

ಎಂ.ಕೆ.ಹೆಗಡೆ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು 2 ಬಾರಿ ಪ್ರತಿನಿಧಿಸಿದ್ದ ಬಿಜೆಪಿಯ ಹಾಲಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತೀವ್ರವಾಗಿ ಕೂಗಾಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳಿಗೆ ದಾದಾಗಿರಿ ಮಾಡಲು ಬಂದಿದ್ದೀರಾ ಎಂದೆಲ್ಲ ಪ್ರಶ್ನಿಸಿದ್ದಾರೆ. ನಾವು ನಿಮ್ಮನ್ನು ಕರೆಸಿದ್ದೇವೆ, ನಾವು ಹೇಳುವುದನ್ನು ಕೇಳಿಕೊಂಡು ಹೋಗಿ, ನಾನು ಎಲ್ಲ ಕಡೆ ಸುತ್ತಾಡುತ್ತೇನೆ. ಬೇರೆ ಕಡೆ ಪತ್ರಕರ್ತರೆಲ್ಲ ನಾವು ಹೇಳಿದಷ್ಟು ಕೇಳಿಕೊಂಡಿರುತ್ತಾರೆ, ಬೆಳಗಾವಿ ಪತ್ರಕರ್ತರು ಮಾತ್ರ ಹೀಗೆ ಎಂದೆಲ್ಲ ಅರಚಾಡಿದ್ದಾರೆೆ.
ಅಕ್ಕ ಪಕ್ಕದಲ್ಲಿದ್ದ ಶಾಸಕ ಅನಿಲ ಬೆನಕೆ, ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಜಿರಲಿ, ಸಂಸದೆ ಮಂಗಲಾ ಅಂಗಡಿ ಎಲ್ಲ ಸುಮ್ಮನಿರುವಂತೆ ಪದೇ ಪದೆ ವಿನಂತಿಸಿದರೂ ಸಂಜಯ ಪಾಟೀಲ ಮತ್ತಷ್ಟು ವ್ಯಘ್ರರಾಗುತ್ತಲೇ ಹೊದರು. ಮಾಧ್ಯಮ ಪ್ರತಿನಿಧಿಗಳು ಸಾಕಷ್ಟು ಸಂಯಮದಿಂದಲೇ ವರ್ತಿಸಿದ್ದಾರೆ. ಸಂಜಯ ಪಾಟೀಲ ಆಡಿದ ಮಾತುಗಳಿಗೆ ಸೂಕ್ತ ರೀತಿಯಲ್ಲಿ ಉತ್ತರಿಸುತ್ತ ಹೋದರೂ ಅವರ ಕೋಪಾವೇಶ ಮಾತ್ರ ತಣ್ಣಗಾಗಲಿಲ್ಲ. ಕೊನೆಯಲ್ಲಿ ವ್ಯಂಗ್ಯ ರೀತಿಯಲ್ಲಿ ನೀವೇ ದೇವರು, ಎನ್ನುತ್ತ ಕೈ ಮುಗಿದು ಕ್ಷಮೆ ಕೇಳುತ್ತೇನೆ ಎಂದು ಮುಗಿಸಿದರು.
ಇಡೀ ಘಟನೆಯನ್ನು, ಸಂಜಯ ಪಾಟೀಲ ಅವರು ವರ್ತಿಸಿರುವ ರೀತಿಯನ್ನು, ಅವರ ಬಾಡಿ ಲ್ಯಾಂಗ್ವೇಜ್ ನ್ನು ಗಮನಿಸಿದರೆ ಅವರು ತೀವ್ರ ವಿಚಲಿತರಾಗಿದ್ದಾರೆನ್ನುವುದು ಸ್ಪಷ್ಟವಾಗುತ್ತದೆ. ಅವರ ಜೊತೆಯಲ್ಲಿದ್ದ ಎಂ.ಬಿ.ಜಿರಲಿ, ಮಂಗಲಾ ಅಂಗಡಿ, ಅನಿಲ ಬೆನಕೆ ಮೊದಲಾದವರು ಸಹ ಈ ಘಟನೆಯಿಂದ ತೀವ್ರ ನೊಂದುಕೊಂಡರು. ಏಕಾದರೂ ಪತ್ರಿಕಾಗೋಷ್ಠಿ ಕರೆದಿದ್ದೇವೋ ಎನ್ನುವ ರೀತಿಯಲ್ಲಿತ್ತು ಅವರ ಮುಖಚರ್ಯೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಂಗೋಲಿ ಸ್ಪರ್ಧೆ ನೆಪದಲ್ಲಿ ವಿವಿಧ ಉಡುಗೊರೆಗಳನ್ನು ವಿತರಿಸುತ್ತಿದ್ದಾರೆ. ಅದನ್ನು ಮಾಧ್ಯಮಗಳು ವಿಶೇಷ ವರದಿ ರೂಪದಲ್ಲಿ ಪ್ರಕಟಿಸುತ್ತಿಲ್ಲ ಎನ್ನುವುದು ಸಂಜಯ ಪಾಟೀಲ ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ನೀವೂ ಕೆಲವು ದಿನಗಳ ಹಿಂದೆ ನಿಮ್ಮ ಜನ್ಮದಿನದ ನೆಪದಲ್ಲಿ ಉಡುಗೊರೆಗಳನ್ನು ಹಂಚಿದ್ದೀರಲ್ಲವೇ ಎನ್ನುವ ಪ್ರಶ್ನೆ ಅವರನ್ನು ಇನ್ನಷ್ಟು ಕೆರಳಿಸಿತು. ಆ ಸಂದರ್ಭದಲ್ಲಿ ದಾದಾಗಿರಿ, ಗೂಂಡಾಗಿರಿ ಶಬ್ಧಗಳನ್ನು ಬಳಸಿ ಕಿರುಚಾಡಿದರು.
ಇಷ್ಟೊಂದು ವಿಚಲಿತರಾಗಲೂ ಏನು ಕಾರಣ?
ಸಂಜಯ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಈ ರೀತಿ ವರ್ತಿಸಲು ಕಾರಣವೇನು ಎನ್ನುವ ಕುರಿತು ಬಿಜೆಪಿಯ ಕೆಲವು ನಾಯಕರು ಪ್ರಗತಿವಾಹಿನಿ ಜೊತೆಗೆ ಮಾತನಾಡಿದರು. ಬೆಳಗಾವಿಯ ಪತ್ರಕರ್ತರ ಸಂಯಮವನ್ನೂ ಅವರು ಪ್ರಶಂಸಿಸಿದರು. ಬೇರೆಡೆಯಾಗಿದ್ದರೆ ಪತ್ರಕರ್ತರು ಪತ್ರಿಕಾಗೋಷ್ಠಿ ಬಹಿಷ್ಕರಿಸಿ ಹೊರಟುಹೋಗುತ್ತಿದ್ದರು ಎಂದೂ ಹೇಳಿದರು.
ಸಂಜಯ ಪಾಟೀಲ 2 ಬಾರಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಆದರೆ 2018ರ ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ನ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಸೋಲನುಭವಿಸಿದರು. ಇಷ್ಟೊಂದು ದೊಡ್ಡ ಅಂತರದ ಸೋಲು ಅವರನ್ನು ಆಗಲೇ ವಿಚಲಿತರನ್ನಾಗಿಸಿತ್ತು. ಅಲ್ಲಿಂದಲೂ ಸಂದರ್ಭ ಸಿಕ್ಕಿದಾಗಲೆಲ್ಲ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಹರಿಹಾಯುತ್ತಲೇ ಬಂದಿದ್ದಾರೆ. ಕೆಲವೊಮ್ಮೆ ರಾತ್ರಿ ರಾಜಕಾರಣ ಎನ್ನುವ ಶಬ್ಧಗಳನ್ನೂ ಬಳಸಿ ಅವರದೇ ಪಕ್ಷದವರಿಂದ ಛೀ ಥೂ ಎನಿಸಿಕೊಂಡಿದ್ದಾರೆ.
ಆದರೆ ನಂತರದಲ್ಲಾದ ಕೆಲವು ಬೆಳವಣಿಗೆಗಳು ಅವರನ್ನು ಇನ್ನಷ್ಟು ಘಾಸಿಗೊಳ್ಳುವಂತೆ ಮಾಡಿದೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸೂಚ್ಯವಾಗಿ ಅವರು ಅವುಗಳನ್ನು ಹೊರಗೆಡವಿದ್ದಾರೆ. ತಾವು ಜಿಲ್ಲಾಧ್ಯಕ್ಷರಾಗಿದ್ದರೂ ಪಕ್ಷದ ಅನೇಕರು ತಮ್ಮನ್ನು ಗಣನೆಗೆ ತೆಗೆದುಕೊಳ್ಳದೆ ಮನಬಂದಂತೆ ಮಾತನಾಡುತ್ತಿದ್ದಾರೆ, ತಾವೇ ಅಭ್ಯರ್ಥಿ ಎಂದು ಘೋಷಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ, ಮತ್ತು ತಮ್ಮದೇ ಕ್ಷೇತ್ರದಲ್ಲಿ ತಮ್ಮನ್ನು ಸೌಜನ್ಯಕ್ಕೂ ಕರೆಯದೆ ಪಕ್ಷದ ಚಟುವಟಿಕೆಗಳನ್ನು ಕೆಲವರು ನಡೆಸುತ್ತಿದ್ದಾರೆ ಎನ್ನುವುದು ಸಂಜಯ ಪಾಟೀಲ ಅವರ ಅಸಮಾಧಾನವಾಗಿತ್ತು. ಇದನ್ನೆಲ್ಲ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಕ್ರಮ ತೆಗೆದುಕೊಳ್ಳುವುದು ಅವರಿಗೆ ಬಿಟ್ಟಿದ್ದು ಎಂದು ಪತ್ರಿಕಾಗೋಷ್ಠಿಯಲ್ಲೇ ಹೇಳಿದ್ದಾರೆ.
ದೂರವಾದ ರಮೇಶ ಜಾರಕಿಹೊಳಿ
ಮತ್ತೊಂದು ಕಾರಣವೆಂದರೆ, ಅವರು ಅತಿಯಾಗಿ ನಂಬಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ ಕೈ ಬಿಟ್ಟಿದ್ದು. 2 ವರ್ಷಗಳ ಹಿಂದೆ ರಮೇಶ ಜಾರಕಿಹೊಳಿ ಗೋಕಾಕದಲ್ಲಿ ನಡೆದ ಕಾರ್ಯಕ್ರಮವೊಂದರ ವೇದಿಕೆಯಲ್ಲೇ ಸಂಜಯ ಪಾಟೀಲ ಅವರನ್ನು ಮುಂದಿನಬಾರಿ ಶಾಸಕರನ್ನಾಗಿ ಮಾಡುವುದಾಗಿ ಹೇಳಿದ್ದರು. ಕಳೆದ ಬಾರಿ ಸಂಜಯ ಪಾಟೀಲ ಸೋಲಲು ನಾನೇ ಕಾರಣ. ಮುಂದಿನ ಬಾರಿ ನಾನೇ ಮುಂದೆ ನಿಂತು ಅವರನ್ನು ಗೆಲ್ಲಿಸುತ್ತೇನೆ ಎಂದೂ ಹೇಳಿದ್ದರು. ಆಗ ಸಂಜಯ ಪಾಟೀಲ, ರಮೇಶ ಜಾರಕಿಹೊಳಿ ಒಬ್ಬ ಹುಲಿ. ಅವರು ಆಡಿದ್ದನ್ನು ಮಾಡಿ ತೋರಿಸುತ್ತಾರೆ ಎಂದು ಹಾಡಿಹೊಗಳಿದ್ದರು.
ಆದರೆ ಈಚಿನ ಬೆಳವಣಿಗೆಯಲ್ಲಿ ರಮೇಶ ಜಾರಕಿಹೊಳಿ ಅವರು ಸಂಜಯ ಪಾಟೀಲ ಅವರಿಂದ ದೂರ ಸರಿದಿದ್ದಾರೆ. ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ ಮನ್ನೊಳ್ಕರ್ ಅವರನ್ನು 2023ರ ಚುನಾವಣೆಗೆ ಅಭ್ಯರ್ಥಿಯಾಗಿಸಲು ಓಡಾಡುತ್ತಿದ್ದಾರೆ. ದೆಹಲಿವರೆಗೆ ಕರೆದುಕೊಂಡು ಹೋಗಿಬಂದಿದ್ದಾರೆ. ಅವರ ಪ್ರಚಾರ ಕಾರ್ಯಾಲಯವನ್ನೂ ರಮೇಶ ಜಾರಕಿಹೊಳಿ ಉದ್ಘಾಟಿಸಿದ್ದಾರೆ. ಮರಾಠಿ ಭಾಷಿಕರೇ ಅಭ್ಯರ್ಥಿಯಾಗಬೇಕೆಂದು ಬಲವಾಗಿ ಪ್ರತಿಪಾದಿಸಿದ್ದಾರೆ. ಇದೆಲ್ಲ ಸಂಜಯ ಪಾಟೀಲ ಅವರನ್ನು ಇನ್ನಷ್ಟು ವಿಚಲಿತರಾಗುವಂತೆ ಮಾಡಿದೆ.
ಜೊತೆಗೆ, ಧನಂಜಯ ಜಾಧವ, ದೀಪಾ ಕುಡಚಿ ಮೊದಲಾದವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೇಲೆ ಕಣ್ಣಿಟ್ಟು ಕೆಲಸ ಮಾಡುತ್ತಿದ್ದಾರುವುದೂ ಅವರಿಗೆ ಇಕ್ಕಟ್ಟು ತಂದಿದೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಯಾರೂ ಕವಡೆಕಾಸಿನ ಕಿಮ್ಮತ್ತನ್ನೂ ನೀಡುತ್ತಿಲ್ಲ ಎಂದುವುದು ಅವರ ಅಸಮಾಧಾನ.
“ರಮೇಶ ಜಾರಕಿಹೊಳಿ ಅವರು ಈ ಬಾರಿ ತಮ್ಮನ್ನು ಶಾಸಕರನ್ನಾಗಿ ಮಾಡುತ್ತಾರೆ ಎಂದು ಸಂಜಯ ಪಾಟೀಲ ನಂಬಿದ್ದರು. ಎಷ್ಟರಮಟ್ಟಿಗೆ ಎಂದರೆ ರಮೇಶ ಜಾರಕಿಹೊಳಿ ಬಂದಾಗ ಅವರ ಕಾರಿನ ಬಾಗಿಲನ್ನೂ ತಾವೇ ಹೋಗಿ ತೆಗೆಯುತ್ತಿದ್ದರು. ಆದರೆ ಅವರು ಯಾವಾಗ ದೂರಸರಿದರೋ ಅಲ್ಲಿಂದ ಸಂಜಯ ಪಾಟೀಲ ತೀವ್ರ ಡಿಸ್ಟರ್ಬ್ ಆಗಿದ್ದಾರೆ” ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದರು.
ಪಕ್ಷದ ಸಭೆಗಳಲ್ಲೂ ಅವರು ಅನೇಕ ಬಾರಿ ಅವರು ವಿಚಲಿತರಾಗಿದ್ದಿದೆ. ಯಾರ ಸಮಾಧಾನಕ್ಕೂ ಅವರು ಶಾಂತರಾಗುವುದಿಲ್ಲ. ತಮ್ಮ ಹುಟ್ಟು ಹಬ್ದ ಕಾರ್ಯಕ್ರಮದ ವೇದಿಕೆಯಲ್ಲಿ ಅವರು ವರ್ತಿಸಿದ ರೀತಿ ಮತ್ತು ಮಾತನಾಡಿದ ರೀತಿಗೂ ಪಕ್ಷದ ಅನೇಕ ನಾಯಕರು ಅಸಮಧಾನಗೊಂಡಿದ್ದಾರೆ. ವಿರೋಧ ಪಕ್ಷದವರು ಏನು ಕೊಡುತ್ತಾರೋ ಅದರ ಡಬಲ್ ನಾನು ಕೊಡುತ್ತೇನೆ ಎಂದೆಲ್ಲ ವೇದಿಕೆಯಲ್ಲಿ ಮಾತನಾಡಿದ್ದಾರೆ. ಇದೆಲ್ಲ ಸರಿಯಲ್ಲ ಎಂದೂ ಅವರು ಹೇಳಿದರು.
ಒಟ್ಟಾರೆ ಸಂಜಯ ಪಾಟೀಲ ವಿರೋಧ ಪಕ್ಷದವರ ಚಟುವಟಿಕೆಗಳಿಗಿಂತ ತಮ್ಮದೇ ಪಕ್ಷದ, ತಮ್ಮದೇ ಕ್ಷೇತ್ರದ ವಿದ್ಯಾಮಾನಗಳಿಂದ ಹೆಚ್ಚು ಡಿಸ್ಟರ್ಬ್ ಆಗಿದ್ದಾರೆ ಎನ್ನುವುದು ಸಾಮಾನ್ಯ ಅಭಿಪ್ರಾಯವಾಗಿದೆ.
ಮಾಧ್ಯಮದವರೊಂದಿಗೆ ಸಂಜಯ ಪಾಟೀಲ ದಾದಾಗಿರಿ… ಗೂಂಡಾಗಿರಿ; ಕ್ಷಮೆಯಾಚನೆಯೊಂದಿಗೆ ಕ್ಲೈಮ್ಯಾಕ್ಸ್
https://pragati.taskdun.com/sanjay-patil-spat-with-media-climax-with-an-apology/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ