Latest

ಬದುಕಿನ ಕಸರತ್ತು

ಜಯಶ್ರೀ ಜೆ. ಅಬ್ಬಿಗೇರಿ 

ಒಂದೂರಿನಲ್ಲಿ ಒಬ್ಬ ದೊಂಬರಾಟದವನಿದ್ದ. ಆತನಿಗೆ ಒಬ್ಬಳು ಪುಟ್ಟ ಮಗಳಿದ್ದಳು. ಅವರಿಬ್ಬರೂ ಸೇರಿ ದಿನಾಲೂ ಬಗೆ ಬಗೆಯ ಕಸರತ್ತುಗಳನ್ನಾಡುತ್ತಿದ್ದರು. ಅದರಿಂದ ಸಿಕ್ಕ ಪುಡಿಗಾಸಿನಿಂದ ಹಾಗೋ ಹೀಗೋ ಜೀವನ ಸಾಗಿಸುತ್ತಿದ್ದರು. ಅವರಾಡುವ ಕಸರತ್ತು ತುಂಬಾ ಅಪಾಯಕಾರಿಯಾಗಿತ್ತು. ಅಪ್ಪ ನೆಲದ ಮೇಲೆ ಬೆನ್ನು ತಗುಲಿಸಿ ಮಲಗಿ ತನ್ನ ಕಾಲುಗಳಿಂದ ದೊಡ್ಡ ಬಿದಿರಿನ ಕೋಲೊಂದನ್ನು ಲಂಬವಾಗಿ ಹಿಡಿಯುತ್ತಿದ್ದ. ಆಗ ಪುಟ್ಟ ಮಗಳು ಕೋಲು ಹತ್ತಿ ಅದರ ತುದಿಯಲ್ಲಿ ಕೆಲವು ನಿಮಿಷ ನಿಲ್ಲುತ್ತಿದ್ದಳು. ಹೀಗೆ ಆಡುವ ಈ ಕಸರತ್ತಿನಲ್ಲಿ ಇಬ್ಬರಲ್ಲಿ ಒಬ್ಬರ ಸಮತೋಲನ ತಪ್ಪಿದರೂ ಅಪಾಯ ಖಂಡಿತ. ತನ್ನ ಏಕಾಗ್ರತೆ ಕುಸಿದರೆ ಕೋಲು ಮುರಿದು ಮಗಳ ಜೀವಕ್ಕೆ ಕುತ್ತು ತಂದೀತು ಎನ್ನುವ ಭಯ ಅಪ್ಪನನ್ನು ಮೇಲಿಂದ ಮೇಲೆ ಕಾಡುತ್ತಲೇ ಇತ್ತು.
ಒಂದು ಸಂಜೆ ತನ್ನ ಮಗಳನ್ನು ಕರೆದು,’ ಮಗು, ಇನ್ನು ಮುಂದೆ ಕಸರತ್ತು ಆಡುವಾಗ ಒಂದು ಕೆಲಸ ಮಾಡೋಣ. ನಾನು ನಿನ್ನ ಮುಖ ನೋಡುತ್ತೇನೆ; ನೀನು ನನ್ನ ದಿಟ್ಟಿಸಿ ನೋಡು. ಹೀಗೆ ಒಬ್ಬರನ್ನೊಬ್ಬರು ನೋಡಿಕೊಂಡು ಬಿಟ್ಟರೆ ನಮ್ಮ ಏಕಾಗ್ರತೆಯನ್ನು ಹೆಚ್ಚಿ ಕಸರತ್ತನ್ನು ಸುಸೂತ್ರವಾಗಿ ಮಾಡಿ ಮುಗಿಸಬಹುದು’ ಎಂದ. ಅದಕ್ಕೆ ಮಗಳು ಅಪ್ಪಾ, ನೀನು ನನ್ನನ್ನು ನಾನು ನಿನ್ನನ್ನು ನೋಡುವುದಕ್ಕಿಂತ ನಾವಿಬ್ಬರೂ ಸ್ವತಃ ನಮ್ಮನ್ನೇ ನೋಡಿಕೊಳ್ಳುವುದೇ ಒಳ್ಳೆಯದು. ನೀನು ನಿನ್ನೆಲ್ಲ ಗಮನವನ್ನು ನಿನ್ನ ಮೇಲೆಯೇ ಇರಿಸು. ನನ್ನ ಜಾಗ್ರತೆ ನಾನು ತೆಗೆದುಕೊಳ್ಳುತ್ತೇನೆ. ಬಹುಶಃ ಆಗ ನಾವಿನ್ನೂ ಚೆನ್ನಾಗಿ ಈ ಕಸರತ್ತನ್ನು ಮಾಡಿ ಮುಗಿಸುವುದು ಸಾಧ್ಯ’ ಎಂದಳು. ಈ ಕಥೆ ಮನಸ್ಸನ್ನು ಕಲುಕಿತು. ಅರಿವನ್ನು ವಿಸ್ತರಿಸುವ ದಾರಿಯಲ್ಲಿ ನಡೆಸಿತು. ಅದಕ್ಕೆ ತಮ್ಮೊಂದಿಗೆ ಅದನ್ನು ಹಂಚಿಕೊಂಡೆ.
ಚಿಕ್ಕವಳಿದ್ದಾಗ ನೋಡಿದ ದೊಂಬರಾಟಗಳು ಇನ್ನೂ ಮನದ ಮೂಲೆಯಲ್ಲಿ ಹಾಗೇ ಕುಳಿತಿವೆ. ಅವುಗಳ ಚಿತ್ರಗಳು ಕಣ್ಮುಂದೆ ಬಂದಾಗಲೆಲ್ಲ ಜೀವ ಹಿಂಡಿದಂತಾಗುತ್ತದೆ. ಏನೂ ಹೇಳಿಕೊಳ್ಳಲಾಗದ ನೋವು. ಏಕ ಕಾಲದಲ್ಲಿ ದುಃಖ ದುಗುಡಗಳೆಲ್ಲ ಆಕ್ರಮಣ ಮಾಡಿದಂತೆ. ಈ ಬದುಕು ಅನ್ನೋದು ಯಾವಾಗ ಎಲ್ಲಿ ಹೇಗೆ ನಮ್ಮನ್ನು ಕಾಲು ಜಾರಿ ಬೀಳಿಸುತ್ತದೆಯೋ ಗೊತ್ತೇ ಆಗಲ್ಲ. ಮುದ್ದಿನ ಮಕ್ಕಳು ನಮ್ಮೊಂದಿಗೆ ಇರುವಾಗ ಜಗದ ಚಿಂತೆಗಳನ್ನೆಲ್ಲ ಮರೆಯುತ್ತೇವೆ. ಕೆಲವೊಮ್ಮೆ ಬದುಕಿನ ಸನ್ನಿವೇಶಗಳು ಕಂದಮ್ಮಗಳ ಆಟೋಟಗಳನ್ನು ನಮ್ಮದೇ ಕಣ್ಣದೃಷ್ಟಿ ತಾಗುವಂತೆ ನೋಡುವ ಅವಕಾಶದಿಂದಲೂ ವಂಚಿತರನ್ನಾಗಿಸುತ್ತವೆ. ಅದನ್ನು ನೆನೆದಾಗ ಬದುಕು ಅದೆಷ್ಟು ಕ್ರೂರಿ ಎಂದೆನಿಸುತ್ತದೆ. ಮನೆಯಂಗಳದಿ ಬೆಳೆಯಬೇಕಾದ ಹೂಗಳನ್ನು ಬೆವರಿಳಿಸುವ ಕೂಲಿಗೆ ಹಚ್ಚುವ ನೋವು ಕಂಡಾಗ ಜೀವ ಬಾಯಿಗೆ ಬಂದಂತೆ ಅನಿಸುತ್ತದೆ. ಇನ್ನೂ ಬಲಿಯದ ಕೈ ಕಾಲುಗಳನ್ನು ಬದುಕು ತನ್ನ ಕುಲುಮೆಯಲ್ಲಿ ತಂದಿಡುವಂತೆ ಮಾಡಿ ಬಿಡುತ್ತದೆ. ಸರಿಯಾಗಿ ಎಲುಬು, ಮಾಂಸಖಂಡಗಳು ಗಟ್ಟಿಯಾಗುವ ಮುನ್ನವೇ ಕುಲುಮೆಯ ಬೆಂಕಿಗೆ ಬೇಯಿಸಿ ಹೊರಗೊಡ್ಡುವ ಮೈ ಮುಖಗಳನ್ನು ಗಟ್ಟಿಗೊಳಿಸುತ್ತದೆ. ಇದು ನಿಜಕ್ಕೂ ಬದುಕಿನ ಒಂದು ಮುಖವೇ!
ನಾವು ನಿರೀಕ್ಷಿಸದಿದ್ದರೂ ಇನ್ನೂ ಎಳೆ ಪ್ರಾಯದಲ್ಲಿರುವ ಮಕ್ಕಳು, ಸಂಸಾರದ ಕಷ್ಟದ ನೊಗಕ್ಕೆ ಹೆಗಲು ಕೊಡುವ ತಾಕತ್ತಿಲ್ಲದಿದ್ದರೂ ಮೈಯಲ್ಲಿನ ಕಸುವನ್ನೆಲ್ಲ ಒಗ್ಗೂಡಿಸುವುದಿದೆಯಲ್ಲ ಅದು ಅಪೂರ್ವವಾದುದು. ಅಂಥ ಪುಟ್ಟ ಹೃದಯವೂ ಕಷ್ಟಗಳಿಗೆ ಸಾಥ್ ನೀಡುವುದನ್ನು ನೋಡಿದಾಗ ಕರಳು ಚುರುಕ್ ಎನ್ನುತ್ತದೆ. ಎಂಥವರ ಕಣ್ಣಂಚುಗಳೂ ತೇವವಾಗುತ್ತವೆ. ಇದಿಷ್ಟೇ ಸಾಲದೆಂಬಂತೆ ಮಲಗಿದಾಗ ಹೆತ್ತವ್ವನಂತೆ ದುಡಿದ ದಣಿದ ದೇಹದ, ಮೈ, ಬೆನ್ನು, ಕಾಲು ಸವರುತ್ತ ಹೆತ್ತವರ ನೋವುಗಳಿಗೆ ತಾವೂ ಮಿಡಿಯುತ್ತ ಸಂತೈಸುವ ಪರಿ ಮೂಕರನ್ನಾಗಿಸುತ್ತದೆ. ವಿಪರ್ಯಾಸವೆಂದರೆ ಆಧುನಿಕ ಜಗತ್ತು ಎಂದು ಎದೆಯುಬ್ಬಿಸಿ ಹೇಳುವ ಕಾಲದಲ್ಲೂ ಇಂಥ ಅಸಹಾಯಕ ಜೀವಗಳನ್ನು ಇದೇ ವೃತ್ತಿಯಲ್ಲಿಡಲು ಪ್ರಯತ್ನಿಸುತ್ತಿದೆ ಎನ್ನುವುದು ಬೇಸರದ ಸಂಗತಿ. ಸಾಹಿತ್ಯ, ಸಿನಿಮಾ, ಕಿರು ಚಿತ್ರಗಳಲ್ಲಿ ಇಂಥವರ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿ ಪ್ರಶ್ನೆ ಕೇಳುತ್ತಿದೆ. ಅವರ ಪರ ದನಿ ಎತ್ತುತ್ತಿದೆ ಆದರೂ ಪ್ರತಿಫಲ ಮಾತ್ರ ನಿರೀಕ್ಷಿಸಿದ ಮಟ್ಟಕ್ಕೆ ಸಿಗುತ್ತಿಲ್ಲ. ಸಾಮಾಜಿಕ ಶೋಷಿತರಾಗುವ ಈ ಎಲ್ಲ ಜೀವಗಳ ಜೀವನ ಸುಂದರಗೊಳ್ಳುವುದು ಯಾವಾಗ ಎಂಬ ಪ್ರಶ್ನೆ, ಉತ್ತರ ಸಿಗದ ಪ್ರಶ್ನೆಯಾಗಿ ಕಾಡುತ್ತದೆ. ಬದುಕಿನ ಕಸರತ್ತಿನಲ್ಲಿರುವ ಇವರೆಡೆಗೆ ಸರಕಾರ ಸಂಘ ಸಂಸ್ಥೆಗಳ ಮತ್ತು ನಾವು ನೆರವಿನ ಹಸ್ತ ಚಾಚಿದರೆ ಅವರ ಬದುಕು ಸುಂದರಗೊಳ್ಳುವುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button