
ಎಂ.ಕೆ.ಹೆಗಡೆ, ಗೋಕಾಕ -ಈ ಬಾರಿ ರಾಜ್ಯದ ಗಮನವನ್ನೇ ತನ್ನತ್ತ ಸೆಳೆದಿರುವುದು ಗೋಕಾಕ ವಿಧಾನಸಭಾ ಕ್ಷೇತ್ರ. ಇದಕ್ಕೆ ಕಾರಣ 2. ಮೊದಲನೆಯದಾಗಿ ರಾಜ್ಯದಲ್ಲಿದ್ದ ಸಮ್ಮಿಶ್ರ ಸರಕಾರ ಕೆಡವಲು ನೇತೃತ್ವ ವಹಿಸಿದ್ದ ರಮೇಶ ಜಾರಕಿಹೊಳಿ ಇಲ್ಲಿ ಸ್ಪರ್ಧಿಸುತ್ತಿರುವುದು. ಮತ್ತೊಂದು ಜಾರಕಿಹೊಳಿ ಸಹೋದರರ ಮಧ್ಯೆ ಸ್ಪರ್ಧೆ ಏರ್ಪಟ್ಟಿರುವುದು.
ಹಾಗಾಗಿ ಗೋಕಾಕ ಹೈ ವೋಲ್ಟೇಜ್ ಕ್ಷೇತ್ರವಾಗಿ ಪರಿವರ್ತನೆಯಾಗಿದೆ. ಈ ಹಿಂದಿನ ಚುನಾವಣೆಗಳಲ್ಲಿ ರಮೇಶ ಜಾರಕಿಹೊಳಿ ಕಾಂಗ್ರೆಸ್ ನಿಂದ ಗೆಲ್ಲುತ್ತ ಬಂದಿದ್ದರೂ ಚುನಾವಣೆಯ ತಂತ್ರಗಾರಿಕೆಯನ್ನೆಲ್ಲ ಮಾಡುತ್ತಿದ್ದವರು ಲಖನ್ ಜಾರಕಿಹೊಳಿ ಎನ್ನುವ ಮಾತಿದೆ. ಆದರೆ ಈ ಬಾರಿ ಅದೇ ಲಖನ್ ಜಾರಕಿಹೊಳಿ ಪ್ರತಿಸ್ಪರ್ಧಿಯಾಗಿದ್ದಾರೆ.
ಈ ಕ್ಷೇತ್ರದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿರುವವರು ಲಿಂಗಾಯತರು. ಆ ಸಮಾಜದ ಅಶೋಕ ಪೂಜಾರಿ ಈ ಬಾರಿ ಜೆಡಿಎಸ್ ನಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿಯಲ್ಲಿದ್ದ ಅಶೋಕ ಪೂಜಾರಿ ಕೊನೆಯ ಕ್ಷಣದಲ್ಲಿ ಪಕ್ಷ ತ್ಯಜಿಸಿ ಜೆಡಿಎಸ್ ನಿಂದ ಸ್ಪರ್ಧಿಸಿರುವುದು ರಮೇಶ್ ಜಾರಕಿಹೊಳಿಗೆ ಶಾಕ್ ನೀಡಿದೆ.
ಲಿಂಗಾಯತರೆಲ್ಲ ಒಂದಾದರೆ ಜಾರಕಿಹೊಳಿ ಸಹೋದರರಿಗೆ ಸಂಕಷ್ಟ ತಪ್ಪಿದ್ದಲ್ಲ. ಇದಕ್ಕಾಗಿಯೇ ನಾಮಪತ್ರ ಸಲ್ಲಿಸಿದಾಗಿನಿಂದ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಆ ಮಾತನ್ನು ಒತ್ತಿ ಒತ್ತಿ ಹೇಳುತ್ತಿರುವುದು. ಇದು ಲಿಂಗಾಯತ ಮತಗಳು ಕೈತಪ್ಪುವುದನ್ನು ತಡೆಯುವುದಕ್ಕೆ ಸಹಕಾರಿಯಾಗಲಿದೆ ಎನ್ನುವುದು ಅವರ ಲೆಕ್ಕಾಚಾರ.
ಏನದು ಆ ಮಾತು?
ರಾಜ್ಯದಲ್ಲಿದ್ದ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ಕೆಡವಿ ಬಿಜೆಪಿ ಸರಕಾರ ತಂದಿರುವುದರಲ್ಲಿ ರಮೇಶ ಜಾರಕಿಹೊಳಿ ಪಾತ್ರ ಅತ್ಯಂತ ಪ್ರಮುಖವಾಗಿದೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಯಾರಿಗೂ ಗೊತ್ತಿಲ್ಲದ ಮಾತನ್ನು ಈಗ ರಮೇಶ್ ಹೊರಹಾಕಿದ್ದಾರೆ. ಅದೇನೆಂದರೆ, ಅಮಿತ್ ಶಾ ತಮ್ಮನ್ನು ಮಾತುಕತೆ ಕರೆದಾಗ, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವುದಾದರೆ ಮಾತ್ರ ನಾವು ಬೆಂಬಲ ನೀಡಲು ಸಿದ್ಧ ಎಂದು ಹೇಳಿದ್ದೆ ಎನ್ನುವುದು.
ಅಂದರೆ ಲಿಂಗಾಯತ ನಾಯಕ ಯಡಿಯೂರಪ್ಪನವರನ್ನೇ ಮುಖ್ಯಮಂತ್ರಿ ಮಾಡಬೇಕೆನ್ನುವ ಷರತ್ತನ್ನು ಅಮಿತ್ ಶಾ ಮುಂದೆ ಇಟ್ಟಿದ್ದೆ. ಹಾಗಾಗಿ ರಾಜ್ಯದಲ್ಲಿ ಲಿಂಗಾಯತ ಸರಕಾರ ಅಸ್ತಿತ್ವಕ್ಕೆ ಬರಲು ರಮೇಶ್ ಜಾರಕಿಹೊಳಿ ಕಾರಣ ಎನ್ನುವ ಸಂದೇಶವನ್ನು ಲಿಂಗಾಯತ ಸಮಾಜಕ್ಕೆ ತಲುಪಿಸಬೇಕಿತ್ತು. ತನ್ಮೂಲಕ ಲಿಂಗಾಯತ ಮತ ಅಶೋಕ ಪೂಜಾರಿಗೆ ಹೋಗುವುದನ್ನು ತಡೆಯುವ ಪ್ರಯತ್ನವನ್ನು ರಮೇಶ್ ಜಾರಕಿಹೊಳಿ ಮಾಡುತ್ತಿದ್ದಾರೆ.
ಬಾಲಚಂದ್ರ ತಂತ್ರಗಾರಿಕೆ
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಮಾಜಿ ಸಚಿವ, ಬಿಜೆಪಿಯ ಪ್ರಭಾವಿ ನಾಯಕ ಬಾಲಚಂದ್ರ ಜಾರಕಿಹೊಳಿ ಸಹ ಈ ಮಾತನ್ನು ಒತ್ತಿ ಒತ್ತಿ ಹೇಳಿದ್ದಾರೆ. ಲಿಂಗಾಯತ ಸಮುದಾಯದ ನಾಯಕ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿ, ಬಿಜೆಪಿ ಸರಕಾರ ಬರಲು ರಮೇಶ ಜಾರಕಿಹೊಳಿ ಕಾರಣರಾಗಿದ್ದಾರೆ. ಹಾಗಾಗಿ ಲಿಂಗಾಯತ ಮತಗಳು ರಮೇಶ್ ಜಾರಕಿಹೊಳಿ ಅವರಿಗಲ್ಲದೆ ಬೇರೆ ಯಾರಿಗೂ ಹೋಗಲು ಸಾಧ್ಯವಿಲ್ಲ ಎಂದು ಬಾಲಚಂದ್ರ ಹೇಳಿದ್ದಾರೆ.
ಯಡಿಯೂರಪ್ಪ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಮಾತಿಗೆ ಆ ಸಮುದಾಯದಲ್ಲಿ ಸಾಕಷ್ಟು ಬೆಲೆ ಇದೆ. ಹಾಗಾಗಿ ಅವರು ಸಧ್ಯದಲ್ಲೇ ಗೋಕಾಕದಲ್ಲಿ ಚುನಾವಣೆ ಪ್ರಚಾರ ಭಾಷಣ ಮಾಡಲಿದ್ದಾರೆ. ಅವರು ನೀಡುವ ಸಂದೇಶ ಲಿಂಗಾಯತ ಸಮುದಾಯದ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರಲಿದೆ ನೋಡಬೇಕಿದೆ.
ಚುನಾವಣೆ ರಾಜಕೀಯ ತಂತ್ರಗಾರಿಕೆಯಲ್ಲಿ ಬಾಲಚಂದ್ರ ಜಾರಕಿಹೊಳಿ ನಿಸ್ಸೀಮರು. ಯಾವ ಸಂದರ್ಭದಲ್ಲಿ ಯಾವ ದಾಳ ಉರುಳಿಸಬೇಕೆನ್ನುವುದನ್ನು ಅವರು ಚೆನ್ನಾಗಿ ಬಲ್ಲರು. ಈಗಲೂ ಅಂತಹುದೇ ದಾಳವನ್ನು ಅವರು ಉರುಳಿಸಿದ್ದಾರೆ. ಇದು ಎಷ್ಟರಮಟ್ಟಿಗೆ ಕೆಲಸ ಮಾಡುತ್ತದೆ ಕಾದು ನೋಡಬೇಕಿದೆ.
ಸಂಬಂಧಿಸಿದ ಸುದ್ದಿಗಳು –
ಸಂಧಾನ ಯತ್ನ ಫಲ ನೀಡಲಿಲ್ಲ : ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕದಲ್ಲಿ ಸತೀಶ್ ಜಾರಕಿಹೊಳಿ ಹೊಸ ಬಾಂಬ್
ಲಕ್ಷ್ಮಿ ಹೆಬ್ಬಾಳಕರ್ ಗೆ ಯಾವ ಸ್ಥಾನವನ್ನೂ ಕೊಡಬಾರದೆಂದು ಕಂಡೀಷನ್ ಹಾಕಿದ್ದೆ -ರಮೇಶ್ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ