಡಿದೆದ್ದ ಲಕ್ಷ್ಮಣ ಸವದಿ ಹೇಳಿದ್ದೇನು? ಮಾ.27ರಂದು ಅಂತಿಮ ನಿರ್ಧಾರ ಎಂದ ಮಾಜಿ ಡಿಸಿಎಂ

ಪ್ರಗತಿವಾಹಿನಿ ಸುದ್ದಿ, ಅಥಣಿ : ಯಾವುದೇ ವ್ಯಕ್ತಿಗೆ ಸ್ವಾಭಿಮಾನಕ್ಕೆ ಧಕ್ಕೆ ಉಂಟಾದಲ್ಲಿ ಸುಮ್ಮನಿರಲು ಸಾಧ್ಯವಾಗಲಾರದು. ಸುಮ್ಮನಿದ್ದ ನನ್ನನ್ನು ಕೆರಳಿಸುವ ಕಾರ್ಯ ನಿರಂತರ ನಡೆದರೆ ಏನು ತಾನೇ ಮಾಡಲು ಸಾಧ್ಯ? ಅವರಿಗೆ ಉತ್ತರಿಸಬೇಕಲ್ಲ… ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಅವರು ಸ್ಥಳೀಯ ನೂರಾನಿ ಹಾಲ್ ನಲ್ಲಿ ಜರುಗಿದ ಮುಸ್ಲಿಂ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡುತ್ತಿದ್ದರು. ನನ್ನ ಮೇಲಿನ ಪ್ರೀತಿಯಿಂದ ಹಲವಾರು ಸಮಾಜದ ಮುಖಂಡರು ಸುಮ್ಮನೆ ಕುಳಿತು ಕೊಳ್ಳಲು ಬೀಡದೆ ನಿಮ್ಮ ಮುಂದೆ ಬಂದು ನಿಲ್ಲುವಂತೆ ಮಾಡಿದೆ. ಇಂದು ನೀವು ತೋರಿರುವ ಪ್ರೀತಿ, ವಿಶ್ವಾಸಕ್ಕೆ ತಲೆಬಾಗಿರುವೆ. ನನಗೆ ಬೆಂಬಲ ವ್ಯಕ್ತ ಪಡಿಸಿದ ತಮ್ಮೆಲ್ಲರಿಗೂ ಒಂದು ಭರವಸೆ ಕೊಡುವೆ, ಮುಂಬರುವ ದಿನಗಳಲ್ಲಿ ನಿಮ್ಮ ಕಣ್ಣೀರ ಒರೆಸುವ ಕೆಲಸ ಮಾಡುವೆ, ಹೊರತಾಗಿ ಕಣ್ಣೀರು ತರುವ ಕೆಲಸ ಎಂದೂ ಮಾಡಲಾರೆ ಎಂದರು.

ಇನ್ನು ಕೆಲವೆ ದಿನಗಳಲ್ಲಿ ಇನ್ನೂ ಹಲವಾರು ಸಮುದಾಯದ ಮುಖಂಡರುಗಳ ಜೊತೆಗೆ ಚರ್ಚಿಸಿ ಅವರೆಲ್ಲರೂ ನೀವು ಸ್ಪರ್ಧೆ ಮಾಡಬೇಕು ಎಂದರೆ ಮಾತ್ರ ಪಕ್ಷದ ಟಿಕೆಟ್ ಕೇಳುವೆ, ತಾಲೂಕಿನ ಎಲ್ಲ ಸಮುದಾಯದ, ಪಕ್ಷದ ಪ್ರಮುಖರ, ಕಾರ್ಯಕರ್ತರ ಅಭಿಪ್ರಾಯದಂತೆ ನಡೆದುಕೊಳ್ಳುವೆ. ಮಾ.27ರಂದು ನನ್ನ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದೂ ಅವರು ತಿಳಿಸಿದರು.

ಪಕ್ಷದ ವರಿಷ್ಠರು ನನ್ನ ಕೈಬಿಡುವದಿಲ್ಲ ಎಂಬ ವಿಶ್ವಾಸ, ನಂಬಿಕೆ ನನಗಿದೆ. ನಾನು ಎಂದೂ ಕೂಡಾ ಚಿಲ್ಲರೆ ರಾಜಕಾರಣ ಮಾಡಿಲ್ಲ. ರಾಜಕಾರಣಿಗಳಿಗೆ ಜನರ ಒಳತಿಗಾಗಿ ದೂರದೃಷ್ಟಿ ಇಟ್ಟುಕೊಂಡು ರಾಜಕಾರಣ ಮಾಡಬೇಕು, ಸ್ವ ಹಿತಕ್ಕಾಗಿ ರಾಜಕಾರಣ ಮಾಡಿದರೆ ಯಾವುದೇ ಪ್ರಯೋಜನವಾಗಲಾರದು. ನಾವು ಯಾವುದೇ ಒಂದು ಸಮುದಾಯದ ಓಲೈಕೆಯಿಂದ ರಾಜಕಾರಣ ಮಾಡಲಾಗದು. ಎಲ್ಲ ಸಮುದಾಯಗಳನ್ನು ಜೊತೆಗೂಡಿಸಿ ಕೊಂಡು ಹೋದಲ್ಲಿ ಮಾತ್ರ ಯಶಸ್ವಿ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಾಗಲಿದೆ ಎಂದರು.

Home add -Advt

ಈ ವೇಳೆ ಯುನಸ್ ಮುಲ್ಲಾ, ಅತೀಕ ಮೋಮಿನ, ಮೋಹಸಿನ ಮುಜಾಹಿಂದ, ಆಸಿಫ ತಾಂಬೋಳಿ, ಫರೀದ ಅವಟಿ, ರಸೂಲ ನದಾಫ, ನೂರಾಹಮ್ಮದ ಡೊಂಗರಗಾಂವ, ಸುಹಿಲ್ ಖಾಜಿ, ಸಲೀಮ್ ಮುಲ್ಲಾ, ಇರ್ಷದ ಮನಗೂಳಿ, ರಶೀದ ಸಾತಬಚ್ಚೆ ಸೇರಿದಂತೆ ಅನೇಕರಿದ್ದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ, ಟಿಕೆಟ್ ಕೇಳಬೇಕೋ ಬೇಡವೋ ಎನ್ನುವ ಕುರಿತು ಮಾ.27ರಂದು ನಿರ್ಧಾರ ಪ್ರಕಟಿಸುತ್ತೇನೆ. ಅಷ್ಟರೊಳಗೆ ಎಲ್ಲ ಸಮುದಾಯದವರೊಂದಿಗೆ ಚರ್ಚಿಸುತ್ತೇನೆ ಎಂದರು.

ಪಕ್ಷದ ಟಿಕೆಟ್ ಸಿಗದಿದ್ದರೆ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೀರಾ ಎನ್ನುವ ಪ್ರಶ್ನೆಗೆ, ಅಂತಹ ಪ್ರಶ್ನೆ ಈಗ ನನ್ನ ಮುಂದಿಲ್ಲ ಎಂದರು.

Related Articles

Back to top button