*ರಮೇಶ್ ಕತ್ತಿ ಮೀಸೆ ತಿರುವಿದ್ದು ಯಾರಿಗೆ?* *ಕುತೂಹಲ ಮೂಡಿಸಿದ ಪೋಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಡಿಸಿಸಿ ಬ್ಯಾಂಕ್ ಚುನಾವಣೆ ಗಂಭೀರತೆ ಪಡೆಯುತ್ತಿದ್ದ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ, ಮಾಜಿ ಸಂಸದ ರಮೇಶ ಕತ್ತಿ ಮೀಸೆ ತಿರುವುತ್ತಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ!
ಬೆಳಗಾವಿ ಜಿಲ್ಲೆಯಲ್ಲಿ ಈಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ) ಚುನಾವಣೆಯದ್ದೇ ಸದ್ದು, ಸುದ್ದಿ. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಎಂದರೆ ಸದಾ ಸುದ್ದಿಯ ಕೇಂದ್ರವೇ ಆಗುತ್ತದೆ. ಈ ವರ್ಷ ಇದು ಇನ್ನಷ್ಟು ಕುತೂಹಲ ಮೂಡಿಸಿದೆ.
ಈ ಬಾರಿ ಜಾರಕಿಹೊಳಿ ಸಹೋದರರು ಡಿಸಿಸಿ ಬ್ಯಾಂಕ್ ಚುನಾವಣೆಯ ನೇತೃತ್ವ ವಹಿಸಿದ್ದು, ತಮ್ಮದೇ ಗುಂಪಿಗೆ ಬಹುಮತ ಕೊಡಿಸಲು ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಮಾಜಿ ಸಚಿವ, ಬೆಳಗಾವಿ ಹಾಲು ಒಕ್ಕೂಟದ ಚೇರಮನ್ ಬಾಲಚಂದ್ರ ಜಾರಕಿಹೊಳಿ ಈಗಾಗಲೆ 2 ಸುತ್ತಿನ ಪ್ರಚಾರ/ ಪ್ರವಾಸ ಪೂರ್ಣಗೊಳಿಸಿದ್ದಾರೆ.
ಖಾನಾಪುರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಕಣಕ್ಕಿಳಿಯಲು ಕಳೆದ 6 ತಿಂಗಳಿನಿಂದ ತಯಾರಿ ನಡೆಸಿದ್ದರೂ, ಸತೀಶ್ ಜಾರಕಿಹೊಳಿ ತಂತ್ರಗಾರಿಕೆಯಿಂದಾಗಿ ಹಿಂದಕ್ಕೆ ಸರಿಯಬೇಕಾಯಿತು. ಈಗ ಬಹುತೇಕ ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯ ಪ್ರಯತ್ನ ನಡೆಯುತ್ತಿದೆ.
ಅಕ್ಟೋಬರ್ 19ರಂದು ಚುನಾವಣೆ ನಡೆಯಲಿದ್ದು, ಮಾಜಿ ಅಧ್ಯಕ್ಷ, ಮಾಜಿ ಸಂಸದ ರಮೇಶ ಕತ್ತಿ ಗುಂಪಿನ ವಿರುದ್ಧ ಜಾರಕಿಹೊಳಿ ಬೆಂಬಲಿಗರ ಗುಂಪು ಸೆಣಸಾಡಲು ಮುಂದಾಗಿದೆ. ಇದು ರಾಜಕೀಯ ಪಕ್ಷಗಳ ಚುನಾವಣೆ ಅಲ್ಲದಿರುವುದರಿಂದ ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿದ್ದರೂ ಜಾರಕಿಹೊಳಿ ಸಹೋದರರು ಒಟ್ಟಾಗಿ ಪ್ರಯತ್ನ ನಡೆಸಿದ್ದಾರೆ.

ವಿಶೇಷವೆಂದರೆ ಜಾರಕಿಹೊಳಿ ಕುಟುಂಬದಿಂದ ಯಾರಾದರೂ ಸ್ಫರ್ಧಿಸುತ್ತಾರಾ ಅಥವಾ ಕೇವಲ ಸೂತ್ರವನ್ನು ಮಾತ್ರ ಹಿಡಿದುಕೊಳ್ಳುತ್ತಾರಾ ಎನ್ನುವುದು ಇನ್ನೂ ಖಚಿತವಾಗಿಲ್ಲ. ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಬೆಳಗಾವಿ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜಕಾರಣ ರಾಜ್ಯ ಸರಕಾರವನ್ನೇ ಅಲ್ಲಾಡಿಸುವ ಮಟ್ಟಕ್ಕೆ ಸದ್ದು ಮಾಡುತ್ತದೆ. ಈ ಬಾರಿ ಹಿಂದೆಂದಿಗಿಂತ ಹೆಚ್ಚು ಕುತೂಹಲ ಮೂಡಿಸಿದೆ. ಒಳಗಿಂದೊಳಗೆ ಯಾರು, ಯಾರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ತಿಳಿಯದಷ್ಟು ಆಳವಾಗಿ ಚಟುವಟಿಕೆ ನಡೆಯುತ್ತಿದೆ.
ರಮೇಶ ಕತ್ತಿ ಹಾಗೂ ಸತೀಶ್ ಜಾರಕಿಹೊಳಿ ಈಗಾಗಲೆ ಬಹಿರಂಗವಾಗಿ ಆರೋಪ -ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ನೇರ ಸಮರದ ಮಾತುಗಳನ್ನು ಆಡಿದ್ದಾರೆ.
ಇಂತಹ ಸಂದರ್ಭದಲ್ಲಿ ರಮೇಶ ಕತ್ತಿ ಸಾಮಾಜಿಕ ಜಾಲತಾಣದಲ್ಲಿ ಭಾನುವಾರ ಹಾಕಿರುವ ಪೋಸ್ಟ್ ಭಾರೀ ಕುತೂಹಲ ಮೂಡಿಸಿದೆ. ಮೀಸೆ ತಿರುವುತ್ತಿರುವ ಪೋಸ್ಟ್ ಒಂದನ್ನು ಫೇಸ್ ಬುಕ್ ಪೇಜ್ ನಲ್ಲಿ ಹಾಕಿದ್ದು, ಸೆಡ್ಡು ಹೊಡೆಯುವ ರೀತಿಯಲ್ಲಿದೆ ಬಾಡಿ ಲ್ಯಾಂಗ್ವೇಜ್. ಹಲವರು ರಮೇಶ್ ಕತ್ತಿ ಪರವಾಗಿ ಸಾಕಷ್ಟು ಕಮೆಂಟ್ಸ್ ಕೂಡ ಮಾಡುತ್ತಿದ್ದಾರೆ. ಈ ಪೋಸ್ಟ್ ಈಗ ಚರ್ಚೆಯ ವಿಷಯವಾಗಿದೆ.