ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಿ.ಟಿ ರವಿ ಅವರ ಭದ್ರತೆ ದೃಷ್ಟಿಯಿಂದ ಅವರನ್ನು ಬೇರೆ ಬೇರೆ ಕಡೆ ಕರೆದುಕೊಂಡು ಹೋಗಬೇಕಾಯಿತು ಎಂದು ಸಿ.ಟಿ ರವಿ ಅವರು ನನ್ನ ಎನ್ಕೌಂಟರ್ ಮಾಡುತ್ತಿದ್ದರು ಎಂದು ನೀಡಿದ್ದ ಹೇಳಿಕೆ ವಿಚಾರವಾಗಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿ.ಟಿ ರವಿಯವರ ಮೇಲೆ ಕೇಸ್ ಆಗಿ ಅವರನ್ನು ಬಂಧಿಸಿದ ಬಳಿಕ ಅವರನ್ನು ಬಾಗೇವಾಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೊಗುತ್ತಿದ್ದೆವು. ಆದರೆ ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ಅಲ್ಲಿ ಕರೆದುಕೊಂಡು ಹೊದರೆ ಸಮಸ್ಯೆ ಆಗಬಹುದು ಎಂದು ಮಾಹಿತಿ ಬಂದಾಗ ನಾವು ಖಾನಾಪೂರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದೆವು. ಖಾನಾಪೂರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದಾಗ ಅಲ್ಲಿಯೂ ಬಹಳಷ್ಟು ಜನ ಸೇರಿದರು. ಅವರನ್ನು ಕರೆದುಕೊಂಡು ಹೋದಾಗ ಕೆಲವು ಘಟನೆಗಳು ಆದವು. ಅಷ್ಟರಲ್ಲಿ ಬೆಳಗಾವಿ ನಗರದಿಂದ ಹಾಗೂ ಅಕ್ಕಪಕ್ಕದ ಹಳ್ಳಿಗಳಿಂದ ಇನ್ನು ಜನ ಬರುತ್ತಿದ್ದಾರೆ ಎಂಬ ಮಾಹಿತಿ ಬಂತು. ಹಾಗಾಗಿ ಸಿ.ಟಿ ರವಿಯವರ ಭದ್ರತೆ ಸಲುವಾಗಿ ನಾವು ಬೇರೆ ಬೇರೆ ಕಡೆ ಕರೆದುಕೊಂಡು ಹೋಗಬೇಕಾಯಿತು ಎಂದು ಸ್ಪಷ್ಟಪಡಿಸಿದರು.
ಸಿ.ಟಿ ರವಿ ಅವರ ಮೇಲೆ ಹಲ್ಲೆಗೆ ಯತ್ನಿಸಿದವರ ವಿರದ್ಧ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ದೂರಿನಲ್ಲಿ ಯಾರ ಹೆಸರೂ ಇಲ್ಲ. ಹಲ್ಲೆ ಮಾಡಲು ಯತ್ನಿಸಿದವರ ವಿಡಿಯೋ ನೋಡುತ್ತೇವೆ. ವಿಡಿಯೋದಲ್ಲಿ ಯಾರು ಕಾಣುತ್ತಾರೋ ಅವರ ಹೆಸರು ದೂರಿನಲ್ಲಿ ಸೇರಿಸಿಕೊಳ್ಳುತ್ತೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ