ಯಡಿಯೂರಪ್ಪ ಸಂಪುಟದಲ್ಲಿ ಯಾರ್ಯಾರಿಗೆ ಸ್ಥಾನ?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಇನ್ನು 3-4 ದಿನದಲ್ಲಿ ರಾಜ್ಯದಲ್ಲಿ ಹೊಸ ಮಂತ್ರಿಮಂಡಳ ಅಸ್ಥಿತ್ವಕ್ಕೆ ಬರಲಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 2 ವಾರಕ್ಕಿಂತ ಹೆಚ್ಚಾಗಿದ್ದರೂ ಸಚಿವಸಂಪುಟ ರಚನೆಯಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಬಿಜೆಪಿ ಹೈಕಮಾಂಡ್ ತಡೆ. ಯಡಿಯೂರಪ್ಪ ದೆಹಲಿವರೆಗೆ ಹೋಗಿ ಬಂದರೂ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.
ಸಚಿವ ಸಂಪುಟ ರಚನೆಯಾಗದ್ದರಿಂದ ಯಡಿಯೂರಪ್ಪ ಏಕಾಂಗಿಯಾಗಿ ಸರಕಾರ ನಡೆಸುತ್ತಿದ್ದಾರೆ. ಪ್ರಸ್ತುತ ರಾಜ್ಯಕ್ಕೆ ಬಂದಿರುವ ಭೀಕರ ಪ್ರವಾಹದಲ್ಲೂ ಅವರು ಒಬ್ಬರೇ ರಾಜ್ಯಸುತ್ತಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿದ್ದಾರೆ. ಪ್ರವಾಹ ಪರಿಸ್ಥಿತಿ ಕಡೆಗೆ ಮೊದಲು ಗಮನ ಕೊಡಿ ನಂತರ ಸಂಪುಟ ವಿಸ್ತರಣೆ ನೋಡೋಣ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿತ್ತು.
ಇದನ್ನೂ ಓದಿ – ಯಡಿಯೂರಪ್ಪ ಸಂಪುಟದಲ್ಲಿ ಬೆಳಗಾವಿಯ ಎಷ್ಟು ಜನರಿಗೆ ಸ್ಥಾನ?
ವಿರೋಧ ಪಕ್ಷಗಳು ಏಕಚಕ್ರಾಧಿಪತ್ಯ ಎಂದು ಟೀಕಿಸುತ್ತಿವೆ. ಯಡಿಯೂರಪ್ಪಗೆ ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಇದ್ದ ಅವಸರ ಮಂತ್ರಿಮಡಳ ರಚಿಸುವಲ್ಲಿ ಇಲ್ಲ ಎಂದೂ ಆರೋಪಿಸುತ್ತಿವೆ. ರಾಜ್ಯದಲ್ಲಿ ಇಂತಹ ಭೀಕರ ಪ್ರವಾಹ ನೋಡಲು ಸಚಿವರೇ ಇಲ್ಲ. ಜನರ ಸಂಕಷ್ಟ ಕೇಳುವವರಿಲ್ಲ ಎಂದೂ ಕಾಂಗ್ರೆಸ್, ಜೆಡಿಎಸ್ ತರಾಟೆಗೆ ತೆಗೆದುಕೊಳ್ಳುತ್ತಿವೆ.
2 ಪಟ್ಟಿ
ಇವೆಲ್ಲದರ ನಂತರ ಇದೀಗ ಪ್ರವಾಹ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ದೆಹಲಿಯತ್ತ ಮುಖ ಮಾಡಿದ್ದಾರೆ. ಶುಕ್ರವಾರ ಅವರು ನವದೆಹಲಿಯಲ್ಲಿ ಹೈಕಮಾಂಡ್ ಜೊತೆ ಚರ್ಚಿಸಲಿದ್ದಾರೆ. ಪ್ರಗತಿವಾಹಿನಿಗೆ ಬಂದಿರುವ ಮಾಹಿತಿಯ ಪ್ರಕಾರ ಯಡಿಯೂರಪ್ಪ ಈಗಾಗಲೆ 2 ಸಂಬಾವ್ಯ ಸಚಿವರ ಪಟ್ಟಿಗಳನ್ನು ಹೈಕಮಾಂಡ್ ಅಂಗಳಕ್ಕೆ ತಲುಪಿಸಿದ್ದಾರೆ. ಅವುಗಳಲ್ಲಿ ಯಾವುದಕ್ಕೆ ಒಪ್ಪಿಗೆ ಸಿಗುತ್ತದೆ ಕಾದು ನೋಡಬೇಕಿದೆ.
ಮಾಹಿತಿಯ ಪ್ರಕಾರ ಸಚಿವರನ್ನಾಗಿ ತೆಗೆದುಕೊಳ್ಳಲೇಬೇಕಾದವರ ಒಂದು ಪಟ್ಟಿ ಮತ್ತು 2ನೇ ಹಂತದ ಇನ್ನೊಂದು ಪಟ್ಟಿಯನ್ನು ಯಡಿಯೂರಪ್ಪ ದೆಹಲಿಗೆ ತೆಗೆದುಕೊಂಡು ಹೋಗಿದ್ದಾರೆ. ಹೈಕಮಾಂಡ್ ಅಳೆದು ತೂಗಿ ಸಚಿವಸಂಪುಟ ರಚನೆಗೆ ಅಂತಿಮ ಒಪ್ಪಿಗೆ ನೀಡಲಿದೆ. ಹೈಕಮಾಂಡ್ ಕೇವಲ ಸೀನಿಯಾರಿಟಿ ನೋಡುವ ಬದಲು ಕ್ರಿಯಾಶಾಲತೆ, ಕ್ಲೀನ್ ಇಮೇಜ್, ಪಕ್ಷ ನಿಷ್ಠೆ ಮೊದಲಾದ ಅಂಶಗಳನ್ನು ಸಹ ನೋಡಲಿದೆ.
ಅನರ್ಹರಿಗೆ ಸಧ್ಯಕ್ಕಿಲ್ಲ
ಕಾಂಗ್ರೆಸ್, ಜೆಡಿಎಸ್ ನಿಂದ ಹೊರಗೆ ಬಂದು ಸರಕಾರ ಬೀಳಲು ಕಾರಣರಾದ ಶಾಸಕರನ್ನು ಅಂದಿನ ಸ್ಪೀಕರ್ ರಮೇಶ ಕುಮಾರ ನಿರ್ಗಮಿಸುವ ಮುನ್ನವೇ ಅನರ್ಹಗೊಳಿಸಿ ಹೋಗಿದ್ದಾರೆ. ಇದರಿಂದಾಗಿ ಅವರೆಲ್ಲ ಸಚಿವಸಂಪುಟ ಸೇರದಂತಾಗಿದೆ.
ಇದನ್ನೂ ಓದಿ – ಯಡಿಯೂರಪ್ಪ ಕರೆಯ ಮೇರೆಗೆ ಬೆಂಗಳೂರಿಗೆ ತೆರಳಿದ ಬಾಲಚಂದ್ರ ಜಾರಕಿಹೊಳಿ
ಹಾಗಾಗಿ, ಅನರ್ಹ ಶಾಸಕರಿಗೆ ಸಧ್ಯಕ್ಕೆ ಸಚಿವಸ್ಥಾನ ಸಿಗುವುದಿಲ್ಲ. ಸುಪ್ರಿಂ ಕೋರ್ಟ್ ನಲ್ಲಿ ಅವರು ತಡೆಯಾಜ್ಞೆ ತಂದಲ್ಲಿ ಅವರಲ್ಲಿ ಕೆಲವರನ್ನು ಸೇರಿಸಿಕೊಳ್ಳುವ ಇಚ್ಛೆ ಬಿಜೆಪಿಗಿತ್ತು. ಆದರೆ ತಡೆಯಾಜ್ಞೆ ಸಿಗದಿರುವುದರಿಂದ ಅಂತಿಮ ತೀರ್ಪು ಬರುವವರೆಗೂ ಅವರಿಗೆ ಮಂತ್ರಿಯಾಗುವ ಅವಕಾಶವಿಲ್ಲ.
ಆದಾಗ್ಯೂ ಯಾವುದೇ ಕ್ಷಣದಲ್ಲಿ ಸುಪ್ರಿಂ ಕೋರ್ಟ್ ತೀರ್ಪು ಬಂದಲ್ಲಿ ಅವರನ್ನು ಸೇರಿಸಿಕೊಳ್ಳಲು ಅವಕಾಶವಿರುವ ರೀತಿಯಲ್ಲಿ ಯಡಿಯೂರಪ್ಪ ಸಂಪುಟ ರಚಿಸಲಿದ್ದಾರೆ. ಮೊದಲ ಹಂತದಲ್ಲಿ ಕೇವಲ 15-18 ಜನರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.
ಯಾರ್ಯಾರಿಗೆ ಸ್ಥಾನ?
ಯಡಿಯೂರಪ್ಪ ಸಂಪುಟಕ್ಕೆ ಯಾರ್ಯಾರು ಸೇರಲಿದ್ದಾರೆ ಎನ್ನುವ ಕುತೂಹಲ ತೀವ್ರವಾಗಿದೆ. ಅದರಲ್ಲಿ 3-4ನೇ ಬಾರಿ ಶಾಸಕರಾಗಿರುವವರ ಆಸೆ ಚಿಗುರಿದೆ.
ಕೆ.ಎಸ್.ಈಶ್ವರಪ್ಪ, ಉಮೇಶ ಕತ್ತಿ, ಆರ್.ಅಶೋಕ, ಜಗದೀಶ ಶೆಟ್ಟರ್, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಬೋಪಯ್ಯ, ಬಾಲಚಂದ್ರ ಜಾರಕಿಹೊಳಿ, ವಿ.ಸೋಮಣ್ಣ, ಜೆ.ಸಿ.ಮಧುಸ್ವಾಮಿ, ಸುರೇಶ ಕುಮಾರ, ಬಿ.ಶ್ರೀರಾಮುಲು, ಸಿ.ಟಿ.ರವಿ, ಡಾ.ಅಶ್ವತ್ಥ ನಾರಾಯಣ, ರೇಣುಕಾಚಾರ್ಯ, ಶಿವನಗೌಡ ನಾಯಕ್, ಕೋಟ ಶ್ರೀನಿವಾಸ ಪೂಜಾರಿ ಹೆಸರುಗಳು ಸಂಪುಟ ಸೇರುವ ಮೊದಲ ಮತ್ತು ಕಡ್ಡಾಯ ಪಟ್ಟಿಯಲ್ಲಿವೆ.
ಮಹಿಳಾ ಕೋಟಾದಲ್ಲಿ ಶಶಿಕಲಾ ಜೊಲ್ಲೆ ಹೆಸರಿದೆ. ಆದರೆ ಜಿಲ್ಲಾ ಲೆಕ್ಕಾಚಾರದಲ್ಲಿ ಬೆಳಗಾವಿಗೆ 3 ಸ್ಥಾನ ಕೊಟ್ಟಂತಾಗುತ್ತದೆ ಎನ್ನುವ ಕಾರಣದಿಂದ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.
ಇನ್ನಷ್ಟು ಹೆಸರು
ಇದರ ಜೊತೆಗೆ ಜೈನ್ ಕೋಟಾದಲ್ಲಿ ಅಭಯ ಪಾಟೀಲ ಹೆಸರಿದೆ. ಇವರಿಗೂ ಜಿಲ್ಲಾ ಕೋಟಾ ಅಡ್ಡಿ ಬರುವ ಸಾಧ್ಯತೆ ಇದೆ. ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಡಚಿ ಶಾಸಕ ಪಿ.ರಾಜೀವ, ಪ್ರೀತಂ ಗೌಡ, ಎಸ್.ಅಂಗಾರ, ವೀರಣ್ಣ ಚಿರಂತಿಮಠ, ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಉದಾಸಿ, ಕುಮಾರ ಬಂಗಾರಪ್ಪ ಅವರ ಹೆಸರು ಸಹ ಸಂಭಾವ್ಯರ ಪಟ್ಟಿಯಲ್ಲಿದೆ.
ಕೆಲವರಿಗೆ ನಿಗಮ ಮಂಡಳಿ, ಸಂಸದೀಯ ಕಾರ್ಯದರ್ಶಿ ಸ್ಥಾನ ನೀಡಿ ಸಮಾಧಾನಪಡಿಸುವ ಸಾಧ್ಯತೆಯೂ ಇದೆ. ಅನರ್ಹ ಶಾಸಕರಿಗೆ ಸುಪ್ರಿಂ ಕೋರ್ಟ್ ಕ್ಲೀನ್ ಚಿಟ್ ನೀಡಿದರೆ ರಮೇಶ ಜಾರಕಿಹೊಳಿ ಉಪಮುಖ್ಯಮಂತ್ರಿಯಾಗುವುದು ಖಚಿತ. ಆಗ ಪುನ್ಃ ಬೆಳಗಾವಿ ಜಿಲ್ಲಾ ಕೋಟಾವನ್ನು ಬ್ಯಾಲೆನ್ಸ್ ಮಾಡಬೇಕಾಗುತ್ತದೆ. ರಮೇಶ ಜಾರಕಿಹೊಳಿ ಜೊತೆಗೆ ಬಂದಿರುವ ಶ್ರೀಮಂತ ಪಾಟೀಲ ಮತ್ತು ಮಹೇಶ ಕುಮಟಳ್ಳಿಗೆ ನಿಗಮ ಮಂಡಳಿ ನೀಡಬಹುದು.
ಹೈಕಮಾಂಡ್ ನಿರ್ಣಯ ಅಂತಿಮ
ಮುಖ್ಯಮಂತ್ರಿ ಯಡಿಯೂರಪ್ಪ ಏನೇ ಪಟ್ಟಿ ತೆಗೆದುಕೊಂಡು ಹೋದರೂ ಬಿಜೆಪಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಪಕ್ಷದ ಇಮೇಜ್ ಗೆ ಧಕ್ಕೆ ಬಾರದ ರೀತಿಯಲ್ಲಿ ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳಲಿದೆ. ಯಡಿಯೂರಪ್ಪ ಲೆಕ್ಕಾಚಾರ ಒಂದಿದ್ದರೆ, ಹೈಕಮಾಂಡ್ ಲೆಕ್ಕಾಚಾರವೇ ಬೇರೆ ಇರಲಿದೆ. ಯಡಿಯೂರಪ್ಪ ಈಗಾಗಲೆ ಕೆಲವರಿಗೆ ಮಾತುಕೊಟ್ಟಿದ್ದರೂ ಅಂತವರಿಗೆ ಬೇರೆ ರೀತಿಯಯಲ್ಲಿ ಸಮಾಧಾನಪಡಿಸಬೇಕಾದ ಅನಿವಾರ್ಯತೆ ಬರಬಹುದು.
ಯಾವುದಕ್ಕೂ ಇನ್ನು 2-3 ದಿನದಲ್ಲಿ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ. ಸಚಿವರಾಗುವ ಅದೃಷ್ಟ ಯಾರ್ಯಾರಿಗಿದೆ ಎನ್ನುವುದು ಬಹಿರಂಗವಾಗಲಿದೆ.
ಆಗಸ್ಟ್ 15 ರ ಬಳಿಕ ಸಂಪುಟ ವಿಸ್ತರಣೆ
ರಾಜ್ಯ ಸಚಿವ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ