Kannada NewsKarnataka NewsLatestPolitics

*ಪರಮೇಶ್ವರ್​​ಗೆ ಆಗಿದ್ದೇನು? ಈಗ ಹೇಗಿದ್ದಾರೆ? ಮಾಹಿತಿ ನೀಡಿದ ವೈದ್ಯರು*

ಪ್ರಗತಿವಾಹಿನಿ ಸುದ್ದಿ: ಹಠಾತ್ ಹೃದಯ ಬಡಿತ ಹೆಚ್ಚಾದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ್ ಬೆಂಗಳೂರಿನ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪರಮೇಶ್ವರ್ ಆರೋಗ್ಯ ಸ್ಥಿರವಾಗಿದ್ದು, ಇಸಿಜಿ ವರದಿಗಳು ಸಾಮಾನ್ಯವಾಗಿವೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಪರಮೇಶ್ವರ್ ಈಗ ಊಟ ಮಾಡುತ್ತಿದ್ದು, ವೈದ್ಯಕೀಯ ಪರಿಶೀಲನೆಯ ಬಳಿಕ ಎರಡು ಗಂಟೆಗಳೊಳಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದ್ದಾರೆ.

ಡಾ. ವಿ.ಕೆ. ಶ್ರೀನಿವಾಸ್ ಮಾಧ್ಯಮಗಳೊಂದಿಗೆ ಮಾತನಾಡಿ, ಪರಮೇಶ್ವರ್ ಆಸ್ಪತ್ರೆಗೆ ಬಂದಾಗ ಹೃದಯ ಬಡಿತ ನಿಮಿಷಕ್ಕೆ 180ಕ್ಕಿಂತ ಹೆಚ್ಚಿತ್ತು ಎಂದು ತಿಳಿಸಿದರು. ತಕ್ಷಣ ಪರಿಶೀಲನೆ ನಡೆಸಿ ಚಿಕಿತ್ಸೆ ನೀಡಲಾಗಿದ್ದು, ಈಗ ಹೃದಯ ಬಡಿತ ಸಾಮಾನ್ಯ ಸ್ಥಿತಿಗೆ ಬಂದಿದೆ. ಸದ್ಯ ಆರೋಗ್ಯದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಹೃದಯದ ವಿದ್ಯುತ್ ಸಂಕೇತಗಳಲ್ಲಿನ ವ್ಯತ್ಯಾಸದಿಂದ ಕೆಲವೊಮ್ಮೆ ಹೃದಯ ಬಡಿತ ಹಠಾತ್ ಹೆಚ್ಚಾಗಬಹುದು ಎಂದು ವೈದ್ಯರು ವಿವರಿಸಿದ್ದಾರೆ. ಇಂತಹ ಸಂದರ್ಭಗಳಲ್ಲಿ ಕೆಲವರಿಗೆ ಅದರ ಅನುಭವ ಸ್ಪಷ್ಟವಾಗಿ ತಿಳಿಯದಿರಬಹುದು; ಇನ್ನು ಕೆಲವರಿಗೆ ಎದೆ ಬಡಿತ ಹೆಚ್ಚಾಗಿರುವುದು ಗಮನಕ್ಕೆ ಬರುತ್ತದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಬಿಜೆಪಿ ಸಂಸದ ಗೋವಿಂದ ಕಾರಜೋಳ ಆಸ್ಪತ್ರೆಗೆ ಭೇಟಿ ನೀಡಿ ಪರಮೇಶ್ವರ್ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಾರಜೋಳ, ಪರಮೇಶ್ವರ್ ಆರೋಗ್ಯವಾಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ವೈದ್ಯರು ಸಂಜೆ ಮನೆಗೆ ತೆರಳಲು ಅವಕಾಶ ನೀಡುವ ಸಾಧ್ಯತೆಯಿದೆ ಎಂದ ಅವರು, ಆರೋಗ್ಯದ ಬಗ್ಗೆ ಯಾರೂ ಆತಂಕಪಡಬಾರದು ಎಂದು ಮನವಿ ಮಾಡಿದರು.

ಇಂದು ಬೆಂಗಳೂರಿನ ಬ್ಯಾಡ್ಮಿಂಟನ್ ಅಸೋಸಿಯೇಷನ್ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಯೋಜಿಸಿದ್ದ ‘ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್–2026’ ಕ್ರೀಡಾಕೂಟಕ್ಕೆ ಡಾ. ಜಿ. ಪರಮೇಶ್ವರ್ ಚಾಲನೆ ನೀಡಿದ್ದರು. ಕಾರ್ಯಕ್ರಮದ ವೇಳೆ ಸುಸ್ತಾದಂತೆ ಕಂಡುಬಂದ ಹಿನ್ನೆಲೆಯಲ್ಲಿ ಆಪ್ತ ಸಹಾಯಕರು ಮತ್ತು ಭದ್ರತಾ ಸಿಬ್ಬಂದಿ ತಕ್ಷಣವೇ ಅವರನ್ನು ವೈದೇಹಿ ಆಸ್ಪತ್ರೆಗೆ ಕರೆದೊಯ್ದಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button