ಗಿರೀಶ್ ಭಟ್
ನಮಗೆಲ್ಲ ಶಾಲೆಯಲ್ಲಿ ಓದುವಾಗ ಭಗವದ್ಗೀತೆಯನ್ನು ಕಲಿಸಲಿಲ್ಲವೇಕೆ? ಎನ್ನುವ ಪ್ರಶ್ನೆ ಬಹಳ ದಿನಗಳಿಂದ ಕಾಡುತ್ತಿತ್ತು. ಇತಿಹಾಸ ಪುಸ್ತಕದಲ್ಲಿ ಯಾವ ಯಾವ ರಾಜರ ನಡುವೆ ಯುದ್ಧಗಳಾದವು, ಎಷ್ಟನೇ ಇಸವಿಯಲ್ಲಿ ಯುದ್ಧ ಸಂಭವಿಸಿತು. ಇದು ಪ್ರಾಥಮಿಕ ಶಾಲೆಯಿಂದ ಹಿಡಿದು ಐಎಎಸ್, ಕೆಎಎಸ್ ಹಂತದವರೆಗೂ ನೆನಪಿಟ್ಟುಕೊಳ್ಳಬೇಕಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಪದೇ ಪದೆ ಆ ರಾಜರುಗಳ ಇತಿಹಾಸವನ್ನು ಓದುತ್ತಲೇ ಇರಬೇಕಾಗುತ್ತದೆ. ಅಂತೂ ಐಎಎಸ್, ಕೆಎಎಸ್ ಪಾಸ್ ಮಾಡಿ ಒಳ್ಳೆಯ ಸರ್ಕಾರಿ ನೌಕರಿ ಸಿಕ್ಕಿತು. ಇನ್ನೇನು ರಾಜ-ಮಹಾರಾಜರ ಪುರಾಣ ತಪ್ಪಿತು ಎನ್ನುವಂತಿಲ್ಲ. ಏಕೆಂದರೆ ನಮ್ಮ ಮಕ್ಕಳು ಶಾಲೆಗೆ ಹೋಗುತ್ತಿರುತ್ತಾರಲ್ಲ. ಮಕ್ಕಳಿಗೆ ನಾವು ಮನೆಯಲ್ಲಿ ಪಾಠ ಮಾಡುತ್ತಿರುವಾಗ ಮತ್ತೆ ಅದೆ ರಾಜ -ಮಹಾರಾಜರುಗಳ ಕಾಟ ಶುರುವಾಗುತ್ತದೆ. ಹೀಗಿದೆ ನಮ್ಮ ದೇಶದ ಶೈಕ್ಷಣಿಕ ಪದ್ಧತಿ. ನಮ್ಮ ದೇಶದಲ್ಲಿ ಹೆಸರಿಗೆ ಬಹುಸಂಖ್ಯಾತ ಧರ್ಮವೊಂದರ ಧರ್ಮಗ್ರಂಥವೇ ಶಿಕ್ಷಣದಲ್ಲಿ ಸೇರಿಸಲಾಗಲಿಲ್ಲ. ಇದು ಜಗತ್ತಿನಲ್ಲಿ ಎಲ್ಲೂ ಕಾಣಲು ಸಿಗದೆ ನಮ್ಮ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯವೇನೊ? ನ್ಯಾಯಾಲಯಗಳಲ್ಲಿ ಮೊದಲು ಭಗವದ್ಗೀತೆಯನ್ನು ಮುಟ್ಟಿ ನಾನು ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನು ಬಿಟ್ಟು ಬೇರೇನೂ ಹೇಳುವುದಿಲ್ಲ ಎಂದು ಪ್ರಮಾಣ ಮಾಡುತ್ತಾರಲ್ಲ. ಕೋರ್ಟಿನಲ್ಲಿ ಈ ಪ್ರಮಾಣ ಮಾಡುವಾಗ ಭಗವದ್ಗೀತೆಯನ್ನೇ ಅರಿಯದ ಅದೆಷ್ಟು ಜನರಿರುತ್ತಾರೊ? ಹಾಗಾದರೆ ಭಗವದ್ಗೀತೆಯನ್ನು ಅರಿಯದ ಜನರು ನ್ಯಾಯಾಲಯದಲ್ಲಿ ಭಗವದ್ಗೀತೆ ಮುಟ್ಟಿ ಪ್ರಮಾಣ ಮಾಡುವುದೂ ಒಂದು ಅಪರಾಧವೇ ಅಲ್ಲವೆ? ನಮ್ಮ ದೇಶದಲ್ಲಿ ಪ್ರಾಥಮಿಕ ಹಂತದಲ್ಲಿಯೇ ಅಂದರೆ ಶೈಕ್ಷಣಿಕ ಹಂತದಲ್ಲಿ ಭಗವದ್ಗೀತೆಯನ್ನು ಮಕ್ಕಳಿಗೆ ಕಲಿಸಿದರೆ ಏನಾಗುತ್ತಿತ್ತು? ಈಗಿನ ಮಕ್ಕಳು ಟಿವಿಯಲ್ಲಿ ಬರುವ ಮಹಾಭಾರತವನ್ನು ನೋಡಿಯಾದರೂ ಅಲ್ಪ-ಸ್ವಲ್ಪ ಭಗವದ್ಗೀತೆಯನ್ನು ಅರೀತಾರು! ಆದರೆ ಟಿವಿ ಚ್ಯಾನೆಲ್ ಭರಾಟೆಯ ಮೊದಲಿನವರು ಹೇಗೆ ಅರಿತಾರು? ಭಗವದ್ಗೀತೆಯನ್ನು ಕೃಷ್ಣ ಅರ್ಜುನನಿಗೆ ಮಹಾಭಾರತ ಯುದ್ಧ ಸಂದರ್ಭದಲ್ಲಿ ವಿವರಿಸಿದ ಎಂದು ಮನೆಯಲ್ಲಿ ಹಿರಿಯರ ಮೂಲಕವೋ/ ಯಕ್ಷಗಾನದ ಮೂಲಕವೋ ನಾವು ತಿಳಿದುಕೊಳ್ಳಬೇಕಾಗಿತ್ತು. ನಮ್ಮ ಸನಾತನ ಧರ್ಮ ಒಂದು ಧರ್ಮವಲ್ಲ, ಅದು ಒಂದು ಜೀವನದ ಪದ್ಧತಿ. ಕೇವಲ ಭಗವದ್ಗೀತೆಯೊಂದೇ ಅಲ್ಲ. ನಮ್ಮ ಧರ್ಮದಲ್ಲಿ ಅದೆಷ್ಟೋ ಸಂಖ್ಯೆಯ ಪುರಾಣ ಕಥೆ -ಗ್ರಂಥಗಳಿವೆ. ಅವುಗಳ್ನು ಅರಿಯುವುದಂತೂ ದೂರದ ಮಾತಾಯಿತು.
ಭಾರತದಲ್ಲಿ ನಮ್ಮ ಧರ್ಮದ ಬಗ್ಗೆ, ಧರ್ಮಗ್ರಂಥಗಳ ಬಗ್ಗೆ ಕೀಳರಿಮೆ/ತಾತ್ಸಾರ ಇರುವವರೇ ಹೆಚ್ಚಿದ್ದಾರೆ. ನಮ್ಮ ಧರ್ಮದ ಪುರಾಣ ಕಥೆಗಳಾವವೂ ನಡೆದೇ ಇಲ್ಲ/ ಅದು ಕಟ್ಟು ಕಥೆ ಎಂದು ವಾದಿಸುವ ಬಹಳ ಜನ ಬುದ್ಧಿಜೀವಿಗಳು ನಮ್ಮ ಮಧ್ಯೆಯೇ ಕಾಣಸಿಗುತ್ತಾರೆ. ಅನ್ಯ ಧರ್ಮಗಳದ್ದಾದರೆ ಅದು ಆದರ್ಶ. ನಮ್ಮ ಧರ್ಮದ್ದಾದರೆ ಅದು ಸುಳ್ಳು/ಮೂಢನಂಬಿಕೆ ಇತ್ಯಾದಿ ಇತ್ಯಾದಿ ಕೊಂಕು ತೆಗೆಯುವ ಮಹಾನ್ ಬುದ್ಧಿವಂತರು. ಒಟ್ಟಿನಲ್ಲಿ ನಮ್ಮ ಶಿಕ್ಷಣ ಪದ್ಧತಿಯೂ ಅವರಿಗೆ ತಕ್ಕದಾಗಿಯೇ ಇದೆ. ಶಾಲೆಯಲ್ಲಿ ಮೂಲ ಧರ್ಮಗ್ರಂಥವನ್ನು ಬಿಟ್ಟು ಬೇರೆ ಎಲ್ಲವನ್ನೂ ಕಲಿಸಲಾಗುತ್ತದೆ ನಮಗೆ ಬಾಲ್ಯದಲ್ಲಿ.
ಸರಿ ನಮ್ಮ ರಾಮಾಯಣ, ಮಹಾಭಾರತ ನಡೆದೇ ಇಲ್ಲ ಎಂದಿಟ್ಟುಕೊಳ್ಳೋಣ. ಮಹಾಭಾರತದಲ್ಲಿ ಬರುವ ಭಗವದ್ಗೀತೆಯಲ್ಲಿನ ಮನುಷ್ಯನ ಜೀವನದ ಬಗ್ಗೆ ವಿವರಿಸಿದ್ದು ಸುಳ್ಳಾದರೂ ಅದರಲ್ಲಿ ಜೀವನದ ಆದರ್ಶಗಳು ಇಲ್ಲವೆ? ಭಗವದ್ಗೀತೆಯನ್ನು ಚಿಕ್ಕ ಮಕ್ಕಳಿರುವಾಗಲೇ ಓದಿಸಿದರೆ ಸುಳ್ಳು, ಮೋಸ, ವಂಚನೆ ಅಧರ್ಮದಿಂದ ಮಾನವನು ತನ್ನ ಜೀವನದಲ್ಲಿಯೇ ಅದಕ್ಕೆ ತಕ್ಕ ಪ್ರತಿಫಲ ಅನುಭವಿಸುತ್ತಾನೆ. ಅವನ ನಾಶವಾಗುತ್ತದೆ ಎನ್ನುವುದು ಮಕ್ಕಳ ಪ್ರಾಥಮಿಕ ಹಂತದಲ್ಲಿಯೇ ತಿಳಿಸಿಕೊಟ್ಟಂತಾಗುವುದಿಲ್ಲವೇ? ಆಗ ಸಹಜವಾಗಿ ಮಕ್ಕಳು ತಮ್ಮ ಜೀವನದ ಪ್ರಾರಂಭದಲ್ಲಿಯೇ ಒಳ್ಳೆಯ ಸಂಸ್ಕಾರವನ್ನು ಹೊಂದುತ್ತಾರೆ. ಧರ್ಮ-ಅಧರ್ಮ, ನ್ಯಾಯ-ಅನ್ಯಾಯ, ಪಾಪ-ಪುಣ್ಯ ಇವುಗಳ ಬಗ್ಗೆ ಅರಿಯುತ್ತಾರೆ. ಮಕ್ಕಳಿಗೆ ಒಳ್ಳೆಯ ಕಾರ್ಯಗಳಿಂದ ಒಳ್ಳೆಯ ಫಲ ಎಂದು ತಿಳಿಸಿಕೊಟ್ಟಂತಾಗುತ್ತದೆ. ಶಾಲೆಯಲ್ಲಿ ಶಿಕ್ಷಕರಿಗೂ ಮಕ್ಕಳಿಗೆ ಭಗವದ್ಗೀತೆಯಂತಹ ಗ್ರಂಥವನ್ನು ಹೇಳಿಕೊಟ್ಟಾಗ ಅವರಿಗೂ ಧರ್ಮದ ಬಗ್ಗೆ ಹೆಮ್ಮೆ ಎನಿಸುತ್ತದೆ.
ಭಗವದ್ಗೀತೆ ೭೦೦ ಪದ್ಯಗಳನ್ನು ಹೊಂದಿರುವ ಧರ್ಮಗ್ರಂಥವಾಗಿದ್ದು, ಇದು ಮಹಾಭಾರತದ ಮಹಾಕಾವ್ಯದ ಒಂದು ಸಣ್ಣ ಭಾಗವಾಗಿದೆ. ನಿರೂಪಣಾ ಸ್ವರದಲ್ಲಿ ಬರೆಯಲ್ಪಟ್ಟ ಈ ಗ್ರಂಥವು ಮೂಲಭೂತವಾಗಿ ಶ್ರೀಕೃಷ್ಣ ಮತ್ತು ಪಾಂಡವ ರಾಜಕುಮಾರ ಅರ್ಜುನನ ನಡುವಿನ ಯುದ್ಧ ಸಂದರ್ಭದ ಆಳವಾದ ಸಂಭಾಷಣೆಯಾಗಿದೆ. ನೈತಿಕ ಸಂದಿಗ್ಧತೆಯನ್ನು ಪರಿಹರಿಸಲು ಅರ್ಜುನನಿಗೆ ಸಹಾಯ ಮಾಡುವಂತೆ ಶ್ರೀಕೃಷ್ಣನ ಸಲಹೆಯನ್ನು ಈ ಪಠ್ಯ ಒಳಗೊಂಡಿದೆ. ಇದು ಮನುಷ್ಯನು ತನ್ನ ಜೀವನದುದ್ದಕ್ಕೂ ಎದುರಿಸುತ್ತಿರುವ ಕೆಲವು ಸಾಮಾನ್ಯ ಆಧ್ಯಾತ್ಮಿಕ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತದೆ. ಉದಾಹರಣೆಗೆ ಅವನ/ಅವಳ ಕರ್ತವ್ಯಗಳ ಪ್ರಾಮುಖ್ಯತೆ, ವಿಮೋಚನೆ ಸಾಧನೆ ಮತ್ತು ಇನ್ನೂ ಅನೇಕ. ಮಾನವ ಜೀವನದ ಅತ್ಯಂತ ಸಹಜ ಸಮಸ್ಯೆಗಳನ್ನು ಬಗೆಹರಿಸುವ ಆಳವಾದ ಗ್ರಂಥವು ಶಾಲೆಗೆ ಹೋಗುವ ಮಕ್ಕಳಿಗೆ ಹೇಗೆ ಅನುಪಯುಕ್ತವಾದೀತು?
ಇನ್ನು ನಮ್ಮ ಮಕ್ಕಳನ್ನು ಯಾವುದೋ ಆಂಗ್ಲ ಮಾಧ್ಯಮ ಖಾಸಗಿ ಶಾಲೆಗೆ ಕಳಿಸಿದರಂತೂ ನಮ್ಮ ಧರ್ಮದ ಸಂಸ್ಕಾರಗಳನ್ನೇ ಕಿತ್ತುಕೊಳ್ಳಲಾಗುತ್ತದೆ. ಆದರೂ ನಮ್ಮಲ್ಲಿ ಬಹಳಷ್ಟು ಜನ ಖಾಸಗಿ ಶಾಲೆಯಲ್ಲಿ ಓದಿದರೆ ಮಾತ್ರ ಮಕ್ಕಳು ನಿಜವಾಗಿ ಓದಿದಂತೆ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಬುದ್ಧಿವಂತರಾಗುವುದಿಲ್ಲ ಎಂದು ನಂಬಿಬಿಟ್ಟಿದ್ದಾರೆ. ಇವರಿಗೆ ಕೆಲಸ ಸರ್ಕಾರದ್ದು ಬೇಕು ಆದರೆ ಶಿಕ್ಷಣ ಖಾಸಗಿಯದ್ದಾಗಬೇಕು. ಇದೆಂಥಾ ನ್ಯಾಯ ಸ್ವಾಮಿ. ಈ ತರಹದ ಮನಸ್ಥಿತಿ ನಮ್ಮ ದೇಶದಲ್ಲಿ ಬಹಳ ವರ್ಷಗಳಿಂದ ಒಂದು ಟ್ರೆಂಡ್ ಆಗಿ ಬಿಟ್ಟಿದೆ. ಬೇರೆ ಬೇರೆ ದೇಶಗಳ ವಿಶ್ವವಿದ್ಯಾಲಯಗಳು ನಮ್ಮ ಭಗವದ್ಗೀತೆ ಅಧ್ಯಯನ ಮಾಡುವುದನ್ನು ಕಡ್ಡಾಯಗೊಳಿಸಿರುವಾಗ ನಮ್ಮ ದೇಶದಲ್ಲಿ ಭಗವದ್ಗೀತೆ ಅಧ್ಯಯನ ಮಾಡಲು ಏನು ಅಡ್ಡಿ? ಅಂದರೆ ನಮ್ಮ ವಿದ್ಯಾರ್ಥಿಗಳು ಭಗವದ್ಗೀತೆ ಹೇಳಿಕೊಡಲಾಗುತ್ತದೆ ಎಂದು ವಿದೇಶದಲ್ಲೇ ವ್ಯಾಸಂಗ ಮಾಡಬೇಕೆ?
ನಾವು ಭಗವದ್ಗೀತೆಯಂತಹ ಮಹಾನ್ ಗ್ರಂಥಕ್ಕೆ ಧರ್ಮ/ರಾಜಕಾರಣದ ಬಣ್ಣವನ್ನು ನೀಡಿದಾಗ ಸಮಸ್ಯೆ ಉದ್ಭವಿಸುತ್ತದೆ. ಜಾತ್ಯತೀತ ರಾಷ್ಟ್ರವಾಗಿ, ಎಲ್ಲವನ್ನೂ ಧರ್ಮದ ಮೂಲಕವೇ ನೋಡಬಾರದು. ದುರದೃಷ್ಟವಶಾತ್ ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವಲ್ಲಿ, ಪಟ್ಟಭದ್ರ ಹಿತಾಸಕ್ತಿ ಹೊಂದಿರುವವರು ವಿವಿಧ ಮಾಧ್ಯಮಗಳ ಮೂಲಕ ತಮ್ಮ ಧ್ವನಿಯನ್ನು ಎತ್ತಲು, ಒಂದು ಮಾರ್ಗ ಕಂಡುಕೊಳ್ಳುತ್ತಾರಷ್ಟೆ. ಆಗ ಮಾತ್ರ ನಮ್ಮ ಮುಂದಿನ ಪೀಳಿಗೆಯ ಸಮೃದ್ಧ ಭವಿಷ್ಯಕ್ಕಾಗಿ ಭಗವದ್ಗೀತೆಯಂತಹ ಗ್ರಂಥಗಳನ್ನು ಹೇಳಿಕೊಟ್ಟು, ಅವರಲ್ಲಿ ಉತ್ತಮ ನೆಲೆಯನ್ನು ಸ್ಥಾಪಿಸುವಲ್ಲಿ ನಾವು ಯಶಸ್ವಿಯಾಗಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ