ಅಂದಿನ ರಾಮಾಯಣ ಇಂದು ನೋಡಿದಾಗ…. -ಭಾಗ 1

ನೀತಾ ರಾವ್, ಬೆಳಗಾವಿ
ಲಾಕ್ ಡೌನ್‌ ಸಮಯದಲ್ಲಿ ಡಿಡಿಯವರು ಜನರ ಮನರಂಜನೆಗಾಗಿ, ಅದಕ್ಕಿಂತ ಮುಖ್ಯವಾಗಿ ಅವರನ್ನೆಲ್ಲಾ ಕಾಣುವ ಹಗ್ಗವಿಲ್ಲದೇ ವ್ಯವಸ್ಥಿತವಾಗಿ ಕಟ್ಟಿಹಾಕಲೆಂದು ಪ್ರಾರಂಭಿಸಿದ, ಮೂವತ್ತೆರಡು ವರ್ಷಗಳ ಹಿಂದೆ ಮಾಡಿದ ರಾಮಾಯಣ ಮತ್ತು ನಂತರದಲ್ಲಿ ಮಾಡಿದ ಮಹಾಭಾರತ ಸಿರಿಯಲ್ ಗಳನ್ನು ದಿನಕ್ಕೆ ಎರಡು ಬಾರಿ ಎರಡು ಗಂಟೆಗಳ ಕಾಲ ಪ್ರಸಾರ ಮಾಡುತ್ತೇವೆಂದು ಅನೌನ್ಸ್ ಮಾಡಿದ ಸಂದೇಶವೇ ಎಲ್ಲಾ ವಾಟ್ಸ್ಯಾಪ್ ಗ್ರೂಪಗಳಲ್ಲಿ, ಫೇಸ್ಬುಕ್ ಮೇಲೆ ಸಾಕಷ್ಟು ರೌಂಡ್ ಹೊಡೆಯಿತು. ಮಾರ್ಚ್ ಇಪ್ಪತ್ತೆಂಟನೇ ತಾರೀಖಿನಂದು ಬೆಳಗಿನ ಒಂಬತ್ತು ಗಂಟೆಗೆ ಸಾಕಷ್ಟು ಜನರು ಅತ್ಯಂತ ಭಕ್ತಿ ಭಾವದಿಂದ ಟಿವಿಯ ಮುಂದೆ ಕೈ ಮುಗಿದು ಕುಳಿತಿರಬಹುದು. ಬೆಳಿಗ್ಗೆ ಮತ್ತು ರಾತ್ರಿ ಒಂಬತ್ತು ಗಂಟೆಗೆ ರಾಮಾಯಣ ಅಂದ್ರೆ ಮನೆಯಲ್ಲಿ ಹೆಣ್ಣುಮಕ್ಕಳು ಬಹಳಷ್ಟು ಪ್ಲ್ಯಾನ್ ಮಾಡಬೇಕಾಗುತ್ತದೆ. ಲಾಕ್ ಡೌನ್ ಇರುವುದರಿಂದ ಮನೆಯಲ್ಲೇ ಪ್ರತಿಷ್ಠಾಪನೆಗೊಂಡ ಗಂಡ, ಮಕ್ಕಳು, ಪಾಲಕರು ಎಲ್ಲರ ಬೆಳಗಿನ ತಿಂಡಿ ಒಂಬತ್ತೊರಳಗೆ ತಯಾರಾಗಬೇಕು. ಇಲ್ಲವೆಂದರೆ ಹತ್ತರವರೆಗೆ ಕಾಯುವರಾರು? ಮತ್ತೆ ರಾತ್ರಿ ಒಂಬತ್ತೊರೊಳಗೆ ರಾತ್ರಿ ಊಟದ ತಯಾರಿ ಮುಗಿದು ಡೈನಿಂಗ್ ಟೇಬಲ್ ಮೇಲೆ ಎಲ್ಲ ಅಡುಗೆ, ಪ್ಲೇಟು, ಲೋಟಗಳನ್ನು ಇಟ್ಟುಬಿಟ್ಟರೆ ನಮ್ಮ ಕೆಲಸವಾಯ್ತು. ಯಾರ್ಯಾರು ಯಾವಾಗ ಊಟ ಮಾಡುತ್ತಾರೆನ್ನುವುದು ಅವರಿಗೇ ಬಿಟ್ಟಿದ್ದು. ನಮ್ಮ ಜವಾಬ್ದಾರಿ ಮುಗಿದಂತೆ. ನಾವಿನ್ನು ಟಿವಿಯ ಮುಂದೆ ಕುಳಿತುಕೊಳ್ಳಲು ಅಡ್ಡಿಯಿಲ್ಲ ಎನ್ನುವ ನಿರಾಳ. “ಒಳ್ಳೇ ಊಟ-ತಿಂಡಿ ಟೈಮಿಗೇ ಇಟ್ಟಬಿಟ್ಟಾರ” ಅನ್ನೋ ಕಿರಿಕಿರಿ ಬೇರೆ.
ಆದರೂ ಎರಡು ದಿನಗಳಲ್ಲಿ ಟೈಮ್ ಅಡ್ಜಸ್ಟ್ ಆಗಿಯೇ ಆಯ್ತು. “ಮಂಗಲ ಭವನ” ಎಂದು ಅದರಲ್ಲಿ ಟೈಟಲ್ ಸಾಂಗ್ ಶುರುವಾಗುವುದಕ್ಕೂ ನಾವು ಅಟೆನ್ಶನ್ ನಲ್ಲಿ ಕೂತುಕೊಳ್ಳುವುದಕ್ಕೂ ಸರಿಯಾಗಲು ಪ್ರಾರಂಭಿಸಿತು. ಸಧ್ಯ ಈಗಿನ ಕಾಲದಲ್ಲಿ, ಈ ಮುಂಚೆ ಅಂದರೆ ಮೊದಲ ಸಲ ರಾಮಾಯಣ ಬರುವಾಗಿನಷ್ಟು ನೇಮ-ನಿತ್ಯಗಳು ನಮ್ಮಲ್ಲಿಯೂ ಉಳಿದಿಲ್ಲ. ಆಗ ಹೇಗಿತ್ತು ಗೊತ್ತೇ? ಒಂಬತ್ತೊರಳಗೆ ಸ್ನಾನ ಮಾಡಿ ಶುಚಿರ್ಭೂತರಾಗಿಯೇ ಕುಳಿತುಕೊಳ್ಳಬೇಕೆಂಬಷ್ಟು ಭಕ್ತಿ ರಸ ಎಲ್ಲರ ಮನದೊಳಗೆ. ನಮ್ಮ ಮನೆಯಲ್ಲಿ ನಮ್ಮ ತಂದೆ, ನಾನು ಮತ್ತು ಅಕ್ಕನ ಮಧ್ಯೆ ಈ ಸ್ನಾನದ ಸಲುವಾಗಿ ಪ್ರತಿ ಭಾನುವಾರ ಒಂದಿಷ್ಟು ಝಟಾಪಟಿ ಆಗುತ್ತಿತ್ತು. ನಾ ಮೊದಲು, ತಾ ಮೊದಲು ಎನ್ನುವ ಜಗಳ. ಕೀರ್ತನೆ, ಹರಿಕಥೆ ಕೇಳಲು ಗುಡಿಗೆ ಹೋದಂತೆ ಇದು, ರಾಮಾಯಣ ನೋಡುವುದೆಂದರೆ. ರಸ್ತೆಗಳೆಲ್ಲ ಹೀಗೆಯೇ ಇವತ್ತಿನಂತೆ ಅವತ್ತೂ ಬಿಕೋ ಎನ್ನುತ್ತಿದ್ದವು. ಯಾರೆಂದರೆ ಯಾರೂ ರೋಡ್ ಮೇಲೆ ಇರುತ್ತಿರಲಿಲ್ಲ. ಎಲ್ಲಿಗಾದರೂ ಅರ್ಜಂಟ್ ಹೋಗುವುದಿದ್ದರೂ ರಾಮಾಯಣ ಧಾರಾವಾಹಿ ಮುಗಿಸಿಯೇ ಹೋಗುವುದು. ಮತ್ತೆ ತಡವಾಗಿ ಬಂದ ಕಾರಣವನ್ನು ಅತ್ಯಂತ ಹೆಮ್ಮೆ ಮತ್ತು ಭಕ್ತಿಯಿಂದ ನಿಸ್ಸಂಕೋಚವಾಗಿ ಹೇಳುವುದು. ಅಥವಾ ಅಪಾಯಂಟಮೆಂಟ್ ಕೊಡುವಾಗಲೇ “ರಾಮಾಯಣ ಮುಗಿಸಿಕೊಂಡು ಬರ್ತೇನೆ” ಎಂದು ರಾಜಾರೋಷವಾಗಿ ಹೇಳುವುದು. ರವಿವಾರ ಮದುವೆ ಮುಹೂರ್ತ ಫಿಕ್ಸ್ ಮಾಡಿದರೆ ಮುಂಜಾನೆಯ ವೇಳೆ ಮದುವೆ ಕಾರ್ಯಾಲಯದಲ್ಲಿಯೇ ಒಂದು ಟಿ.ವಿ. ಫಿಕ್ಸ್ ಮಾಡಿ ಬೀಗರಿಗೆಲ್ಲ ರಾಮಾಯಣ ನೋಡಲು ಅನುಕೂಲ ಮಾಡಿಕೊಡಬೇಕು. ಮುಹೂರ್ತವನ್ನಂತೂ ರಾಮಾಯಣ ದ ಟೈಮನಲ್ಲಿ ಬಿಲ್ಕುಲ್ ಇಡುವಂತಿಲ್ಲ. ಇವೆಲ್ಲಾ ಘಟನೆಗಳು ಜರುಗಿದ್ದನ್ನು ಈ ಕಣ್ಣುಗಳು ಕಂಡಿವೆ. ಅದರ ಮೇಲೆ ಇನ್ನೂ ಒಂದಿಷ್ಟು ಚಮತ್ಕಾರಿಕ ಸಾಹಸಗಳೂ ನಡೆಯುತ್ತಿದ್ದವು. ಅನಿವಾರ್ಯ ಕಾರಣಗಳಿಂದಾಗಿ ತಮ್ಮ ಸ್ವಸ್ಥಾನವನ್ನು ಬಿಟ್ಟು ಪರವೂರಿಗೆ ಹೋಗಲೇಬೇಕಾದವರು ಬಸ್ಸಿಳಿದ ತಕ್ಷಣ ಹತ್ತಿರದ ಓಣಿಯೊಂದರಲ್ಲಿ ಹೊಕ್ಕು ಮೊದಲು ಸಿಗುವ ಯಾವುದೋ ಒಂದು ಮನೆಯ ಬಾಗಿಲು ತಟ್ಟಿ, “ಊರಿಂದ ಬರುತ್ತಿದ್ದೇನೆ, ರಾಮಾಯಣ ನೋಡಿಕೊಂಡು ಹೋಗುತ್ತೇನೆ” ಎಂದು ಹೇಳಿ ಹಕ್ಕಿನಿಂದ ಕುರ್ಚಿಯ ಮೇಲೆ ಕುಳಿತು, ಅಥವಾ ಈಗಾಗಲೇ ಇರುವ ಎಲ್ಲ ಸಿಂಹಾಸನಗಳ ಮೇಲೆ ಹಿರಿಯ ಜನರು ವಿರಾಜಮಾನರಾಗಿದ್ದರೆ, ಉಳಿದವರಿಗಾಗಿ ಹಾಸಿದ ಚಾಪೆ, ಜಮಖಾನೆಯ ಮೇಲೆ ಕುಳಿತು ರಾಮಾಯಣ ಧಾರಾವಾಹಿ ಮುಗಿಸಿಯೇ ಮುಂದಿನ ಕೆಲಸಕ್ಕೆ ಹೊರಡುತ್ತಿದ್ದರು.
ಬಹಳ ಮನೆಗಳಲ್ಲಿ ಇನ್ನೂ ಟಿವಿ ಎಂಬ ಮಾಯಾಪೆಟ್ಟಿಗೆ ಬಂದಿರದ ಕಾಲ. ಬೆಳಗಾವಿಯಲ್ಲಿ ಅನೇಕರು ರಾಮಾಯಣ ಧಾರಾವಾಹಿ ನೋಡಲಿಕ್ಕಾಗಿಯೇ ಕೊಂಡರು. ಮನೆಯಲ್ಲಿಯೇ ಕುಳಿತು ನೋಡುವ ವೈಭೋಗವಿಲ್ಲದ ಜನ ಯಾವುದೇ ಸಂಕೋಚವಿಲ್ಲದೇ ನೆರೆಹೊರೆಯಲ್ಲಿ ಯಾರ ಮನೆಯಲ್ಲಿ ಟಿವಿ ಇದೆಯೋ‌ಅವರ ಮನೆಯಲ್ಲಿ ಹೋಗಿ ಕುಳಿತು ನೋಡುತ್ತಿದ್ದರು. ಅವರೂ ಕುರ್ಚಿಗಳು, ಚಾಪೆ, ಜಮಖಾನೆ ಹಾಸಿ ರೆಡಿ ಮಾಡಿ ಇಟ್ಟಿರುತ್ತಿದ್ದರು. ಇವರು ಹೋದಾಗ ಅವರು ಇನ್ನೂ ಅಡುಗೆಮನೆಯ ತಮ್ಮ ಕೆಲಸದಲ್ಲೇ ತೊಡಗಿಕೊಂಡಿದ್ದರೆ ಇವರಿಗೆ ಸಕಾರಣ ಕೋಪ ಬರುವುದು ಸಹಜವಾಗಿತ್ತು. ಮೂಲೆಯಲ್ಲಿ ಸುತ್ತಿಕೊಂಡು ನಿಂತ ಚಾಪೆ ಹಾಸಿಕೊಳ್ಳಲು ಯಾವ ದೊಣ್ಣೆನಾಯಕನ ಪರ್ಮಿಷನ್ನೂ ಬೇಕಿರಲಿಲ್ಲ. ಮಧ್ಯೆ ಕುಡಿಯಲು ನೀರು-ಪಾರು ಕೇಳುವುದು ನಮ್ಮ ಹಕ್ಕಾಗಿತ್ತು. ಹೆಚ್ಚಿನದನ್ನು ಕೊಡುವುದಿದ್ದರೆ ಅದು ಶ್ರೀರಾಮನು ಅವರಿಗೆ ದಯಪಾಲಿಸಿದ ಉದಾರತೆ ಮತ್ತು ಅತಿಥಿ ಸತ್ಕಾರದ ಪಾಠವೆಂದುಕೊಳ್ಳಬಹುದು. ಹೀಗೆ ನಾವು ಒಂದಿಷ್ಟು ಎಪಿಸೋಡುಗಳನ್ನು ಅವರಿವರ ಮನೆಬಾಗಿಲಿಗೆ ಹೋಗಿ ಒಳನಡೆದು ಕೆಳಗೆ ಕುಳಿತು ನೋಡಿಬಂದ ಮೇಲೆ ನಾವು ಯಾರ್ಯಾರದೋ ಮನೆ ಅಲೆದು ಆ ಮನೆಯವರ ಟಿವಿ ಹೊಂದಿರುವ ಅಹಮಿಕೆಯನ್ನು ನೋಡುವುದಕ್ಕಿಂತ ನಮ್ಮ ‌ಮನೆಗೇ ರಾಮನು ಬರುವುದು ವಿಹಿತವೆನಿಸಿತು. ಹೀಗಾಗಿ ದುಡ್ಡು ಕಡಿಮೆ ಮತ್ತು ವಸ್ತುಗಳು ತುಟ್ಟಿಯೆನಿಸಿದ ಆ ಕಾಲದಲ್ಲಿ ಹದಿನಾಲ್ಕು ಇಂಚಿನ ಪೋರ್ಟಬಲ್ ಕಪ್ಪು ಬಿಳುಪು ಟಿವಿಯೊಂದು ಬಂದು ನಮ್ಮ ಮನೆಯ ಗಿಡ್ಡ ಕಪಾಟಿನ ಮೇಲೆ ವಿರಾಜಮಾನವಾಯ್ತು. ಶ್ರೀರಾಮಚಂದ್ರ, ಸೀತೆ, ಮತ್ತು ಲಕ್ಷ್ಮಣರು ನಮ್ಮ ಮನೆಯಿಂದಲೇ ಕಾಡು- ಮೇಡು ಅಲೆದರು, ರಾಕ್ಷಸರನ್ನು ಕೊಂದರು, ಋಷಿಮುನಿಗಳನ್ನು ಭೇಟಿ ಮಾಡಿ ಅವರಿಂದ ದಿವ್ಯ ಜ್ಞಾನವನ್ನು ಪಡೆದರು. ಇಲ್ಲಿಂದಲೇ ಲಂಕೆಯಿಂದ ತನ್ನ ಪುಷ್ಪಕವಿಮಾನದಲ್ಲಿ ಹಾರಿಬಂದ ರಾವಣನು ಮಾರುವೇಷದಲ್ಲಿ ಸೀತೆಯನ್ನು ಮೋಸದಿಂದ ಅಪಹರಿಸಿದ. ಜಟಾಯುವು ಮುಪ್ಪಿನಲ್ಲೂ ಅವನ ಸಂಗಡ ಕಾದು ಸ್ತ್ರೀ ಅಸ್ಮಿತೆಗಾಗಿ ಹೋರಾಡಿದ. ಸುಗ್ರೀವ-ವಾಲಿಯರು ಕಾದಾಡಿ ವಾಲಿ ಬಿದ್ದು, ಸುಗ್ರೀವನು ಎದ್ದ. ಕಪಿಸೇನೆಯು ಲಂಕೆಗೆ ಸೇತುವೆಯನ್ನು ಕಟ್ಟಿತು. ಕುಂಭಕರ್ಣ ನಿದ್ದೆಯಿಂದೆದ್ದು ಹಾರಾಡಿ ಹೋರಾಡಿ ವೀರಮರಣವನಪ್ಪಿದ. ರಾವಣವಧೆಯ ನಂತರ ವಿಭೀಷಣನ ಪಟ್ಟಾಭಿಷೇಕ ಮುಗಿಸಿ ಸಕಲ ಪರಿವಾರ ಸಮೇತರಾಗಿ ಸೀತಾ-ರಾಮರು ಮರಳಿ ಅಯೋಧ್ಯೆಗೆ ಬಂದರು. ಶ್ರೀರಾಮ ಪಟ್ಟಾಭಿಷೇಕ ನಡೆಯಿತು. ಹಾಂ, ನಂತರದ ಉತ್ತರ ರಾಮಾಯಣವೂ ಮುಗಿಯಿತು. ರಮಾನಂದ ಸಾಗರರು ಮನೆ ಮಾತಾದರು. ಅರುಣ ಗೋವಿಲ್ ಮತ್ತು ದೀಪಿಕಾ ಸಾಕ್ಷಾತ್ ಶ್ರೀರಾಮಚಂದ್ರ ಮತ್ತು ಸೀತಾಮಯ್ಯಾ ಆಗಿಹೋದರು. ಹನುಮಂತನ ಪಾತ್ರದಲ್ಲಿ ದಾರಾ ಸಿಂಗ್ ಅವರನ್ನು ಜನ ಅಕ್ಷರಶಃ ಆರಾಧಿಸಿದರು. ಮನೆಗಳಲ್ಲಿ ಪಿತಾಶ್ರೀ, ಹೇ ಮಾತೇ, ಸೀತೇ, ಪುತ್ರ, ಎಂಬ ಸಂಬೋಧನೆಗಳು ಶುರುವಾದವು.
ಇದೆಲ್ಲ ಮುಗಿಯುವ ಹೊತ್ತಿಗೆ ಬೆಳಗಾವಿಯ ಮರಾಠಿ ಪತ್ರಿಕೆ ತರುಣ ಭಾರತದವರು “ರಾಮಾಯಣ ನನಗೇನು ಕೊಟ್ಟಿತು?” (ರಾಮಾಯಣ ನಿ ಮಲಾ ಕಾಯ ದಿಲ?) ಎನ್ನುವ ವಿಷಯದ ಬಗ್ಗೆ ಬರೆಯಲು ಓದುಗರನ್ನು ಆಹ್ವಾನಿಸಿತು. ಮರಾಠಿ ಬರೆಯುವುದಂತೂ ನನಗೆ ಸಾಧ್ಯವಿರಲಿಲ್ಲ. ಕನ್ನಡದಲ್ಲಿ ಬರೆಯಬಹುದಿತ್ತು. ಗಂಭೀರವಾಗಿ ಪರಿಗಣಿಸಿ ಬರೆಯಬೇಕಿದ್ದ ವಸ್ತು-ವಿಷಯದ ಕುರಿತು ನಾನು ಆಗಿನ ನನ್ನ ಕಾಲೇಜಿನ ದಿನಗಳಲ್ಲಿ ಅದೇಕೋ ಒಂದಿಷ್ಟು ತಮಾಷೆಯಾಗಿ ಯೋಚಿಸಿದೆ. ಹಾಗಾಗಿ ಹಾಸ್ಯ ಲೇಖನವೊಂದು ಹುಟ್ಟಿಕೊಂಡಿತು. ಅದನ್ನು ನಮ್ಮ ಬೆಳಗಾವಿಯದೇ ಆದ ನಾಡೋಜ ಪತ್ರಿಕೆಗೆ ಕಳಿಸಿದೆ. ಅವರು ಪ್ರಕಟಿಸಿದರು. “ರಾಮಾಯಣವು ನನಗೇನು ಕಲಿಸಿತೋ ಬಿಟ್ಟಿತೋ ಗೊತ್ತಿಲ್ಲ, ಆದರೆ ಗೃಹಿಣಿಯಾಗಿ (ಆಗ ನಾನು ಕಾಲೇಜಿನಲ್ಲಿ ಕಲಿಯಿತ್ತಿದ್ದೆ) ಅದು ನನಗೆ ಕೆಲವೊಂದು ಅನುಕೂಲಗಳನ್ನು ಮಾಡಿಕೊಟ್ಟಿತು.‌ ಮುಖ್ಯವಾಗಿ ಎಲ್ಲರೂ ಒಂಬತ್ತು ಗಂಟೆಯ ಒಳಗೆ ಸ್ನಾನ ಮಾಡಿಮುಗಿಸುತ್ತಾರೆ. (ಆಗ ಈಗಿನಂತೆ ಸ್ನಾನವನ್ನೇ ತ್ಯಾಗ ಮಾಡಿ ದಿನ ದೂಡುವ ಹುಡುಗರಿದ್ದಿಲ್ಲ. ಹಾಗಾಗಿ ಅದು ನನ್ನ ತಲೆಗೆ ಹೊಳೆದಿರಲಿಲ್ಲ) ತಿಂಡಿಯನ್ನು ಟಿವಿಯ ಮುಂದೆ ಕುಳಿತು ರಾಮಾಯಣ ನೋಡುತ್ತಲೇ ತಿನ್ನುವುದರಿಂದ ಯಾರೂ ಏನೂ ತಕರಾರು ಮಾಡದೇ ಹಾಕಿದ್ದನ್ನು ತಿಂದು ಮುಗಿಸುತ್ತಾರೆ. ಉಪ್ಪು ಕಡಿಮೆ, ಖಾರ ಜಾಸ್ತಿ ಎನ್ನುವ ಕಿರಿಕಿರಿ ತಪ್ಪಿದೆ. ಅದು ಮಾಡಿಲ್ಲ, ಇದು ಮಾಡಿಲ್ಲ ಎನ್ನುವ ಕೊಚ್ಚಾಣವಿಲ್ಲ.” ಹೀಗೇ ಸಾಗಿತ್ತು ನನ್ನ ಹಾಸ್ಯ ಲೇಖನ. ಓದಿದ ಕೆಲವರು ಮೆಚ್ಚಿದರು. ನಾನು ಪ್ರಕಟವಾದ ನನ್ನ ಮೊದಲ ಲೇಖನದ ಬಗ್ಗೆ ಹೆಮ್ಮೆ ಪಟ್ಟಿದ್ದೆ.
ಇಂದು ಮತ್ತೆ ವಿಚಾರ ಮಾಡುತ್ತೇನೆ, ರಾಮಾಯಣ ನನಗೆ (ಅಂದರೆ ನಾವೆಲ್ಲ ಪ್ರೇಕ್ಷಕರಿಗೆ) ಏನು ಕೊಟ್ಟಿದೆ? ಅಂದಿಗೂ ಇಂದಿಗೂ ಮಧ್ಯೆ ಅಖಂಡ ಮೂವತ್ತೆರಡು ವರ್ಷಗಳು ಉರುಳಿ ಹೋಗಿವೆ. ಕಾಲೇಜು ಕನ್ನಿಕೆಯರು ಗೃಹಿಣಿಯರಾಗಿದ್ದಾರೆ. ಅವರ ಮಕ್ಕಳು ಕಾಲೇಜಿನಲ್ಲಿ ಓದುತ್ತಿದ್ದಾರೆ. ಕೆಲವರ ಮಕ್ಕಳ ಮದುವೆಯಾಗಿ ಮೊಮ್ಮಕ್ಕಳು ಕೂಡ ಬಂದಿದ್ದಾರೆ. ತಲೆ ಕೂದಲ ಬಿಳಿ ಕಾಣದಂತೆ ಎಲ್ಲರೂ ಹೇರ್ ಡೈ ಮಾಡಿಕೊಳ್ಳುವ ಗುಟ್ಟು ಎಲ್ಲರಿಗೂ ಗೊತ್ತಿದ್ದರೂ ಎಲ್ಲರೂ ಗುಟ್ಟಾಗಿಯೇ ಇಟ್ಟಿದ್ದಾರೆ. ಗಂಡ-ಹೆಂಡತಿಯರ ಮಧ್ಯೆ ಜಗಳ-ರಾಜಿಗಳು ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ಬಂದು, ನಿಂತು ಹೋಗುವ ಟ್ರೇನುಗಳಷ್ಟೇ ಸಹಜವಾಗಿವೆ. ಅವು ಹೊರಟಾಗಲೆಲ್ಲ ಫಸ್ಟ್ ಗೇಟ್, ಸೆಕೆಂಡ್ ಗೇಟ್, ಥರ್ಡ್ ಗೇಟಗಳು ಮುಚ್ಚಿಕೊಂಡು ಬಿಡುತ್ತವೆ. ಉಳಿದವರು ಅನ್ಯಮಾರ್ಗವಿಲ್ಲದೇ ಅವು ತೆರೆದುಕೊಳ್ಳುವ ತನಕ‌ ಕಾಯುತ್ತ ಗೊಣಗುತ್ತಾರೆ. ಮಧ್ಯೆ ಮಧ್ಯೆ ಅತ್ತೆ-ಮಾವ, ತಾಯಿ-ತಂದೆ, ಮಕ್ಕಳು ಹೀಗೆ ಬೇರೆ ಬೇರೆ ಕಾಂಬಿನೇಷನ್ ಗಳಲ್ಲಿ ಜಗಳಗಳೂ, ಒಳಜಗಳಗಳೂ ಏರ್ಪಟ್ಟು, ಮನೆಯ ವಾತಾವರಣವೆಲ್ಲ ಮಾರ್ಪಟ್ಟು, ಮತ್ತೆ ಸಹಜ ಸ್ಥಿತಿಗೆ ಬರುತ್ತವೆ. ನೌಕರಿಗಳಲ್ಲಿ ನೂರಾರು ತೊಂದರೆಗಳಿವೆ. ಆದರೆ ಇವರೂ ರಾಮನಂತೆ ಧೀರರು. ಇಟ್ಟ ಹೆಜ್ಜೆ ಹಿಂದೆಗೆಯುವುದಿಲ್ಲ. ಯಾರೋ ಯಾರಿಗೋ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಜೋತುಬಿದ್ದಿರುತ್ತಾರೆ. ಅಲ್ಲಾವಳೋ ಮಂಥರೆ ಅತ್ತೆಯ ಕಿವಿಯೂದಿರುತ್ತಾಳೆ. ಇಲ್ಲೊಬ್ಬಳು ತಾಯಿ ಕೈಕೇಯಿ ಆಗಿರುತ್ತಾಳೆ. ಯಾರೋ ಮಾವನನ್ನು ರಾವಣನೆಂದು ಹಾಡ್ಯಾಡಿ ಬಯ್ಯುತ್ತಿರುತ್ತಾರೆ. ಕುಂಭಕರ್ಣ ನಿದ್ರೆಯಿಂದ ಮಕ್ಕಳನ್ನೆಬ್ಬಿಸಲು ತಾಯಂದಿರು ಕಿರುಚಾಡುತ್ತಿರುತ್ತಾರೆ. ಹೆಣ್ಣುಮಗುವಿಗೆ ಸೀತೆ ಎಂದು ಹೆಸರಿಡಲು ಹೊಸದಾಗಿ ಹಡೆದ ತಾಯಿ ಹೆದರುತ್ತಾಳೆ.
ಸಂಸಾರದ ಅನೇಕಾನೇಕ ಜಂಜಾಟಗಳಲ್ಲಿ ಹೀಗೆ ಮೈಮರೆತು ದಂಗಾಗಿ ಹೋದ ಮಹಾಜನಗಳ ಮುಂದೆ ಕೊರೊನಾ ಎಂಬೊಂದು ಕ್ಷುದ್ರ ಅಣು ಕಣ್ಣಿಗೆ ಕಾಣಿಸದೇ ಕೆಣಕುತ್ತದೆ. “ಅಲ್ಲಿ ಚೀನಾದಲ್ಲಿ, ಹಿಂದೆಂದೂ ಕೇಳಿರದ ಊರು, ವುಹಾನ್ ಅಂತೆ, ಅಲ್ಲಿ ಪ್ರಾಣಿಗಳ ಮಾಂಸದ ಮಾರುಕಟ್ಟೆಯಲ್ಲಿ ಹುಟ್ಟಿದ ವೈರಾಣು ಅಲ್ಲಿನವರ ಪ್ರಾಣ ತೆಗೆಯುತ್ತಿದೆಯಂತೆ! ಏನೇನೋ ತಿನ್ನುತ್ತಾರೆ, ಇನ್ನೇನಾಗುತ್ತೆ?” ಇಂಥ ತಣ್ಣಗಿನ ಒಂದು ‌ಪ್ರತಿಕ್ರಿಯೆ ನೀಡಿ ಕೂಲ್ ಆಗಿ ಓಡಾಡಿಕೊಂಡಿದ್ದ ಭಾರತದ ಜನತೆಗೆ ಗಡಿ ದಾಟಿ ಬಂದ ಈ‌ ವಿದೇಶಿ ವೈರಾಣುವಿನ ಖಬರೇ ಇರಲಿಲ್ಲ. ಆದರೆ ಮಾರ್ಚ್ ೨೫ರಿಂದ ಸಂಪೂರ್ಣ ಭಾರತ ಲಾಕ್ ಡೌನ್ ಆಯಿತು. ಸಭೆ-ಸಮಾರಂಭಗಳೆಂದು, ಮದುವೆ-ಮುಂಜಿವೆಗಳೆಂದು, ಅಷ್ಟೇ ಏಕೆ ಕುಬುಸ-ನಾಮಕರಣ ಮುಂತಾದ ಸಣ್ಣ ಪುಟ್ಟ ಕಾರ್ಯಕ್ರಮಗಳಿಗೂ ದಿಲ್ಲಿಯಿಂದ ವಿಮಾನದಲ್ಲಾದರೂ ಬಂದಿಳಿದು ಬಂಧು-ಬಾಂಧವರನ್ನು ಭೆಟ್ಟಿಯಾಗಿ ಮಾತನಾಡಿ ಹೋಗುತ್ತಿದ್ದ ಜನ ಒಮ್ಮೆಲೇ ದಿಕ್ಕೆಟ್ಟು ಹೋದರು. ಗೃಹಬಂಧನವನ್ನು ಕೇಳಿದ್ದರೇ ಹೊರತು ಎಂದೆಂದೂ ಕಂಡರಿಯದ ಜನಸಾಮಾನ್ಯರು ದಿಗಿಲಾದರು. ಮನೆಯಲ್ಲಿಯೇ ಜಗತ್ತನ್ನೆಲ್ಲ ತೋರುವ ಮಾಯಾವಿಗಳು ಪ್ರತಿಯೊಬ್ಬರ ಅಂಗೈಗಳಲ್ಲಿ ಬಂದು ಕುಳಿತಿದ್ದರೂ ಕಂಗಾಲಾಗಿ ಹೋದರು.
ಆದರೆ ಅಲ್ಯಾರೋ ಜಾಣರು ವಿಚಾರ ಮಾಡಿದರು. ಈ ಜನರನ್ನು ಅವರ ಮನಸ್ಸಿಗೆ ನೋವಾಗದಂತೆ, ದೇಹಕ್ಕೆ ತ್ರಾಸಾಗದಂತೆ ಮನೆಯಲ್ಲಿಯೇ ಕಟ್ಟಿಹಾಕಬಹುದು. ಇಡೀ ದಿನ ಅದರದೇ ಧ್ಯಾನದಲ್ಲಿರುವಂತೆಯೂ ಮಾಡಬಹುದು. ಅದು ಸಾಧ್ಯವಾಗಬೇಕೆಂದರೆ ಮತ್ತೊಮ್ಮೆ ಹಳೆಯ ರಾಮಾಯಣ, ಮಹಾಭಾರತ ಸಿರಿಯಲ್ ಗಳನ್ನು ಪ್ರಸಾರ ಮಾಡಬೇಕು. ನೋಡಿ, ಎಷ್ಟೊಂದು ಜಾಣತನದ ನಡೆ!
(ಮುಂದುವರೆಯುತ್ತದೆ) 

Related Articles

Related Articles

Back to top button