*ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ತಿರುಗಿಬಿದ್ದಿದ್ದು ಯಾಕೆ?*: *ಇದೊಂದೇ ಕಾರಣಕ್ಕೆ ದೂರವಾದ್ರಾ ದರ್ಶನ್ ಬಂಟ ಹಾಗೂ ಪತ್ನಿ*

ಪ್ರಗತಿವಾಹಿನಿ ಸುದ್ದಿ: ನಟ ದರ್ಶನ್ ಜೈಲು ಸೇರಿದ ದಿನಗಳಿಂದ ಕುಟುಂಬದ ಜೊತೆ ನಿಂತಿದ್ದ ನಟ ಧನ್ವೀರ್ ಗೌಡ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ಮನಸ್ತಾಪ ಈಗ ಬಹಿರಂಗವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪರೋಕ್ಷವಾಗಿ ನಡೆಯುತ್ತಿದ್ದ ವಾಕ್ಸಮರ ಪೊಲೀಸ್ ಠಾಣೆ ತಲುಪಿದ್ದು, ಎರಡೂ ಕಡೆಯಿಂದ ದೂರುಗಳು ದಾಖಲಾಗಿವೆ. ಈ ಬೆಳವಣಿಗೆ ಸ್ಯಾಂಡಲ್ವುಡ್ನಲ್ಲಿ ಕುತೂಹಲ ಮೂಡಿಸಿದೆ.
ಧನ್ವೀರ್ ಗೌಡ ತಮ್ಮ ಮೊಬೈಲ್ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿಜಯಲಕ್ಷ್ಮಿ ಪಿಎ ನಾಗರಾಜ್ ಆರ್ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಇತ್ತ ಧನ್ವೀರ್ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ, ಧನ್ವೀರ್ ತಂದೆ ತಿಮ್ಮೇಗೌಡ ಕೂಡ ವಿಜಯಲಕ್ಷ್ಮಿ ಮತ್ತು ತಂಡದ ವಿರುದ್ಧ ಪ್ರತಿದೂರು ನೀಡಿದ್ದಾರೆ. ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿಜಯಲಕ್ಷ್ಮಿ, ಮ್ಯಾನೇಜರ್ ನಾಗರಾಜ್, ಭೋಜ ಮತ್ತು ಬಾಟಲಿ ಪ್ರಮೋದ್ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ ಬಳಿಕ ಧನ್ವೀರ್ ಹಲವು ಬಾರಿ ವಿಜಯಲಕ್ಷ್ಮಿ ಜೊತೆ ಜೈಲಿಗೆ ಭೇಟಿ ನೀಡಿದ್ದರು. ದರ್ಶನ್ ಪರವಾಗಿ ನಿಂತಿದ್ದ ಧನ್ವೀರ್ ಮತ್ತು ದರ್ಶನ್ ಕುಟುಂಬದ ನಡುವೆ ಕಾನೂನು ಹೋರಾಟದ ಸಂದರ್ಭದಲ್ಲೇ ಮನಸ್ತಾಪ ಆರಂಭವಾಗಿತ್ತು. ಈ ವೈಯಕ್ತಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಧನ್ವೀರ್ ನಾಗರಾಜ್ಗೆ ಕರೆ ಮಾಡಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನಾಗರಾಜ್ ನೀಡಿದ ದೂರನ್ನು ಪೊಲೀಸರು ಎನ್ಸಿ ಪ್ರಕರಣವಾಗಿ ದಾಖಲಿಸಿಕೊಂಡಿದ್ದಾರೆ. ಧನ್ವೀರ್ಗೆ ವಿಚಾರಣೆಗೆ ಹಾಜರಾಗುವಂತೆ ಆರ್ಆರ್ ನಗರ ಪೊಲೀಸರು ನೋಟಿಸ್ ನೀಡಿದ್ದಾರೆ ಎನ್ನಲಾಗಿದ್ದು, ರೌಡಿಶೀಟರ್ಗಳನ್ನು ಕರೆಸಿ ಹೊಡೆಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ಕುರಿತು ಮಾಹಿತಿ ಪಡೆಯುವ ಸಾಧ್ಯತೆಯಿದೆ.
ಧನ್ವೀರ್ ಮನೆಗೆ ತೆರಳಿ ಬೆದರಿಕೆ ಹಾಕಿದ ಆರೋಪದ ಸಂಬಂಧ ವಿಜಯಲಕ್ಷ್ಮಿಗೂ ನೋಟಿಸ್ ನೀಡಿರುವ ಬಗ್ಗೆ ವರದಿಯಾಗಿದೆ. ರಾಜಾಜಿನಗರ ಪೊಲೀಸರು ವಿಜಯಲಕ್ಷ್ಮಿಗೆ ನೋಟಿಸ್ ನೀಡಿದ್ದು, ಎರಡೂ ಕಡೆಯಿಂದ ಬಂದಿರುವ ದೂರುಗಳ ಕುರಿತು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ದರ್ಶನ್ ಸಂಕಷ್ಟದಲ್ಲಿದ್ದಾಗ ಧನ್ವೀರ್ ಪರಪ್ಪನ ಅಗ್ರಹಾರ ಮತ್ತು ಬಳ್ಳಾರಿ ಜೈಲಿಗೆ ಭೇಟಿ ನೀಡುತ್ತಿದ್ದರು. ವಿಜಯಲಕ್ಷ್ಮಿ ಜೊತೆಗೂ ಹಲವು ಬಾರಿ ಜೈಲಿಗೆ ತೆರಳಿದ್ದ ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವೆ ಈಗ ಇಷ್ಟೊಂದು ಭಿನ್ನಾಭಿಪ್ರಾಯ ಉಂಟಾಗಲು ಕಾರಣವೇನು ಎಂಬ ಪ್ರಶ್ನೆ ಮೂಡಿದೆ. ಸದ್ಯ ದೂರುಗಳ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



