Belagavi NewsBelgaum NewsKannada NewsKarnataka NewsPolitics

*ಸ್ಟಿಂಗ್ ಆಪರೇಷನ್ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು.?*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿರುವವರಿಗೆ ಸೂಕ್ತ ಸಂದರ್ಭದಲ್ಲಿ ಕಾನೂನಿನ ಮೂಲಕ ಉತ್ತರ ನೀಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತಿಹಾಸದ ಅರಿವು ಹಾಗೂ ಜ್ಞಾನದ ಕೊರತೆ ಇರುವವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಎಷ್ಟು ದಿನ ಅಪಪ್ರಚಾರ ಮಾಡುತ್ತಾರೋ ಮಾಡಲಿ. ಕಳೆದ 30–40 ವರ್ಷಗಳಿಂದ ಹೋರಾಟದ ಹಾದಿಯಲ್ಲಿ ಬಂದಿರುವ ನಾವು, ಅಂತಹವರಿಗೆ ಸೂಕ್ತ ಸಂದರ್ಭದಲ್ಲಿ ಕಾನೂನಿನ ಮೂಲಕ ಉತ್ತರ ನೀಡುತ್ತೇವೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಬಳ್ಳಾರಿ ನಾಲಾ ಸಮಸ್ಯೆ ಅಭಿವೃದ್ಧಿಗೆ ಹಿನ್ನಡೆ

ಅಭಿವೃದ್ಧಿ ಹಾಗೂ ರೈತರ ಆರ್ಥಿಕ ಪ್ರಗತಿಗೆ ಬಳ್ಳಾರಿ ನಾಲಾ ಸಮಸ್ಯೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿರುವುದು ನಿಜ. ನಾಲಾ ಕಿರಿದಾಗಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಈ ಕುರಿತು ಸರ್ಕಾರ ವರದಿ ಕೇಳಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ನವೆಂಬರ್ ಮೊದಲ ವಾರದಲ್ಲಿ ಉದ್ಘಾಟನೆ, ಕಾಮಗಾರಿಗೆ ಚಾಲನೆ

ಜಿಲ್ಲಾಧಿಕಾರಿಗಳ ಕಚೇರಿಯ ಉದ್ಘಾಟನೆ ಹಾಗೂ ಬೆಳಗಾವಿ ಮೇಲ್ಸೇತುವೆ ಕಾಮಗಾರಿಗೆ ಇದೇ ನವೆಂಬರ್ ಮೊದಲ ವಾರದಲ್ಲಿ ಚಾಲನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ರಾಜ್ಯೋತ್ಸವಕ್ಕೆ ಹೆಚ್ಚಿನ ಅನುದಾನಕ್ಕೆ ಸಿಎಂಗೆ ಮನವಿ

ಬೆಳಗಾವಿ ರಾಜ್ಯೋತ್ಸವಕ್ಕೆ ವಿಶೇಷ ಅನುದಾನ ನೀಡಬೇಕೆಂಬ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು. ಹೆಚ್ಚಿನ ಅನುದಾನ ಬಿಡುಗಡೆಯಾದರೆ ರಾಜ್ಯೋತ್ಸವ ಆಚರಣೆಗೆ ಅನುಕೂಲವಾಗಲಿದೆ ಎಂದರು.

ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಕನ್ನಡಾಭಿಮಾನಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸುವುದು ಮುಖ್ಯವಾಗಿದೆ. ಇದಕ್ಕಾಗಿ ಸೂಕ್ತ ನೇತೃತ್ವ ಹಾಗೂ ಉತ್ತಮ ನಿರ್ವಹಣೆ ಅಗತ್ಯವಿದೆ. ವ್ಯವಸ್ಥಿತವಾಗಿ ಯೋಜನೆ ರೂಪಿಸಿ ನಿರ್ವಹಣೆ ಮಾಡಿದರೆ ರಾಜ್ಯೋತ್ಸವಕ್ಕೆ ಆಗಮಿಸುವ ಎಲ್ಲ ಕನ್ನಡಾಭಿಮಾನಿಗಳಿಗೂ ಊಟದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಸಿಎಂ ಎಚ್ಚರಿಕೆ ನೀಡಿದ್ದಾರೆ, ಜಾಗರೂಕರಾಗಿರಬೇಕು

ಉತ್ತರ ಭಾರತದಿಂದ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬರು ತಮ್ಮನ್ನು ಬಲೆಗೆ ಬೀಳಿಸಲು ಪ್ರಯತ್ನಿಸಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ತಮ್ಮನ್ನು ಸಿಲುಕಿಸಲು ಪ್ರಯತ್ನಗಳು ನಡೆದಿದ್ದು, ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಸತೀಶ ಜಾರಕಿಹೊಳಿ ಹೇಳಿದರು.

ಮುಖ್ಯಮಂತ್ರಿಗಳೇ ಈ ಕುರಿತು ಸ್ಪಷ್ಟವಾಗಿ ಎಚ್ಚರಿಕೆ ನೀಡಿರುವುದರಿಂದ ಹೆಚ್ಚುವರಿಯಾಗಿ ಏನನ್ನೂ ಹೇಳುವ ಅಗತ್ಯವಿಲ್ಲ. ನಮ್ಮ ಬಳಿ ಅಂತಹ ಯಾವುದೇ ವ್ಯಕ್ತಿಗಳು ಬಂದಿಲ್ಲ. ಆದರೂ ಇಂತಹ ವಿಚಾರಗಳಲ್ಲಿ ಜಾಗರೂಕರಾಗಿರಬೇಕು ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರನ್ನು ರಹಸ್ಯವಾಗಿ ಭೇಟಿಯಾಗಿಲ್ಲ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಹಸ್ಯವಾಗಿ ಭೇಟಿಯಾಗಿರುವುದಕ್ಕೆ ಯಾವುದೇ ಆಧಾರವಿಲ್ಲ. ಸಚಿವ ಜಮೀರ್ ಅಹ್ಮದ್ ಅವರು ತಮ್ಮ ವೈಯಕ್ತಿಕ ಕೆಲಸಗಳ ನಿಮಿತ್ತ ನಾಲ್ಕೈದು ಬಾರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ನಾವು ಕೆಲಸದ ವಿಚಾರವಾಗಿಯೇ ಭೇಟಿಯಾಗುತ್ತಿದ್ದೆವು. ಅವರೊಂದಿಗೆ ಯಾವುದೇ ರಹಸ್ಯ ಚರ್ಚೆ ನಡೆಸಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಡಿಸೆಂಬರ್‌ನಲ್ಲಿ ಜಿಪಂ, ತಾಪಂ ಚುನಾವಣೆ

ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗುತ್ತಿಗೆದಾರರ ಬಿಲ್‌ ಪಾವತಿಗೆ ಅರ್ಹತೆಯೇ ಮಾನದಂಡ

ಹಿಂದಿನ ಸರ್ಕಾರದಲ್ಲಿಯೂ ಎರಡು ವರ್ಷಗಳ ಬಳಿಕ ಗುತ್ತಿಗೆದಾರರ ಬಿಲ್‌ಗಳನ್ನು ಪಾವತಿಸಲಾಗಿತ್ತು. ಪ್ರಸ್ತುತ ಸರ್ಕಾರದಲ್ಲಿಯೂ ಇದೇ ರೀತಿಯ ಪ್ರಕ್ರಿಯೆ ಮುಂದುವರಿದಿದೆ. ಆದರೆ ಆಡಳಿತದಲ್ಲಿ ಸುಧಾರಣೆಗಳಾಗಿದ್ದು, ಅರ್ಹತೆ ಹಾಗೂ ನಿಯಮಗಳ ಆಧಾರದ ಮೇಲೆ ಬಿಲ್‌ಗಳನ್ನು ಪಾವತಿಸಲಾಗುವುದು. ಗುತ್ತಿಗೆದಾರರ ನಡುವೆ ತಾರತಮ್ಯ ಮಾಡಲಾಗುವುದಿಲ್ಲ. ಗುತ್ತಿಗೆದಾರರ ಬಗ್ಗೆ ಸರ್ಕಾರಕ್ಕೆ ಗೌರವವಿದ್ದು, ಅವರ ವಿಶ್ವಾಸವನ್ನು ಉಳಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ದೆಹಲಿಯಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಿ

ಪ್ರತಿಭಟನೆ ನಡೆಸುವುದು ಹಕ್ಕು ಎಂದು ಸುಪ್ರೀಂ ಕೋರ್ಟ್ ಹೇಳಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸಿಜೆಪಿ ಪಕ್ಷದವರಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು. ಅವರು ಸ್ವತಂತ್ರವಾಗಿ ಹೋರಾಟ ನಡೆಸುತ್ತಿದ್ದು, ಅದಕ್ಕೆ ಅವಕಾಶ ಕಲ್ಪಿಸಬೇಕು. ಈ ಹೋರಾಟ ದೊಡ್ಡ ಆಂದೋಲನವಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಕಳೆದ ಬಾರಿ ಹೋರಾಟ ನಡೆಸಿದಾಗಲೂ ಚರ್ಚೆ ನಡೆದಿತ್ತು. ಈ ಬಾರಿಯೂ ಚರ್ಚೆ ನಡೆಯಲಿ. ಹೋರಾಟವನ್ನು ಯಶಸ್ವಿಗೊಳಿಸುವ ಗುರಿ ಹೊಂದಲಾಗಿದೆ. ಈ ಹೋರಾಟದಲ್ಲಿ ಭಾಗವಹಿಸುತ್ತಿರುವವರು ಬಿಜೆಪಿ ಬೆಂಬಲಿಗರಾಗಿದ್ದು, ಅವರಲ್ಲಿ ಶೇ.70ರಷ್ಟು ಮಂದಿ ಬಿಜೆಪಿಗೆ ಮತ ನೀಡಿದವರಾಗಿದ್ದಾರೆ. ಅಂತಹವರೇ ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತಿರುವುದರ ಬಗ್ಗೆ ಕೇಂದ್ರದ ಬಿಜೆಪಿ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ, ಆ ಭರವಸೆ ಈಡೇರದ ಹಿನ್ನೆಲೆಯಲ್ಲಿ ಜನರು ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button