ಆರೇ ತಿಂಗಳಲ್ಲಿ ಮತ್ತೆ ಅಧಿಕಾರಕ್ಕೇರಲು ದೋಸ್ತಿ ರಣತಂತ್ರ, ಏನದು?
ಎಂ.ಕೆ.ಹೆಗಡೆ, ಬೆಳಗಾವಿ –
ರಾಜ್ಯ ರಾಜಕೀಯದ ಒಂದು ಭಾಗ ಮುಕ್ತಾಯವಾಗಿದೆ. ಆದರೆ ಇನ್ನು ಮುಂದಿರುವುದು ಇನ್ನೂ ರೋಮಾಂಚಕ ಭಾಗ. ಕೇವಲ 14 ತಿಂಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಬಿಜೆಪಿ ವಿರುದ್ಧ ಕೊತಕೊತ ಕುದಿಯುತ್ತಿದೆ. ಯಾವ ಕ್ಷಣದಲ್ಲಿ ಮತ್ತೆ ಕಮಲ ಹೊಸಕಿ ಹಾಕಿ ಅಧಿಕಾರಕ್ಕೇರಲಿದ್ದೇವೆ ಎಂದು ಕಾದು ಕುಳಿತಿವೆ.
ಇಷ್ಟು ದಿನ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆ ಸ್ಥಾನದಲ್ಲಿದ್ದುಕೊಂಡು ಆಪರೇಶನ್ ಮಾಡುವುದಾಗಲಿ, ಬಿಜೆಪಿ ಆಪರೇಶನ್ ತಡೆಯುವುದಾಗಲಿ ಕಷ್ಟವಾಗಿತ್ತು. ಆದರೆ ಇನ್ನು ಮುಂದೆ ಹಾಗಲ್ಲ. ಫುಲ್ ಟೈಂ ಪಾಲಿಟಿಕ್ಸ್ ಮಾಡಲು ಅವರಿಗೆ ಸಮಯವಿದೆ. ಬೇಕಾದ ರಣತಂತ್ರ ಹೆಣೆಯಬಹುದು. ಅವರ ಮೇಲೆ ಈಗಿನಂತೆ ಯಾರ ಕಣ್ಣೂ ಇರುವುದಿಲ್ಲ.
ಹಾಗಾಗಿಯೇ ಅಧಿಕಾರ ಕಳೆದುಕೊಂಡ ಮರುದಿನವೇ ದೋಸ್ತಿ ಪಕ್ಷಗಳು ಹೊಸ ರಣತಂತ್ರ ಹೆಣೆದಿವೆ. ಇನ್ನು 6 ತಿಂಗಳಿನಿಂದ ಒಂದು ವರ್ಷದೊಳಗೆ ಮತ್ತೆ ಅಧಿಕಾರದ ಗದ್ದುಗೆಗೇರಬೇಕು ಎನ್ನುವ ತಂತ್ರ ರೂಪಿಸಿವೆ.
ಏನಿದು ತಂತ್ರ?
ವಿಶ್ವಾಸಮತದಲ್ಲಿ ಸೋತ ಮರುದಿನವೇ ಕಾಂಗ್ರೆಸ್ ಮತ್ತು ಜೆಡಿಎಸ್ ಸೀಕ್ರೆಟ್ ಸೂತ್ರ ಹೆಣೆದಿವೆ. ಕೇವಲ 4 ಮತ ಕೈಯಲ್ಲಿದ್ದಿದ್ದರೆ ಅಧಿಕಾರ ಕಳೆದುಕೊಳ್ಳಬೇಕಿರಲಿಲ್ಲ. ಇಷ್ಟು ಕಡಿಮೆ ಮತದಿಂದ ಸೋತಿದ್ದರಿಂದ ಅದನ್ನು ಮರಳಿ ಪಡೆಯುವುದು ಕಷ್ಟವಲ್ಲ ಎನ್ನುವುದು ಮೈತ್ರಿ ನಾಯಕರ ಅಭಿಪ್ರಾಯ. ಇದಕ್ಕೆ ಅವರು ಕಂಡುಕೊಂಡ ಅಸ್ತ್ರಗಳಲ್ಲಿ ಮೊದಲನೆಯದು ಉಪಚುನಾವಣೆ.
ಈಗ ರಾಜಿನಾಮೆ ನೀಡಿರುವ 14 ಶಾಸಕರ ಕ್ಷೇತ್ರಗಳಲ್ಲಿ ಇನ್ನು 6 ತಿಂಗಳಲ್ಲಿ ಉಪಚುನಾವಣೆ ನಡೆಯಲಿವೆ. ಎಲ್ಲ ಕ್ಷೇತ್ರಗಳೂ ಕಾಂಗ್ರೆಸ್-ಜೆಡಿಎಸ್ ಕ್ಷೇತ್ರಗಳು. ಹಾಗಾಗಿ ಸ್ವಲ್ಪ ಶ್ರಮವಹಿಸಿದರೆ ಮತ್ತೆ ಈ ಕ್ಷೇತ್ರಗಳನ್ನು ಮರಳಿ ಪಡೆಯಬಹುದು. ಹೋದವರು ಹೋಗಲಿ, ಆ ಎಲ್ಲ ಕ್ಷೇತ್ರಗಳಿಗೆ ಹೊಸಬರನ್ನು ಕಣಕ್ಕಿಳಿಸಬೇಕು. ಗೆಲ್ಲುವ ಅಭ್ಯರ್ಥಿಯನ್ನು ಹುಡುಕಬೇಕು. ಅದಕ್ಕಾಗಿ ಇಂದಿನಿಂದಲೇ ಕಾರ್ಯತಂತ್ರ ರೂಪಿಸಬೇಕು ಎಂದು ಎರಡೂ ಪಕ್ಷಗಳು ನಿರ್ಧರಿಸಿವೆ.
ಉಸ್ತುವಾರಿ ನೇಮಕ
ಎಲ್ಲ 14 ಕ್ಷೇತ್ರಗಳಿಗೆ ನಿಷ್ಠಾವಂತ ಹಿರಿಯ ನಾಯಕರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಅವರು ಅವಿಶ್ರಾಂತವಾಗಿ ತಮಗೆ ವಹಿಸಿರುವ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು. ಸೂಕ್ತ ಅಭ್ಯರ್ಥಿಯನ್ನು ಹುಡುಕುವ ಜೊತೆಗೆ, ಕೆಳಮಟ್ಟದಿಂದ ಪಕ್ಷ ಸಂಘಟನೆಯ ಜವಾಬ್ದಾರಿಯನ್ನೂ ಅವರ ಹೆಗಲಿಗೆ ಹಾಕಲು ನಿರ್ಧರಿಸಲಾಗಿದೆ.
ಮಾಜಿ ಸಚಿವರು, ಹಿರಿಯ ಪದಾಧಿಕಾರಿಗಳು ಈ ಕ್ಷೇತ್ರಗಳ ಉಸ್ತುವಾರಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ರಾಜಿನಾಮೆ ನೀಡಿದ ನಾಯಕರು ಪ್ರಬಲವಾಗಿದ್ದರೆ ಅಂತಹ ಕ್ಷೇತ್ರಗಳಿಗೆ ಒಬ್ಬರ ಬದಲಿಗೆ ಇಬ್ಬರನ್ನು ಉಸ್ತುವಾರಿ ಮಾಡಬೇಕೆಂದು ನಿರ್ಧರಿಸಲಾಗಿದೆ.
ಅಸಮಾಧಾನಿತರ ಮೇಲೆ ಕಣ್ಣು
ಈ ಎಲ್ಲ ಕ್ಷೇತ್ರಗಳಲ್ಲಿ ಆಪರೇಶನ್ ಕಮಲ ಮಾಡಿದ್ದರಿಂದ ಕಳೆದ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಕುದಿಯುತ್ತಿದ್ದಾರೆ. ಅವರಿಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶವಿರುವುದಿಲ್ಲ. ಹಾಗಾಗಿ ಅವರು ಪ್ರಬಲರಾಗಿದ್ದರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಜನರೆದುರು ಕರೆದೊಯ್ಯಲು ನಿರ್ಧರಿಸಲಾಗಿದೆ. ಆದರೆ ಅವರು ನಿಷ್ಠಾವಂತರಾಗಿರಬೇಕು. ಮತ್ತೆ ಆಪರೇಶನ್ ಗೆ ಬಲಿಯಾಗುವಂತವರಾಗಿರಬಾರದು ಎನ್ನುವ ಷರತ್ತನ್ನು ವಿಧಿಸಲಾಗಿದೆ.
ಇದರ ಜೊತೆಗೆ, ಅವಕಾಶ ನೋಡಿಕೊಂಡು ಬಿಜೆಪಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಅಸಮಾಧಾನಗೊಳ್ಳುವವರನ್ನು ಗುರುತಿಸಿ ನಿಧಾನವಾಗಿ ಸೆಳೆಯುವ ತಂತ್ರವನ್ನು ರೂಪಿಸಲಾಗಿದೆ. ಹಾಗೆ ರಿವರ್ಸ್ ಆಪರೇಶನ್ ಮತ್ತು ಉಪಚುನಾವಣೆಯನ್ನು ಸಮರ್ಥವಾಗಿ ಎದುರಿಸಿ, ಇನ್ನು ವರ್ಷದೊಳಗೆ ಮತ್ತೆ ಅಧಿಕಾರಕ್ಕೇರಲು ರಣತಂತ್ರ ಹೆಣೆಯಲು ಕಾಂಗ್ರೆಸ್- ಜೆಡಿಎಸ್ ಮುಂದಾಗಿವೆ. ಇನ್ನೊಂದು ವಾರದಲ್ಲಿ ಎಲ್ಲ 14 ಕ್ಷೇತ್ರಗಳಿಗೂ ಉಸ್ತುವಾರಿ ನೇಮಕ ಮಾಡಲು ನಿರ್ಧರಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ