ಕನ್ನಡ ಸಾಹಿತ್ಯಕ್ಕೆ ಅಂತರ್ಜಾಲದ ಪ್ರಭಾವವೇನು? 

✍️ ಪುಷ್ಪ ಪ್ರಸಾದ್, ಉಡುಪಿ
ನಾವೆಲ್ಲ ಕನ್ನಡ ತಾಯಿ ಭುವನೇಶ್ವರಿ ದೇವಿಯ ಮಕ್ಕಳು   ಎಂದು ಬೀಗುವುದಕ್ಕೆ ಒಂದೇ ಎರಡೇ ಹಲವಾರು ಕಾರಣಗಳಿವೆ. ಸುಮಾರು ೨೦೦೦ ಕ್ಕಿಂತಲೂ ಹೆಚ್ಚಿನ ವರ್ಷ ಇತಿಹಾಸ ಹೊಂದಿದ ನಮ್ಮ ಕನ್ನಡ ಭಾಷೆ ತುಂಬಾ ಪ್ರಾಚೀನವಾದುದು ಎನ್ನುವುದಕ್ಕೆ ೨ ನೇ ಶತಮಾನದಲ್ಲಿ ರಚಿಸಿದ ಗ್ರೀಕ್ ಗ್ರಂಥವೊಂದರಲ್ಲಿ ಉಲ್ಲೇಖವಿದೆ. ಪ್ರಪಂಚದ ಸಾವಿರಾರು ಭಾಷೆಗಳ ಪಟ್ಟಿಯಲ್ಲಿ ನಮ್ಮ ಭಾಷೆ ಏಳನೇ ಸುಪ್ರಸಿದ್ಧ ಭಾಷೆ ಎಂದು ದಾಖಲಾಗಿದೆ. ಇದಕ್ಕೆ ಕಿರೀಟವಿಟ್ಟಂತೆ ಶಾಸ್ತ್ರೀಯ ಭಾಷೆಯ ಗರಿ ಬೇರೆ.
ಕನ್ನಡಿಗರು ಪ್ರತಿಭಾವಂತರು, ಅದರಲ್ಲೂ ಸಾಹಿತ್ಯ ರಚನೆಯಲ್ಲಿ ತುಂಬಾ ಮೇಧಾವಿಗಳು,  ಅದಕ್ಕೆ ಸಾಕ್ಷಿ ನಮ್ಮ ಗಟ್ಟಿ ಸಾಹಿತ್ಯಕ್ಕೆ ದೊರೆತ ಜ್ಞಾನ ಪೀಠ ಪ್ರಶಸ್ತಿಗಳು. ತಂತ್ರಜ್ಞಾನದ ಅಭಿವೃದ್ಧಿ ಸಾಮಾಜಿಕ ಜಾಲ ತಾಣಗಳಲ್ಲಿ ಸಂಶೋಧನಾ ಕಾರ್ಯಕ್ಕೂ ಮುನ್ನುಡಿ ಬರೆದಂತಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಸಾಮಾನ್ಯವಾಗಿ ಐದು ತೆರನಾದ ಸಾಹಿತ್ಯಕ್ಕೆ ಅರಸುವವರನ್ನು ಕಾಣುತ್ತೇವೆ. ಮಾರುಕಟ್ಟೆ ಮತ್ತು ಜಾಹೀರಾತು, ಜ್ಞಾನ ನಿರ್ವಹಣೆ, ಸಂಬಂಧಗಳ ನಿರ್ವಹಣೆ, ಸಾಮಾಜಿಕ ಬಂಡವಾಳ, ಇಲೆಕ್ಟ್ರಾನಿಕ್ ಮತ್ತು ಕಾಮರ್ಸ್. ಸಾಮಾಜಿಕ ಜಾಲತಾಣಗಳು ಅದೆಷ್ಟು ಪ್ರಭಾವಕಾರಿಯಾಗಿವೆ ಎಂದರೆ ಅವು ಪರ್ಯಾಯ ಸಂವಹನ ಮಾಧ್ಯಮಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಸಾಂಪ್ರದಾಯಿಕ ಪದ್ದತಿಗಳನ್ನು ಹಿಂದಿಕ್ಕಿ ನಾಗಾಲೋಟದ ಗತಿಯಲ್ಲಿ ಜನರನ್ನು ತಲುಪುತ್ತಿವೆ.
’ *ಸಾಹಿತ್ಯದ ಗಂಧವಿಲ್ಲದ ಜೀವನ ನರಕವಿದ್ದಂತೆ* ’ ಎಂಬ ಆಂಗ್ಲ ಕವಿಯ ನುಡಿಯು ಜೀವನದಲ್ಲಿ ಸಾಹಿತ್ಯದ ಮಹತ್ತರ ಪಾತ್ರವನ್ನು ಸಾರಿ ಹೇಳುತ್ತದೆ. ಬದುಕೇ ಬರಹದ ಬುತ್ತಿ ಎನ್ನುವ ಮಾತಿನಂತೆ ಬಾಳಿನಲ್ಲಿ ಕಂಡುಂಡ ಎಲ್ಲ ಅನುಭವಗಳಿಗೂ ಅಕ್ಷರ ರೂಪ ಕೊಟ್ಟು ಅದಕ್ಕೊಪ್ಪುವ ಚಿತ್ರಗಳನ್ನು ಬಳಸಿ ವಿವಿಧ ಜರ್ನಲ್‌ಗಳಿಗೆ ಉಪಯೋಗಿಸಿದ ಅತ್ಯುತ್ತಮ ಚಿತ್ರಕಲೆ, ಲೇಖನ ಮಾಲೆಗಳು, ಕಥೆ, ಕವನಗಳು, ಇತ್ಯಾದಿಗಳು  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಫೇಸ್ಬುಕ್  ವಾಲ್‌ಗಳ ಮೇಲೆ ಕಾಣಿಸುವ ಅನೇಕ ಬರಹಗಳು, ಹೈಕುಗಳು, ಕವಿತೆಗಳು, ಹನಿಗವನಗಳು, ಕಾರ್ಟೂನ್‌ಗಳು ನಗೆ ಚಟಾಕೆಗಳು ಹಾಸ್ಯ ಪ್ರಬಂಧಗಳು, ಆಧುನಿಕ ಬದುಕಿನ ಒತ್ತಡ ಮತ್ತು ಜಂಜಾಟದ ಅಕ್ಷರ ಚಿತ್ರಗಳನ್ನು ಪ್ರದರ್ಶಿಸುತ್ತವೆ. ಇಂಥ ಸಾಹಿತ್ಯ ಓದುಗರನ್ನು ಕೈ ಬೀಸಿ ಕರೆಯುತ್ತಿದೆ. ಪ್ರಜ್ಞಾವಂತ  ಓದುಗರು ವಾಚಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆ, ಕೆಲವೊಮ್ಮೆ ಉತ್ತರ ರೂಪದಲ್ಲಿ ಬರಹಗಳನ್ನು ಬರೆದು ಪೋಸ್ಟ್ ಮಾಡುತ್ತಾರೆ.
’ಲೋಕೋ ಭಿನ್ನ ರುಚಿಃ’ ಎಂಬಂತೆ ವಿಭಿನ್ನ ಆಶಯಗಳನ್ನಿಟ್ಟುಕೊಂಡು ಹುಟ್ಟುವ ವಾಟ್ಸಪ್ ಗುಂಪುಗಳಲ್ಲಿ ಸಾಹಿತ್ಯವನ್ನೇ ಪ್ರಧಾನವಾಗಿಟ್ಟುಕೊಂಡು ಗುಂಪುಗಳು ಬಹು ಸಂಖ್ಯೆಯಲ್ಲಿ ಸಿಗುತ್ತಿವೆ. ಇಂಥ ಗುಂಪಿಗಳಲ್ಲಿ ತಾವು ಬರೆದ ಸಾಹಿತ್ಯ ಪ್ರಕಾರಗಳನ್ನು ಹಂಚಿಕೊಳ್ಳುವುದಲ್ಲದೇ ಇತರರ ಬರಹಗಳನ್ನು ಓದಿ ಮೆಚ್ಚುವ ವಿಮರ್ಶಿಸುವ ವಿವೇಕವನ್ನು ಮೆರೆಯುತ್ತಿದ್ದಾರೆ. ಹೀಗೆ ಬರಹಗಾರರಿಗೆ ಬರಹಗಾರರೇ ಸ್ಪೂರ್ತಿಯಾಗುತ್ತಿದ್ದಾರೆ. ಓದುಗರಿಗೂ ಪ್ರೇರಕ ಶಕ್ತಿಯಾಗುತ್ತಿದ್ದಾರೆ.
ಅಂತರ್ಜಾಲ ಸಾಹಿತಿಗಳಾಗಿ ಬ್ಲಾಗರ್‌ಗಳಾಗಿ ಗುರುತಿಸಿಕೊಂಡು ಓದುಗರ ಮನದಲ್ಲಿ ಮನೆ ಮಾಡಿದ ಅನೇಕ ಮಹನೀಯರು ಕನ್ನಡ ಸಾಹಿತ್ಯದ ಘಮವನ್ನು ಪ್ರಪಂಚದಾದ್ಯಂತ ಹರಡುತ್ತಿದ್ದಾರೆ. ಕನ್ನಡ ಸಾಹಿತ್ಯದ ಓದನ್ನೇ ಉದ್ದೇಶವನ್ನಾಗಿಸಿಕೊಂಡು ಹುಟ್ಟಿದ ಗುಂಪುಗಳು ಸಾಹಿತ್ಯದ ಓದಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಆನ್ ಲೈನ್ ಪತ್ರಿಕೆಗಳಂತೂ ಪರಿಚಯವೇ ಇಲ್ಲದ ಸಾಹಿತಿಗಳನ್ನು ಅವರ ಕೃತಿಗಳ ಮೂಲಕ ವಿಶ್ವದಾದ್ಯಂತ ಹರಡಿರುವ ಕನ್ನಡಿಗರಿಗೆ ಗುರುತಿಸುವ ಕೈಂಕರ್ಯದಲ್ಲಿ ತೊಡಗಿಕೊಂಡಿವೆ. ಪ್ರಕೃತಿ ಶಿಕ್ಷಣ ನಾಡು ನುಡಿ ಸಾಮಾಜಿಕ ಕಳಕಳಿಯ ಕನ್ನಡ ಸಾಹಿತ್ಯವನ್ನು ಆಳವಾಗಿ ಅರಿಯಲು ನೆರವಾಗುತ್ತಿದೆ.ನಾಡಿನ ನಾನಾ ಭಾಗಗಳಲ್ಲಿನ ವೈವಿಧ್ಯಮಯ ಜೀವನ ತಿಳಿದುಕೊಳ್ಳಲು ಅವಕಾಶ ಒದಗಿಸುತ್ತಿವೆ.  ವಿಶ್ವ ಮಟ್ಟದ ಸಾಹಿತ್ಯದಲ್ಲಿ ತಾನೇನೂ ಕಡಿಮೆ ಇಲ್ಲವೆನ್ನುವಂತೆ ಮುನ್ನುಗ್ಗಲು ಸಹಕಾರಿಯಾಗಿವೆ. ಕನ್ನಡ ಸಾಹಿತ್ಯದ ಮನಸ್ಸುಗಳನ್ನು ಚದುರದಂತೆ ಒಗ್ಗೂಡಿಸುವ ಕಾರ್ಯದಲ್ಲಿ ನಿರತವಾಗಿವೆ. ನಾವು ಅಂದುಕೊಂಡಂತೆ ಸಾಹಿತ್ಯ ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲಿ ಮರೆಯಾಗುತ್ತಿಲ್ಲ. ಬದಲಾಗಿ, ಬದಲಾವಣೆಯ ಜೊತೆಗೆ ಬದಲಾದ ರೂಪದಲ್ಲಿ ತನ್ನ ಅಸ್ತಿತ್ವ ಕಾಯ್ದುಕೊಳ್ಳುತ್ತ  ದಾಪುಗಾಲಿಡುತ್ತಿದೆ ಎಂದರೂ ತಪ್ಪಾಗಲಿಕ್ಕಿಲ್ಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button