ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ದಿನದಿಂದ ದಿನಕ್ಕೆ ಜಿಲ್ಲಾಡಳಿತವನ್ನು ನಿದ್ದೆಗಿಡಿಸುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ಕೇರ್ ಸೆಂಟರ್ ಮಾಡಲು ಸ್ಥಳ ಹುಡುಕಾಡಲಾಗುತ್ತಿದೆ. ಎಲ್ಲ ಆಸ್ಪತ್ರೆಗಳೂ ಕೊರೋನಾ ರೋಗಿಗಳಿಂದ ತುಂಬು ತುಳುಕುತ್ತಿರುವುದರಿಂದ ಕೊರೋನೇತರ ರೋಗಿಗಳು ಪರದಾಡುವಂತಾಗಿದೆ.
ಇಷ್ಟಾದರೂ ಕೊರೋನಾ ಸೋಂಕಿತರಿಗೆ ಸ್ಥಳ ಸಾಕಾಗುತ್ತಿಲ್ಲ. ಬೆಡ್ ವ್ಯವಸ್ಥೆ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಯಾವುದೇ ಉಪಯೋಗವಿಲ್ಲದೆ ಖಾಲಿ ಬಿದ್ದಿರುವ ಸುವರ್ಣ ವಿಧಾನಸೌಧವನ್ನು ಕೊರೋನಾ ಕೇರ್ ಸೆಂಟರ್ ಮಾಡಬಾರದೇಕೆ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.
ಸುವರ್ಣ ವಿಧಾನಸೌಧ ಅತ್ಯಂತ ಪವಿತ್ರವಾದ ಜಾಗ. ಆದರೆ ಅಲ್ಲಿ ಕಳೆದ 2-3 ವರ್ಷಗಳಿಂದ ಯಾವುದೇ ಚಟುವಟಿಕೆ ಇಲ್ಲದೆ ಹಾಳು ಕೊಂಪೆಯಂತಾಗಿದೆ. ಅಲ್ಲಿ ಕೊರೋನಾ ಕೇರ್ ಸೆಂಟರ್ ಮಾಡುವುದರಿಂದ ಅದರ ಬಳಕೆ ಸಾಧ್ಯವಾಗಲಿದೆ. ಜನರ ಜೀವಕ್ಕಿಂತ ಯಾವುದೂ ಮುಖ್ಯವಲ್ಲ. ಹಾಗಾಗಿ ಸುವರ್ಣ ವಿಧಾನಸೌಧವನ್ನು ಕೊರೋನಾ ಕೇರ್ ಸೆಂಟರ್ ಗೆ ಬಳಸುವುದರಿಂದ ಅದರ ಪಾವಿತ್ರ್ಯತೆಯೇನೂ ಹಾಳಾಗುವುದಿಲ್ಲ.
ಸುವರ್ಣ ವಿಧಾನಸೌಧವನ್ನು ಕೊರೋನಾ ಕೇರ್ ಸೆಂಟರ್ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ.
- ನಗರದಲ್ಲಿನ ಆಸ್ಪತ್ರೆಗಳನ್ನು ಬೇರೆ ರೋಗಿಗಳಿಗೆ ಬಳಸಬಹುದು
- ಸಾವಿರಾರು ಸೋಂಕಿತರನ್ನು ಒಂದೇ ಕಡೆ ಉಳಿಸಿ, ಚಿಕಿತ್ಸೆ ನೀಡಲು ಸುಲಭವಾಗಲಿದೆ
- ನಗರದಿಂದ, ಜನಸಮುದಾಯದಿಂದ ದೂರವಿರುವುದರಿಂದ ಸೋಂಕು ಹರಡುವ ಅಪಾಯವೂ ಇಲ್ಲ.
- ವಿಶಾಲವಾದ ಜಾಗವಿರುವುದರಿಂದ ಗಾಳಿ, ಬೆಳಕು ಸಾಕಷ್ಟಿರುವುದರಿಂದ ರೋಗಿಗಳಿಗೆ ಚಿಕಿತ್ಸೆ ಸುಲಭವಾಗಲಿದೆ.
- ವೈದ್ಯರು, ನರ್ಸ್ ಗಳು ಹಾಗೂ ಇತರೇ ಸಿಬ್ಬಂದಿ ಒಂದೇ ಕಡೆ ಇದ್ದು ಚಿಕಿತ್ಸೆ ಮಾಡಬಹುದು.
- ವೈದ್ಯಕೀಯ ಸಿಬ್ಬಂದಿ ಜನರ ಮಧ್ಯೆ ಓಡಾಡುವುದು ತಪ್ಪುತ್ತದೆ.
- ನಗರದಲ್ಲಿ ಅನಗತ್ಯ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರುತ್ತದೆ.
- ಸ್ವಚ್ಚತೆ, ರಾಸಾಯನಿಕ ಸಿಂಪರಣೆ ಸುಲಭವಾಗುತ್ತದೆ.
- ಸುವರ್ಣವಿಧಾನಸೌಧ ಈ ರೀತಿಯಲ್ಲಾದರೂ ಸದ್ಬಳಕೆಯಾಗಿ 400 -500 ಕೋಟಿ ರೂ. ವೆಚ್ಚ ಮಾಡಿದ್ದೂ ಸಾರ್ಥಕವಾಗುತ್ತದೆ.
- ಸೋಂಕಿತರ ಸಂಬಂಧಿಕರ ಓಡಾಟಕ್ಕೂ ಇದರಿಂದ ಅನುಕೂಲವಾಗಲಿದೆ.
ಈ ಬಗ್ಗೆ ಸರಕಾರ ತುರ್ತಾಗಿ ಚಿಂತನೆ ನಡೆಸಿ ಕ್ರಮ ತೆಗೆದುಕೊಂಡರೆ ಎಲ್ಲ ದೃಷ್ಟಿಯಿಂದಲೂ ಅನುಕೂಲವಾಗಬಹುದು.
ಸುವರ್ಣ ವಿಧಾನಸೌಧವನ್ನು ಕೊರೋನಾ ಕೇರ್ ಸಂಟರ್ ಮಾಡುವ ವಿಷಯದಲ್ಲಿ ಬೇರೇನಾದರೂ ಸಮಸ್ಯೆ ಅಥವಾ ತೊಂದರೆಗಳಿದ್ದರೆ ಪ್ರಗತಿವಾಹಿನಿ ಗಮನಕ್ಕೆ ತರಬಹುದು.
ವಾಟ್ಸಪ್ – 8197712235
(ಈ ಸುದ್ದಿಯನ್ನು ಆದಷ್ಟು ಹೆಚ್ಚು ಜನರಿಗೆ ಶೇರ್ ಮಾಡಿ. ಜನಾಭಿಪ್ರಾಯ ರೂಪಿತವಾಗಲಿ)
ದೇಶಾದ್ಯಂತ ಲಾಕ್ ಡೌನ್ ಜಾರಿ?, ಕೇಂದ್ರ ಸಂಪುಟ ಸಭೆ ಇಂದು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ